ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಶಾಲೆ ಪುನರಾರಂಭಕ್ಕೆ ಸಜ್ಜಾಗದ ಕೊಠಡಿಗಳು

ಗಾಳಿ–ಮಳೆಗೆ ಶಿಥಿಲಗೊಂಡ ಕಟ್ಟಡಗಳು: ಆಮೆಗತಿಯಲ್ಲಿ ಸಾಗುತ್ತಿರುವ ದುರಸ್ತಿ– ಮರುನಿರ್ಮಾಣ ಕಾರ್ಯ
Last Updated 16 ಮೇ 2022, 4:01 IST
ಅಕ್ಷರ ಗಾತ್ರ

ಹಾವೇರಿ: ಶಾಲೆಗಳ ಪುನರಾರಂಭಕ್ಕೆ ಶಿಕ್ಷಣ ಇಲಾಖೆ ಸಜ್ಜಾಗಿದೆ. ಆದರೆ, ಗಾಳಿ–ಮಳೆಯಿಂದ ಶಿಥಿಲಗೊಂಡ ನೂರಾರು ಸರ್ಕಾರಿ ಶಾಲಾ ಕೊಠಡಿಗಳು ಮಕ್ಕಳನ್ನು ಸ್ವಾಗತಿಸಲು ಇನ್ನೂ ಅಣಿಯಾಗಿಲ್ಲ. ಜತೆಗೆ ಶೇ 70ರಷ್ಟು ಪಠ್ಯಪುಸ್ತಕಗಳು ಇನ್ನೂ ಪೂರೈಕೆಯಾಗಿಲ್ಲ.

ಹಾರಿ ಹೋದ ಶೀಟುಗಳು, ಕುಸಿದು ಬಿದ್ದ ಕಟ್ಟಡಗಳು, ಬಿರುಕು ಬಿಟ್ಟ ಗೋಡೆಗಳು, ಸೋರುವ ಚಾವಣಿಗಳು, ನೇತಾಡುವ ಮರದ ತೀರುಗಳು, ಒಡೆದು ಹೋದ ಹೆಂಚುಗಳು, ಉದುರುತ್ತಿರುವ ಸಿಮೆಂಟ್‌... ಹೀಗೆ ನಾನಾ ತರಹದ ಸಮಸ್ಯೆಗಳಿಗೆ ಸರ್ಕಾರಿ ಶಾಲಾ ಕೊಠಡಿಗಳು ತುತ್ತಾಗಿವೆ. ದುರಸ್ತಿ ಮತ್ತು ಮರುನಿರ್ಮಾಣದ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿರುವುದು ಪಾಲಕರು ಮತ್ತು ಮಕ್ಕಳ ಬೇಸರಕ್ಕೆ ಕಾರಣವಾಗಿದೆ.

ಹಾವೇರಿ ಜಿಲ್ಲೆಯಲ್ಲಿ 1,160 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, 141 ಸರ್ಕಾರಿ ಪ್ರೌಢಶಾಲೆಗಳಿದ್ದು, ಒಟ್ಟು 1,57,795 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 7,761 ತರಗತಿ ಕೊಠಡಿಗಳ ಪೈಕಿ, 5,196 ಕೊಠಡಿಗಳು ಸುಸ್ಥಿತಿಯಲ್ಲಿವೆ. 1,097 ಕೊಠಡಿಗಳು ಸಣ್ಣ–ಪುಟ್ಟ ರಿಪೇರಿಗೆ ಕಾದಿದ್ದರೆ, 1,468 ಕೊಠಡಿಗಳಿಗೆ ದೊಡ್ಡಮಟ್ಟದ ದುರಸ್ತಿ ಕಾರ್ಯವಾಗಬೇಕಿದೆ.

2020–21ನೇ ಸಾಲಿನಲ್ಲಿ ಜಿಲ್ಲಾಧಿಕಾರಿ ಪಂಚಾಯತ್‌ ರಾಜ್‌ ಇಲಾಖೆಗೆ ₹7.21 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಜಾರಿಯಲ್ಲಿದೆ. ಆರ್‌ಐಡಿಎಫ್‌–25 ಯೋಜನೆಯಡಿ 265 ಕೊಠಡಿಗಳ ಮರುನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ನೆರೆಯಿಂದ ಹಾನಿಯಾದ ಕೊಠಡಿಗಳ ದುರಸ್ತಿಗೆ ವಿಪತ್ತು ಪರಿಹಾರ ನಿಧಿಯಿಂದ ₹7.27 ಕೋಟಿ ಬಿಡುಗಡೆಯಾಗಿದೆ. ರಾಜ್ಯ ವಲಯದ ಮುಂದುವರಿದ ಯೋಜನೆಯಡಿ ಒಟ್ಟು ₹76 ಲಕ್ಷ ಕೊಠಡಿಗಳ ದುರಸ್ತಿಗೆ ಬಿಡುಗಡೆಯಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಅಮೆಗತಿಯಲ್ಲಿ ಮರುನಿರ್ಮಾಣ: ಶಿಗ್ಗಾವಿ ತಾಲ್ಲೂಕಿನಲ್ಲಿ ಸಂಪೂರ್ಣ ಶಿಥಿಲಗೊಂಡ 133 ಶಾಲಾ ಕೊಠಡಿಗಳನ್ನು ಮರುನಿರ್ಮಾಣ ಮಾಡಲು ಮಾರ್ಚ್‌ ತಿಂಗಳಲ್ಲಿ ₹20 ಕೋಟಿ ಅನುದಾನ ಬಿಡುಗಡೆಯಾಗಿದೆ. ಮರುನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ವಿಶೇಷ ಅಭಿವೃದ್ಧಿ ಯೋಜನೆಯಡಿ (ಎಸ್‌ಡಿಪಿ) ₹1.44 ಕೋಟಿ ಬಿಡುಗಡೆಯಾಗಿದ್ದು, ಪಂಚಾಯತ್‌ರಾಜ್‌ ಇಲಾಖೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಟೆಂಡರ್‌ ಕಾರ್ಯ ಜಾರಿಯಲ್ಲಿದೆ. ಐದು ವಿಧಾನಸಭಾ ಕ್ಷೇತ್ರಗಳಲ್ಲಿ (ಹಾನಗಲ್‌ ಹೊರತುಪಡಿಸಿ) ತಲಾ ಒಂದು ಶತಮಾನೋತ್ಸವ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಒಟ್ಟು ₹82.50 ಲಕ್ಷ ಅನುದಾನ ಬಿಡುಗಡೆಯಾಗಿದೆ.

‘7 ತಾಲ್ಲೂಕುಗಳಲ್ಲಿ ಸಂಪೂರ್ಣ ಶಿಥಿಲಗೊಂಡ ಸುಮಾರು 600 ಕೊಠಡಿಗಳ ಮರುನಿರ್ಮಾಣಕ್ಕೆ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಗೆ ಅನುದಾನ ಬಿಡುಗಡೆಗಾಗಿ ಪ್ರಸ್ತಾವ ಕಳುಹಿಸಲಾಗಿದೆ’ ಎನ್ನುತ್ತಾರೆ ಡಿಡಿಪಿಐ ಜಗದೀಶ್ವರ.

ನರೇಗಾ ಯೋಜನೆಯಡಿ, ₹4.30 ಕೋಟಿ ವೆಚ್ಚದಲ್ಲಿ 100 ಶೌಚಾಲಯಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಬಹುತೇಕ ಶಾಲೆಗಳಲ್ಲಿ ನಿರ್ವಹಣೆಯ ಕೊರತೆಯಿಂದ ಶೌಚಾಲಯಗಳು ಗಬ್ಬು ನಾರುತ್ತಿವೆ. ಕೆಲವಡೆ ನೀರಿನ ಕೊರತೆಯೂ ಕಾಡುತ್ತಿದೆ. ಶೌಚಾಲಯ ನಿರ್ಮಾಣಕ್ಕೆ ತೋರಿದ ಕಾಳಜಿಯನ್ನು ನಿರ್ವಹಣೆಗೂ ಕೊಡಬೇಕಿದೆ ಎಂಬುದು ವಿದ್ಯಾರ್ಥಿಗಳ ಒತ್ತಾಯ.

4 ಕೊಠಡಿಗಳು ಶಿಥಿಲ
ರಟ್ಟೀಹಳ್ಳಿ:
ಪಟ್ಟಣದ ಸರ್ಕಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 1ರಿಂದ 8ನೇ ತರಗತಿವರಗೆ ಒಟ್ಟು 345 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ನೂತನವಾಗಿ ಎರಡು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇನ್ನೂ ನಾಲ್ಕು ಕೊಠಡಿಗಳು ಶಿಥಿಲವಾಗಿವೆ. ಅವುಗಳನ್ನು ಕೆಡವಿ ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಬೇಕಿದೆ.

ಶಿಥಿಲಗೊಂಡ ಕೊಠಡಿಗಳನ್ನು ಕೆಡವಿ ಹೊಸದಾಗಿ ನಿರ್ಮಿಸಿಕೊಡುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಮೂವರು ಶಿಕ್ಷಕರ ಕೊರತೆ ಇದೆ. ಇಲಾಖೆಯವರು ಶೈಕ್ಷಣಿಕ ವರ್ಷ ಪ್ರಾರಂಭಗೊಳ್ಳುವುದರ ಒಳಗಾಗಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ಪೂರೈಸಬೇಕು’ ಎನ್ನುತ್ತಾರೆ ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಜಯ ಅಂಗಡಿ.

ಶಿಥಿಲ ಕಟ್ಟಡ ತೆರವುಗೊಳಿಸಿ
ಶಿಗ್ಗಾವಿ:
ತಾಲ್ಲೂಕಿನ ಬಂಕಾಪುರ ಪಟ್ಟಣದ ಅಂಕದಖಣ ಶಾಲೆ ಸಂಪೂರ್ಣ ಶಿಥಿಲಾವಸ್ಥೆಗೊಂಡಿದ್ದು, ಅಪಾಯ ಆಹ್ವಾನಿಸುತ್ತಿದೆ. ಶಾಲಾ ಮೈದಾನದಲ್ಲಿರುವ ಈ ಹಳೆಯ ಕಟ್ಟಡವನ್ನು ತೆರವುಗೊಳಿಸದ ಕಾರಣ ವಿದ್ಯಾರ್ಥಿಗಳಿಗೆ ಆತಂಕ ಮನೆ ಮಾಡಿದೆ.

ಸರ್ಕಾರ ಮೂರು ಹೊಸ ಕೊಠಡಿಗಳನ್ನು ಮಾತ್ರ ನಿರ್ಮಿಸಿದೆ. ಅದರಲ್ಲಿ ಪಾಠ, ಊಟ, ಅಕ್ಷರ ದಾಸೋಹ ಆಹಾರ ಸಾಮಗ್ರಿ ಸಂಗ್ರಹ, ಕಚೇರಿ ಕೆಲಸ ಸೇರಿದಂತೆ ಎಲ್ಲವು ಈ ಕೊಠಡಿಯಲ್ಲಿ ನಡೆಯುತ್ತಿವೆ. ಹೀಗಾಗಿ ಪಾಠ, ಊಟಕ್ಕೆ ನಿತ್ಯ ತೊಂದರೆಯಾಗುತ್ತಿದೆ ಎಂದು ಮಕ್ಕಳ ಪಾಲಕರು ಅಳಲನ್ನು ವ್ಯಕ್ತಪಡಿಸಿದರು.

103 ಸಹಶಿಕ್ಷಕರ ಹುದ್ದೆಗಳು ಖಾಲಿ!
ಸವಣೂರು:
ತಾಲ್ಲೂಕಿನಲ್ಲಿ 80 ಸಂಪೂರ್ಣ ಶಿಥಿಲಗೊಂಡ ಕೊಠಡಿಗಳ ಪೈಕಿ 42 ಕೊಠಡಿಗಳನ್ನು ನೆಲಸಮಗೊಳಿಸಿ ಹೊಸ ಕೊಠಡಿಗಳನ್ನು ನಿರ್ಮಿಸಲಾಗಿದೆ. ಉಳಿದ 38 ಶಿಥಿಲ ಕೊಠಡಿಗಳಲ್ಲಿ 10 ಕೊಠಡಿಗಳು ಪ್ರಸಕ್ತ ವರ್ಷದಲ್ಲಿ ಕಾಮಗಾರಿ ನಡೆಯುತ್ತಿವೆ. ಇನ್ನು ಉಳಿದ 28 ಕೊಠಡಿಗಳ ನಿರ್ಮಾಣಕ್ಕೆ ಮತ್ತು 26 ಕೊಠಡಿಗಳ ಸಣ್ಣ ಪುಟ್ಟ ದುರಸ್ತಿಗೆ ಕಾಯುತ್ತಿದ್ದು, ಗ್ರಾಮ ಪಂಚಾಯ್ತಿ ವತಿಯಿಂದ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.

‘ತಾಲ್ಲೂಕಿನ ಸರ್ಕಾರಿ ಶಾಲೆಯಲ್ಲಿ ಮಂಜೂರಾದ 693 ಶಿಕ್ಷಕರ ಹುದ್ದೆಗಳಲ್ಲಿ 103 ಸಹಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅದಕ್ಕೆ ಪೂರಕವಾಗಿ ಈಗಾಗಲೇ ಪ್ರಥಮ ಹಂತದಲ್ಲಿ 85 ಸಹಶಿಕ್ಷಕರನ್ನು ಎಸ್‌ಡಿಎಂಸಿ ಹಾಗೂ ಮುಖ್ಯ ಶಿಕ್ಷಕರ ಸಮ್ಮುಖದಲ್ಲಿ ಸ್ಥಳೀಯರನ್ನು ಆಯ್ಕೆ ಮಾಡಿಕೊಳ್ಳಲು ಈಗಾಗಲೇ ಸೂಚಿಸಲಾಗಿದೆ’ ಎಂದು ಬಿಇಒ ಐ.ಬಿ.ಬೆನಕೊಪ್ಪ ತಿಳಿಸಿದ್ದಾರೆ.

ನೆಲಸಮಕ್ಕೆ ಕಾದಿರುವ 181 ಕೊಠಡಿಗಳು
ರಾಣೆಬೆನ್ನೂರು:
‘2021-22ನೇ ಸಾಲಿನಲ್ಲಿ ಒಟ್ಟು ಕೊಠಡಿಗಳ ಸಂಖ್ಯೆ 1529, ಉತ್ತಮ ಕೊಠಡಿಗಳು 955 (ಹಸಿರು ಬಣ್ಣ), ಸಣ್ಣಪುಟ್ಟ ದುರಸ್ತಿ 204 (ಹಳದಿ), ದೊಡ್ಡ ದುರಸ್ತಿ 178 (ಕೇಸರಿ), ನೆಲಸಮ ಮಾಡಬೇಕಾದ ಕೊಠಡಿಗಳ ಸಂಖ್ಯೆ 181 (ಕೆಂಪು ಬಣ್ಣ) ಹಾಗೂ ಹೊಸದಾಗಿ ಬೇಡಿಕೆ ಇರುವ ಕೊಠಡಿಗಳ ಸಂಖ್ಯೆ 230 ಇರುತ್ತವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ ಜೆ.ಎನ್‌. ತಿಳಿಸಿದರು.

‘ಪ್ರಸಕ್ತ ಸಾಲಿಗೆ ಶೇ‌ 25ರಷ್ಟು ಪುಸ್ತಕಗಳು ಬಂದಿವೆ. ಈಗಾಗಲೇ ಶಾಲೆಗಳಿಗೆ ವಿತರಣೆ ಮಾಡಲಾಗುತ್ತಿದೆ. ಮುದ್ರಣ ಕಾರ್ಯ ವಿಳಂಬವಾಗಿದ್ದಕ್ಕೆ ಪುಸ್ತಕಗಳು ಪೂರೈಕೆಯಲ್ಲಿ ವಿಳಂಬವಾಗಿದೆ. ಇದರಿಂದ ಮಕ್ಕಳಿಗೆ ವ್ಯಾಸಂಗಕ್ಕೆ ತೊಂದರೆಯಾಗಬಾರದು ಎಂದು ಶಾಲೆಗಳಲ್ಲಿ ‘ಬುಕ್‌ ಬ್ಯಾಂಕ್‌’ ಬಳಕೆ ಮಾಡಲು ತಿಳಿಸಲಾಗಿದೆ’ ಎಂದರು.

ರಾಣೆಬೆನ್ನೂರು ತಾಲ್ಲೂಕಿನಲ್ಲಿ 141 ಶಾಲೆಗಳಿಗೆ ಕಾಂಪೌಂಡ್‌ ಇಲ್ಲ. 372 ಶಾಲೆಗಳಿಗೆ ವಿದ್ಯುತ್‌ ಸಂಪರ್ಕವಿಲ್ಲ. 81 ಬಾಲಕರ ಶೌಚಾಲಯಗಳು ಮತ್ತು 89 ಬಾಲಕಿಯರ ಶೌಚಾಲಯಗಳು ದುರಸ್ತಿಗೆ ಕಾದಿವೆ. ಬಾಲಕರಿಗೆ 276 ಮತ್ತು ಬಾಲಕಿಯರಿಗೆ 268 ಶೌಚಾಲಯಗಳಿಗೆ ಬೇಡಿಕೆಯಿದೆ.

ಬಿಸಿಯೂಟ ಕೊಠಡಿಗಳ ಅಭಾವ
ಹಾನಗಲ್:
ಜಿಲ್ಲೆಯಲ್ಲಿಯೇ ಅಧಿಕ ಮಳೆಯಾಗುವ ಹಾನಗಲ್ ತಾಲ್ಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ನಿರಂತರವಾಗಿ ಹಾನಿಗೊಳ್ಳುತ್ತವೆ. ಹೊಸ ಕೊಠಡಿಗಳ ನಿರ್ಮಾಣ ಮತ್ತು ಶಿಥಿಲ ಕಟ್ಟಡಗಳ ದುರಸ್ತಿಗಾಗಿ ಸಿಗುವ ಅನುದಾನ ಅರೆಕಾಸಿನ ಮಜ್ಜಿಗೆಯಂತಾಗಿದೆ.

‘ಕಳೆದ ವರ್ಷ 10 ಶಾಲೆಗಳಿಗೆ ಬಿಸಿಯೂಟ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. 82 ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಬಿಸಿಯೂಟ ಕೊಠಡಿಗಳ ಅಗತ್ಯವಿದೆ’ ಎಂದು ಅಕ್ಷರ ದಾಸೋಹ ತಾಲ್ಲೂಕು ಸಹಾಯಕ ನಿರ್ದೇಶಕ ಶೇಖರ ಹಂಚಿನಮನಿ ತಿಳಿಸಿದ್ದಾರೆ.

ಶಿಥಿಲಾವಸ್ಥೆಯಲ್ಲಿ75 ಕೊಠಡಿ
ಬ್ಯಾಡಗಿ: ‘
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಐದು ಪ್ರೌಢಶಾಲೆಯ 6 ಕೊಠಡಿಗಳು, 49 ಪ್ರಾಥಮಿಕ ಶಾಲೆಯ 69 ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಹೆಚ್ಚುವರಿಯಾಗಿ ಏಳು ಶಾಲೆಯ 19 ಕೊಠಡಿಗಳು ದುರಸ್ತಿ ಹಂತದಲ್ಲಿವೆ’ ಎಂದು ಬಿಇಒ ಸತ್ಯನಾರಾಯಣ ಕೆ.ಎಂ ತಿಳಿಸಿದರು.

‘ಕದರಮಂಡಲಗಿ ಗ್ರಾಮದ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯ ಹಳೆಯ ಕಟ್ಟಡವನ್ನು ಕೆಡವಿ ಶಾಸಕರ ಅನುದಾನದಲ್ಲಿ 3 ಹಾಗೂ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ 5 ಕೊಠಡಿಗಳನ್ನು ನಿರ್ಮಿಸಿದ್ದು, ಕಟ್ಟಡ ಕಾಮಗಾರಿ ಪೂರ್ಣಗೊಂಡಿವೆ’ ಎಂದು ಹಳೆಯ ವಿದ್ಯಾರ್ಥಿ ಸಂಘದ ಶಿವು ಉಜನಿ ಹೇಳಿದರು.

**

ಕಳೆದ ಸಾಲಿನಲ್ಲಿ 53 ಶಾಲಾ ಕೊಠಡಿಗಳ ನಿರ್ಮಾಣವಾಗಿದೆ. ಇನ್ನೂ 143 ಕೊಠಡಿಗಳನ್ನು ನೆಲಸಮ ಮಾಡಿ ಮರುನಿರ್ಮಾಣ ಮಾಡಬೇಕಿದೆ.
- ಡಾ.ಬಿ.ಎಂ.ಬೇವಿನಮರದ, ಕ್ಷೇತ್ರ ಸಮನ್ವಯಾಧಿಕಾರಿ, ಹಾನಗಲ್‌

**

ಬಂಕಾಪುರ ಶಾಲೆಗೆ ಮೂರು ಹೊಸ ಕೊಠಡಿ, ಕಾಂಪೌಂಡ್‌ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು.
- ಎನ್.ವಿ.ಪದ್ಮಾ, ಅಂಕದಖಣದ ನಿವಾಸಿ, ಬಂಕಾಪುರ

**

ಪ್ರತಿ ಶಾಲೆಗಳಲ್ಲಿ ಶೌಚಾಲಯಗಳಿದ್ದು, ಇನ್ನೂ ಹೆಚ್ಚುವರಿಯಾಗಿ 102 ಶೌಚಾಲಯ ನಿರ್ಮಿಸಲು ತಾ.ಪಂಗೆ ಪ್ರಸ್ತಾವ ಸಲ್ಲಿಸಲಾಗಿದೆ.
- ಐ.ಬಿ.ಬೆನಕೊಪ್ಪ, ಸವಣೂರು ಬಿಇಒ

**

ಶಿಥಿಲ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚಿಸಿದ್ದೇನೆ. ಕೆಲವೆಡೆ ಹೊಸ ಕೊಠಡಿ ನಿರ್ಮಿಸಿದ್ದು, ಮಕ್ಕಳ ಕಲಿಕೆಗೆ ತೊಂದರೆಯಾಗುವುದಿಲ್ಲ
- ಜಗದೀಶ್ವರ, ಡಿಡಿಪಿಐ, ಹಾವೇರಿ

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಎಂ.ವಿ.ಗಾಡದ, ಪ್ರಮೀಳಾ ಹುನಗುಂದ, ಮುಕ್ತೇಶ್ವರ ಕೂರಗುಂದಮಠ, ಮಾರುತಿ ಪೇಟಕರ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT