7
ಆಂತರಿಕ ಒಪ್ಪಂದದಂತೆ ರಾಜೀನಾಮೆಯ ಹೇಳಿಕೆ: ಕುತೂಹಲ ಕೆರಳಿಸಿದ ರಾಜಕೀಯ ನಡೆ

ಎಪಿಎಂಸಿಗೆ ಹಾವೇರಿ ರಾಜೀನಾಮೆ

Published:
Updated:
ಹಾವೇರಿ ಕೃಷಿ ಉತ್ಪನ್ನ ಸಮಿತಿ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ ಸ್ಥಾನದ ರಾಜೀನಾಮೆ ಪತ್ರವನ್ನು ಮಲ್ಲಿಕಾರ್ಜುನ (ರಾಜಣ್ಣ) ಸಿ. ಹಾವೇರಿ ಸೋಮವಾರ ಸಹಾಯಕ ಕಾರ್ಯದರ್ಶಿ ಮನೋಹರ ಬಾರ್ಕಿ ಅವರಿಗೆ ಸಲ್ಲಿಸಿದರು

ಹಾವೇರಿ: ಇಲ್ಲಿನ ಕೃಷಿ ಉತ್ಪನ್ನ ಸಮಿತಿ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ (ರಾಜಣ್ಣ) ಸಿ. ಹಾವೇರಿ ಸೋಮವಾರ ರಾಜೀನಾಮೆ ಸಲ್ಲಿಸಿದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ (ಬಿಜೆಪಿ) ಆಂತರಿಕ ಒಪ್ಪಂದದ ಪ್ರಕಾರ, ಹಿರಿಯರಾದ ಶಾಸಕ ಸಿ.ಎಂ. ಉದಾಸಿ, ಶಿವರಾಜ ಸಜ್ಜನರ, ಶಾಸಕ ನೆಹರು ಓಲೇಕಾರ ಮಾರ್ಗದರ್ಶನದಂತೆ ರಾಜೀನಾಮೆ ಸಲ್ಲಿಸಿದ್ದೇನೆ. ಯಾವುದೇ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಿದ್ದೇನೆ. ಆದರೆ, ಪಕ್ಷದ 8 ಸದಸ್ಯರಿಗೂ ಅವಕಾಶ ಕಲ್ಪಿಸುವ ನಿರ್ಣಯಕ್ಕೆ ಬದ್ಧನಾಗಿದ್ದು, ಈ ತನಕ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

2017 ಫೆಬ್ರುವರಿ 23ರಂದು ಅಧ್ಯಕ್ಷನಾಗಿದ್ದು, ಬಳಿಕ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಗರದ ಹಾನಗಲ್‌ ರಸ್ತೆ ಬದಿಯ ಜಾನುವಾರು ಮಾರುಕಟ್ಟೆಯಲ್ಲಿ ₹74 ಲಕ್ಷ ವೆಚ್ಚದಲ್ಲಿ 12 ಮಳಿಗೆಗಳು, ₹23 ಲಕ್ಷದಲ್ಲಿ ಕಾಂಪೌಂಡ್‌ ನಿರ್ಮಾಣ, ರೈತ ಭವನ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕ, ಕುರಿ ತೂಕದ ಯಂತ್ರ, ₹25 ಲಕ್ಷ ವೆಚ್ಚದಲ್ಲಿ ದೇವಿಹೊಸೂರಿನಲ್ಲಿ ಸಂತೆ ಮಾರುಕಟ್ಟೆ, ₹1.83 ಕೋಟಿ ವೆಚ್ಚದಲ್ಲಿ ತಲಾ 200 ಮೆಟ್ರಿಕ್‌ ಟನ್ ಸಾಮರ್ಥ್ಯದ ಐದು ಸೈಲೋ ನಿರ್ಮಾಣ, ₹30 ಲಕ್ಷದಲ್ಲಿ ಕಾಳುಕಡಿ ವರ್ಗೀಕರಣ (ಗ್ರೇಡಿಂಗ್) ವ್ಯವಸ್ಥೆ, ಗುತ್ತಲ ಎಪಿಎಂಸಿ ಉಪಮಾರುಕಟ್ಟೆಯಲ್ಲಿ 8 ಮಳಿಗೆಗಳು, ಕನವಳ್ಳಿ ಮತ್ತು ಕೋಣನತಂಬಗಿಯಲ್ಲಿ ₹13.85 ಲಕ್ಷ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣ ಕಾರ್ಯಗಳು ನಡೆದಿವೆ ಎಂದರು.

ರೈತರ ಪರ ಕಾರ್ಯಗಳು:
ತರಕಾರಿ ಹಾಗೂ ಹೂವಿನ ಹರಾಜಿನಲ್ಲಿ ಸುಧಾರಣೆ ಮಾಡಲಾಗಿದ್ದು, ತಾತ್ಕಾಲಿಕವಾಗಿ ಎಪಿಎಂಸಿಯಲ್ಲಿ ಅವಕಾಶವೂ ಕಲ್ಪಿಸಲಾಗಿತ್ತು, ಅಲ್ಲದೇ, ಹರಾಜುದಾರರಿಗೆ ಪರವಾನಗಿ ನೀಡಿದ್ದು, ಕಾನೂನು ಬದ್ಧಗೊಳಿಸಲಾಗಿದೆ. ಇದರಿಂದ ಎಪಿಎಂಸಿಗೂ ಸುಮಾರು ₹30ರಿಂದ 40 ಸಾವಿರ ಆದಾಯ ಬರುತ್ತಿದೆ ಎಂದರು.

ಹಸಿ ಮೆಣಸಿನಕಾಯಿ ಮಾರಾಟದಲ್ಲಿ (ಕಾಟಾ) ರೈತರಿಗೆ ಮೋಸವಾಗುತ್ತಿತ್ತು. ಕಾರ್ಯಾಚರಣೆ ನಡೆಸಿದ್ದು, ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಬಳಸುವಂತೆ ಮಾಡಲಾಗಿದೆ. ಗುತ್ತಲ ಉಪಮಾರುಕಟ್ಟೆ ಪ್ರಾಂಗಣ ಅಭಿವೃದ್ಧಿಗೆ ₹1 ಕೋಟಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಮುಂಬಯಿ ಮಾರುಕಟ್ಟೆ ಮಾದರಿಯಲ್ಲಿ ಹಸಿಮೆಣಸಿನಕಾಯಿಯ ಬೆಲೆ ಮೌಲ್ಯವರ್ಧನೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.

ಕನಸು: 
ಹೂವು, ಹಣ್ಣು, ತರಕಾರಿ ಮಾರುಕಟ್ಟೆಗೆ 5 ಎಕರೆ ಜಾಗ ದೊರಕಿಸಿಕೊಡಬೇಕು ಎಂಬುದು ನನ್ನ ಆಶಯವಾಗಿದ್ದು, ಸದಸ್ಯನಾಗಿ ಪ್ರಯತ್ನ ಮುಂದುವರಿಸುತ್ತೇನೆ ಎಂದರು. ಉಪಾಧ್ಯಕ್ಷೆ ವನಜಾಕ್ಷಿ ಬಾಳಿ, ಮುಖಂಡರಾದ ನಿಂಗಪ್ಪಣ್ಣ ಮೈಲಾರ, ರುದ್ರಪ್ಪ ಹಾವೇರಿ, ರಾಜಶೇಖರ ಶಿವಪುರ, ಅಶೋಕ ಎಲಿಗಾರ, ನಿರಂಜನ ಮರಡೂರ, ರಮೇಶ ಬಳ್ಳಾರಿ, ಗೌಡಪ್ಪ ಗೌಡ ಪಾಟೀಲ, ಸಿ.ಎಂ. ಕೋಡಿಹಳ್ಳಿ ಇದ್ದರು.  

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !