ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿಗೆ ನಾನು ಹೆದರಲಿಲ್ಲ, ಮಕ್ಕಳಿಗೆ ಪರೀಕ್ಷೆ ಬರೆಯಲಾಗಲಿಲ್ಲ: ಆಶಾ ಕಾರ್ಯಕರ್ತೆ

Last Updated 21 ಜುಲೈ 2020, 19:30 IST
ಅಕ್ಷರ ಗಾತ್ರ

ಹಾವೇರಿ: ‘ನನಗೆ ಕೊರೊನಾ ಸೋಂಕು ಬಂದ ಕಾರಣ, ನನ್ನ ಇಬ್ಬರು ಮಕ್ಕಳು (ಅವಳಿ–ಜವಳಿ) ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವುದರಿಂದ ವಂಚಿತರಾದರು. ಈ ನೋವು ಸದಾ ಕಾಡುತ್ತಿದೆ’ ಎಂದು ಕೋವಿಡ್‌ ಗೆದ್ದು ಬಂದ ಹಿರೇಕೆರೂರು ತಾಲ್ಲೂಕು ಎಮ್ಮಿಗನೂರಿನ ಆಶಾ ಕಾರ್ಯಕರ್ತೆ ವಿದ್ಯಾ ಚಿಕ್ಕಬಾಸೂರು ಬೇಸರ ವ್ಯಕ್ತಪಡಿಸಿದರು.

ಪ್ರಾಥಮಿಕ ಸಂಪರ್ಕದಲ್ಲಿದ್ದ ನನ್ನ ಮಕ್ಕಳಿಂದ ಬೇರೆ ಮಕ್ಕಳಿಗೆ ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ಮತ್ತು ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಪರೀಕ್ಷೆಗೆ ಕಳುಹಿಸಲಿಲ್ಲ. ನನ್ನ ಮಕ್ಕಳನ್ನು ಇತರರು ಅನುಮಾನದಿಂದ ನೋಡಿದರೆ ಮಕ್ಕಳೂ ನೋವು ಪಡುತ್ತಾರೆ ಮತ್ತು ನಾನೂ ಸಂಕಟ ಪಡಬೇಕಾಗುತ್ತದೆ ಎಂದು ಮನೆಯಲ್ಲೇ ಇರುವಂತೆ ಮಕ್ಕಳಿಗೆ ತಿಳಿ ಹೇಳಿದೆ.

ಆಶಾ ಕಾರ್ಯಕರ್ತೆಯಾದ ನಾನು, ನಿತ್ಯ ಗರ್ಭಿಣಿ ಮತ್ತು ಬಾಣಂತಿಯರ ಮನೆಗೆ ಭೇಟಿ ನೀಡುವುದು ಮತ್ತು ಲಾರ್ವಾ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಕೆಲಸ ಮಾಡುತ್ತಿದ್ದೆ. ಎಲ್ಲ ಆಶಾ ಕಾರ್ಯಕರ್ತೆಯರು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳು ನೀಡಿದ ಸಲಹೆ ಮೇರೆಗೆ ಜೂನ್‌ 23ರಂದು ಗಂಟಲುದ್ರವ ಕೊಟ್ಟಿದ್ದೆ. ಜೂನ್‌ 29ರಂದು ‘ಪಾಸಿಟಿವ್‘ ಬಂದಿದೆ ಎಂದು ಆಸ್ಪತ್ರೆಯಿಂದ ಕರೆ ಮಾಡಿ ತಿಳಿಸಿದರು.

‘ಪಾಸಿಟಿವ್‌’ ಬಂದಿದೆ ಎಂದು ಹೇಳಿದಾಗ ಸ್ವಲ್ಪ ಭಯವಾಯಿತು. ನನ್ನ ಜೊತೆಗೆ ಇನ್ನೂ 6 ಆಶಾ ಕಾರ್ಯಕರ್ತೆಯರಿಗೆ ಸೋಂಕು ತಗುಲಿತ್ತು. ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಸಹೋದ್ಯೋಗಿಗಳು, ಕುಟುಂಬಸ್ಥರು ಧೈರ್ಯ ತುಂಬಿದರು. ಯಾವುದೇ ಲಕ್ಷಣಗಳಿಲ್ಲದ ಕಾರಣ ನಾನು ಧೈರ್ಯ ತಂದುಕೊಂಡು, ಕೋವಿಡ್‌ ಆಸ್ಪತ್ರೆಗೆ ದಾಖಲಾದೆ. ಐದು ದಿನ ಹಾವೇರಿ ಆಸ್ಪತ್ರೆಯಲ್ಲಿದ್ದು, ನಂತರ ಮೂರು ದಿನ ಹಿರೇಕೆರೂರು ಆಸ್ಪತ್ರೆಯಲ್ಲಿದ್ದೆ. ಜುಲೈ 6ರಂದು ಗುಣಮುಖಳಾಗಿ ಹೊರಬಂದೆ. ನನ್ನ ಜೊತೆ 6 ಆಶಾಗಳು ಗುಣಮುಖರಾದರು.

ಸೋಂಕು ಕೊಟ್ಟ ನೋವಿಗಿಂತ ಜನರು ನಡೆದುಕೊಂಡ ರೀತಿ ನನಗೆ ಹೆಚ್ಚು ನೋವು ಕೊಟ್ಟಿತು. ಸೋಂಕಿತರನ್ನು ಅನುಮಾನದಿಂದ ನೋಡುವುದು, ಇಲ್ಲ ಸಲ್ಲದ ಅಪವಾದ ಹೊರಿಸುವುದು ಮುಂತಾದ ಕೆಲಸಗಳನ್ನು ಮಾಡಬೇಡಿ. ಸೋಂಕು ತಗುಲಿದರೆ ಯಾರೂ ಹೆದರಬೇಕಾದ ಅಗತ್ಯವಿಲ್ಲ. ಆಸ್ಪತ್ರೆಯಲ್ಲಿ ಒಂದು ವಾರ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು.

14 ದಿನಗಳ ಹೋಂ ಕ್ವಾರಂಟೈನ್‌ ಅನ್ನು ಪೂರ್ಣಗೊಳಿಸಿ, ಮತ್ತೆ ಕರ್ತವ್ಯಕ್ಕೆ ಅಣಿಯಾಗಿದ್ದೆನೆ. ಸೋಂಕು ನನ್ನನ್ನು ಕೆಲಸದಿಂದ ವಿಮುಖಳನ್ನಾಗಿ ಮಾಡಿಲ್ಲ. ಮನೆಯವರ ಬೆಂಬಲದಿಂದ ಮತ್ತೆ ವೈದ್ಯಕೀಯ ಸೇವೆಯಲ್ಲಿ ‘ಕೊರನಾ ವಾರಿಯರ್ಸ್‌’ ಆಗಿ ದುಡಿಯುತ್ತೇನೆ ಎಂದು ಮನತುಂಬಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT