ಅಡವಿಸೋಮಾಪುರ (ತಡಸ): ಕುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಡವಿಸೋಮಾಪುರ ಗ್ರಾಮದಲ್ಲಿ ಎರಡು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಅಂಗನವಾಡಿ ನಡೆಯುತ್ತಿದ್ದು, ಮಳೆ ಬಂದರೆ ಹಂಚಿನ ಮನೆ ಸೋರುತ್ತಿದೆ. ಇದರಿಂದಾಗಿ ಮಕ್ಕಳ ಪೋಷಕರಲ್ಲಿ ಆತಂಕ ಮನೆ ಮಾಡಿದೆ.
ಅಡವಿಸೋಮಾಪುರ ಗ್ರಾಮದ 96ನೇ ಅಂಗನವಾಡಿ ಕೇಂದ್ರದ ಹಳೇ ಕಟ್ಟಡ ಎರಡು ವರ್ಷಗಳ ಹಿಂದೆ ಮಳೆಯಿಂದ ಹಾನಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು, ಮಕ್ಕಳನ್ನು ಬಾಡಿಗೆ ಹಂಚಿನ ಮನೆಗೆ ಸ್ಥಳಾಂತರಿಸಿದ್ದರು. ಎರಡು ವರ್ಷವಾದರೂ ನೂತನ ಕಟ್ಟಡ ನಿರ್ಮಿಸುವಲ್ಲಿ ಹಾಗೂ ಹಳೇ ಕಟ್ಟಡ ದುರಸ್ತಿ ಮಾಡುವಲ್ಲಿ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಮಕ್ಕಳಿಗೆ ನೀಡುವ ದವಸ ಧಾನ್ಯಗಳನ್ನು ಸಂಗ್ರಹಿಸಲು ಸೂಕ್ತ ಜಾಗವಿಲ್ಲ. ದವಸ ಧಾನ್ಯಗಳು, ಕೀಟ ಹಾಗೂ ಇಲಿಗಳ ಪಾಲಾಗುತ್ತಿವೆ. ಬಾಡಿಗೆ ಮನೆಯಲ್ಲಿ ಶೌಚಾಲಯದ ಸಮಸ್ಯೆ ಇದೆ. ಉತ್ತಮವಾದ ಮೈದಾನ ಸಹ ಇಲ್ಲ. ಹಂಚಿನ ಮನೆಯಾಗಿದ್ದರಿಂದ ಮಳೆ ಬಂದರೆ ಸೋರುವ ಸ್ಥಿತಿಯಿದೆ ಎಂದು ಗ್ರಾಮದ ಕಿರಣ್ ಕರೆಪ್ಪನವರ ದೂರಿದರು.
ಹಲವು ಬಾರಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಕ್ಕಳ ಪ್ರಾಣದ ಜೊತೆ ಅಧಿಕಾರಿಗಳು ಆಟವಾಡುತ್ತಿದ್ದಾರೆ. 25 ಮಕ್ಕಳು ಇರುವ ಅಂಗನವಾಡಿಯಲ್ಲಿ ಮೂಲ ಸೌಕರ್ಯ ಸಹ ಇಲ್ಲ ಎಂದು ಶೇಖಪ್ಪ ನವಲಗುಂದ ಅಳಲು ತೋಡಿಕೊಂಡರು.
ಅಡವಿ ಸೋಮಾಪುರ ಗ್ರಾಮದಲ್ಲಿರುವ ಅಂಗನವಾಡಿ ಹಳೇ ಕಟ್ಟಡ
‘ಗ್ರಾಮ ಪಂಚಾಯಿತಿಯಿಂದ ಕ್ರಿಯಾ ಯೋಜನೆ ತಯಾರಿಸಿ, ₹ 8 ಲಕ್ಷ ಮೌಲ್ಯದ ಕಾಮಗಾರಿಗೆ ಅವಕಾಶವಿದೆ. ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಕಾಮಗಾರಿ ಮಾಡಿಸಬಹುದು. ಇಲಾಖೆಯಿಂದ ₹ 12 ಲಕ್ಷ ಅನುದಾನ ನೀಡಬೇಕಿದ್ದು, ಇನ್ನೂ ಮಂಜೂರಾಗಿಲ್ಲ’ ಎಂದು ಸಿಡಿಪಿಒ ಗಣೇಶ ಲಿಂಗನಗೌಡ್ರ ಹೇಳಿದರು.