ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನಕ್ಕೆ ನೆರವು ನೀಡಲು ವಾಣಿಜ್ಯೋದ್ಯಮಿಗಳಿಗೆ ಮನವಿ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಹಣಕಾಸು ಸಮಿತಿ ಸಭೆ
Last Updated 17 ಡಿಸೆಂಬರ್ 2022, 10:37 IST
ಅಕ್ಷರ ಗಾತ್ರ

ಹಾವೇರಿ: ಜನವರಿ 6 ರಿಂದ 8ರವರೆಗೆ ಮೂರು ದಿನಗಳ ಕಾಲ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಘ-ಸಂಸ್ಥೆಗಳು, ವಾಣಿಜ್ಯೋದ್ಯಮಿಗಳು ನೆರವು ನೀಡುವಂತೆ ಹಣಕಾಸು ಸಮಿತಿಯ ಉಪಾಧ್ಯಕ್ಷರಾದ ಮಾಜಿ ಶಾಸಕರಾದ ಸುರೇಶಗೌಡ ಬಿ. ಪಾಟೀಲ ಹಾಗೂ ಜಿಲ್ಲಾಧಿಕಾರಿಗಳಾದ ರಘುನಂದನ ಮೂರ್ತಿ ಅವರು ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಣಕಾಸು ಸಮಿತಿ ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷ ಸುರೇಶಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸಮ್ಮೇಳನದ ವಿವಿಧ ಉಪ ಸಮಿತಿಗಳು ಸಲ್ಲಿಸಿದ ಪ್ರಸ್ತಾವ ಹಾಗೂ ಅನುದಾನ ಬೇಡಿಕೆಗಳನ್ನು ಪರಿಶೀಲಿಸಲಾಯಿತು.

ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ₹20 ಕೋಟಿ ಬಿಡುಗಡೆ ಮಾಡಿದೆ. ವಿವಿಧ ಉಪ ಸಮಿತಿಗಳು ₹32.87 ಕೋಟಿ ಅನುದಾನದ ಬೇಡಿಕೆ ಸಲ್ಲಿಸಿವೆ. ಅದ್ಧೂರಿಯಾಗಿ ಸಮ್ಮೇಳನ ನಡೆಸಲು ವಿವಿಧ ದಾನಿಗಳು, ವಾಣಿಜ್ಯೋದ್ಯಮಿಗಳಿಂದ ಹೆಚ್ಚಿನ ನೆರವು ಪಡೆಯುವುದು ಅವಶ್ಯವಾಗಿದೆ. ಊಟ, ವಸತಿ, ಸಾರಿಗೆ ಸೇರಿದಂತೆ ವಿವಿಧ ಜವಾಬ್ದಾರಿಯ ಪ್ರಾಯೋಜಕತ್ವ ವಹಿಸಿಕೊಳ್ಳಲು ಸ್ವಯಂ ಪ್ರೇರಣೆಯಿಂದ ಮುಂದೆ ಬರುವಂತೆ ದಾನಿಗಳಿಗೆ ಮನವಿ ಮಾಡಿಕೊಂಡರು.

ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರು, ವಿವಿಧ 24 ಸಮಿತಿಗಳು ಸಲ್ಲಿಸಿದ ಕಾರ್ಯಕ್ರಮಗಳು ಹಾಗೂ ಅನುದಾನದ ಬೇಡಿಕೆ ಮಾಹಿತಿಯನು ಸಭೆಗೆ ವಿವರಿಸಿದರು. ಸರ್ಕಾರ ₹20 ಕೋಟಿ ಅನುದಾನ ನೀಡಿದೆ. ಸರ್ಕಾರಿ ನೌಕರರ ಒಂದು ದಿನದ ವೇತನದಿಂದ ₹1 ಕೋಟಿ ನೆರವು ದೊರೆಯಲಿದೆ. ಸಾಹಿತ್ಯ ಪರಿಷತ್ತಿನ 20 ಸಾವಿರ ಸದಸ್ಯರು ನೋಂದಾಯಿಸಿಕೊಂಡರೆ ₹1 ಕೋಟಿ ನೆರವು ನಂತರ ದೊರೆಯಲಿದೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸುರೇಶಗೌಡ ಪಾಟೀಲ ಅವರು, ಬ್ಯಾಡಗಿಯಲ್ಲಿ ಕಲ್ಯಾಣ ಮಂಟಪ ಉಚಿತವಾಗಿ ನೀಡಲಾಗುವುದು. ವಾರದೊಳಗೆ ಹಣಕಾಸಿನ ನೆರವು ಕುರಿತಂತೆ ಘೋಷಿಸಲಾಗುವುದು, ಹೆಚ್ಚಿನ ಅನುದಾನ ಬಿಡುಗಡೆಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಅನುಮೋದನೆ

ವಸತಿ, ಸಾರಿಗೆ, ಊಟೋಪಚಾರ, ಪ್ರಚಾರ, ವೇದಿಕೆ ಸೇರಿದಂತೆ ವಿವಿಧ ಸಮಿತಿಗಳಿಂದ ₹32.86 ಕೋಟಿ ಮೊತ್ತದ ಪ್ರಸ್ತಾವ ಸ್ವೀಕರಿಸಲಾಗಿದ್ದು, ಸಮಿತಿಯಲ್ಲಿ ಕೂಲಕುಂಷವಾಗಿ ಪರಿಶೀಲಿಸಿ ₹19.93 ಕೋಟಿ ಮೊತ್ತಕ್ಕೆ ಸೀಮಿತಗೊಳಿಸಿ ಅನುಮೋದನೆ ನೀಡಲಾಯಿತು.

‘ವೇದಿಕೆ ನಿರ್ಮಾಣ ಮತ್ತು ಆಹಾರಕ್ಕೆ ₹10 ಕೋಟಿ’

ವೇದಿಕೆ ನಿರ್ಮಾಣ ಸಮಿತಿಗೆ ₹5 ಕೋಟಿ, ಆಹಾರ ಸಮಿತಿಗೆ ₹5 ಕೋಟಿ, ಮೆರವಣಿಗೆ ಸಮಿತಿಗೆ, ₹40 ಲಕ್ಷ, ವಸತಿ ಸಮಿತಿಗೆ ₹2 ಕೋಟಿ, ಆರೋಗ್ಯ ಮತ್ತು ನೈಮಲ್ಯಕ್ಕೆ ₹40 ಲಕ್ಷ, ಸಾಂಸ್ಕೃತಿಕ ತಂಡಗಳ ಆಯ್ಕೆ ಸಮಿತಿಗೆ ₹42 ಲಕ್ಷ, ಸಾರಿಗೆ ಸಮಿತಿಗೆ ₹1 ಕೋಟಿ, ನಗರ ಅಲಂಕಾರ ವಿದ್ಯುತ್ ಸಮಿತಿಗೆ ₹50 ಲಕ್ಷ, ಪುಸ್ತಕ ಮಳಿಗೆ ವಸ್ತುಪ್ರದರ್ಶನ ಸಮಿತಿಗೆ 5 ಲಕ್ಷ, ಮಾಧ್ಯಮ ಜಾಹೀರಾತು ಸೇರಿದಂತೆ ಪ್ರಚಾರ ಸಮಿತಿಗೆ ₹1.10 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ.

ಪ್ರತಿನಿಧಿಗಳ ನೋಂದಣಿ ಸಮಿತಿಗೆ ₹62.50 ಲಕ್ಷ, ಮಹಿಳಾ ಶಕ್ತಿ ಸಮಿತಿಗೆ ₹2 ಲಕ್ಷ, ಆಮಂತ್ರಣ ಪತ್ರಿಕೆ ಸಮಿತಿಗೆ ₹4.50 ಲಕ್ಷ, ಸ್ಮರಣಿಕೆಗೆ ₹25 ಲಕ್ಷ, ಸ್ಮರಣ ಸಂಚಿಕೆ ಹಾಗೂ 86 ಪುಸ್ತಕಗಳ ಮುದ್ರಣಕ್ಕಾಗಿ ₹40 ಲಕ್ಷ, ವೇದಿಕೆ ನಿರ್ವಹಣೆ, ಶಾಲು ಹಾಗೂ ಮಾಲೆಗಾಗಿ ₹5 ಲಕ್ಷ, ಸಿಸಿಟಿವಿ ಅಳವಡಿಕೆ ಸೇರಿದಂತೆ ಶಿಷ್ಟಾಚಾರ ಮತ್ತು ರಕ್ಷಣಾ ಸಮಿತಿಗೆ ₹40 ಲಕ್ಷ, ಮಾಧ್ಯಮ ಕೇಂದ್ರ ಸ್ಥಾಪನೆ ಸೇರಿದಂತೆ ಮಾಧ್ಯಮ ಸಮನ್ವಯ ಸಮಿತಿಗೆ ₹1 ಕೋಟಿ, ಸ್ವಯಂ ಸೇವಕರ ಆಯ್ಕೆ ಮತ್ತು ಉಸ್ತುವಾರಿಗೆ ₹22.50 ಲಕ್ಷ, ಶಿಷ್ಟಾಚಾರ ಪಾಲನೆಗೆ ₹5 ಲಕ್ಷ, ಪಾಸ್ ಮತ್ತು ಬ್ಯಾಡ್ಜ್ ಮುದ್ರಣ ಸಮಿತಿಗೆ ₹20 ಲಕ್ಷ, ಕನ್ನಡ ರಥ ಸಂಚಾರಕ್ಕೆ ₹25 ಲಕ್ಷ ನಿಗದಿಗೊಳಿಸಲಾಗಿದೆ.

ಕನ್ನಡ ರಥ ಸಂಚಾರ ಸಂದರ್ಭದಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಕಲಾ ತಂಡಗಳಿಗೆ ಗೌರವಧನವಾಗಿ ₹30 ಲಕ್ಷ, ಸಮ್ಮೇಳನ ನಡೆಯುವ ಜಾಗ ನೀಡಿರುವ ರೈತರಿಗೆ ಪರಿಹಾರವಾಗಿ ₹25 ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆ. ಈ ಅನುದಾನದಲ್ಲೇ ಜಿಎಸ್.ಟಿ. ತೆರಿಗೆಗಳು, ಇತರ ವೆಚ್ಚ ಭರಿಸಲು ಸಮಿತಿಯ ಸದಸ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT