ಹಾವೇರಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತವಾಗಿ ಎಫ್.ಐ.ಆರ್. ದಾಖಲಿಸಿ ವರದಿ ಸಲ್ಲಿಸಲು ಠಾಣಾಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತ ಸಮಿತಿ ಮತ್ತು ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ಎಫ್.ಐ.ಆರ್. ಜೊತೆಗೆ ನಿಗದಿತ ಅವಧಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಬೇಕು. ಈ ಕುರಿತಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ತಡವಾದರೆ ನೊಂದವರಿಗೆ ಪರಿಹಾರ ನೀಡಿಕೆಯಲ್ಲಿ ವಿಳಂಬವಾಗುತ್ತದೆ ಎಂದು ತಿಳಿಸಿದರು.
128 ಪ್ರಕರಣಗಳು ಬಾಕಿ:ಜಿಲ್ಲಾ ನ್ಯಾಯಾಲಯದ ವಿಚಾರಣೆಯಲ್ಲಿರುವ ಅನುಸೂಚಿತ ಜಾತಿ ಹಾಗೂ ಬುಡಕಟ್ಟುಗಳ ದೌರ್ಜನ್ಯ ತಡೆ ನಿಯಮಗಳ ಹಾಗೂ ಅಧಿನಿಯಮದಡಿ ದಾಖಲಿಸಲ್ಪಟ್ಟ ಪ್ರಕರಣಗಳ ಮಾಹಿತಿ ಪಡೆದರು. 2010ರಿಂದ 2019ರವರೆಗೆ 114 ಪ್ರಕರಣಗಳು ದಾಖಲಾಗಿದ್ದು, ಪ್ರಸಕ್ತ ಜನವರಿ 1ರಿಂದ ಜುಲೈ ಅಂತ್ಯದವರೆಗೆ 18 ಪ್ರಕರಣಗಳು ಸೇರಿದಂತೆ 132 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ನಾಲ್ಕು ಪ್ರಕರಣಗಳು ಮುಗಿದಿದ್ದು, 128 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ವಿವಿಧ ಹಂತದಲ್ಲಿ ಬಾಕಿ ಉಳಿದಿರುವುದಾಗಿ ಸರ್ಕಾರಿ ಅಭಿಯೋಜಕರು ಸಭೆಗೆ ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ಪ್ರಕರಣಗಳಲ್ಲಿ 2018ರಿಂದ 2020ರವರೆಗೆ 78 ಪ್ರಕರಣಗಳು ದೃಢಪಟ್ಟಿದ್ದು, ಸದರಿ ಪ್ರಕರಣಗಳಲ್ಲಿ ಈವರೆಗೆ ₹1.08 ಕೋಟಿ ಪರಿಹಾರ ಪಾವತಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಎರಡು ದಿನಗಳಲ್ಲಿ ವರದಿ:ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಮರು ಸಮೀಕ್ಷೆ ಪೂರ್ಣಗೊಂಡಿದ್ದು ಎರಡು ದಿನದೊಳಗೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ, ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಗ್ರಾಮೀಣ ಮಟ್ಟದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಎರಡನೇ ಹಂತದ ಸಮೀಕ್ಷೆಯನ್ನು ಪೂರ್ಣಗೊಳಿಸಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವರದಿಗಳನ್ನು ಎರಡು ದಿನದಲ್ಲಿ ಇತ್ಯರ್ಥಪಡಿಸಿ ಸಲ್ಲಿಕೆಗೆ ಸೂಚನೆ ನೀಡಿದರು.
ಹುದ್ದೆ ಭರ್ತಿಗೆ ಕ್ರಮ:ಜಿಲ್ಲೆಯ ನಗರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗೆ ನಿಯಮಾವಳಿ ಹಾಗೂ ಅರ್ಹತೆ ಅನುಗುಣವಾಗಿ ನೇರ ಭರ್ತಿಗೆ ಕ್ರಮ ವಹಿಸಿ. ನೇರ ನೇಮಕಾತಿಯಲ್ಲಿ ಭರ್ತಿಯಾಗದೇ ಉಳಿದ ಹುದ್ದೆಗಳಿಗೆ ನೇರ ಸಂಭಾವನೆ ಪಾವತಿಯಡಿ ಕ್ರಮವಹಿಸುವಂತೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದರು.
ಶಾಸಕ ನೆಹರು ಓಲೇಕಾರ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ, ಅನ್ನಪೂರ್ಣ ಮುದಕಮ್ಮನವರ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಜಿಲ್ಲಾ ದೌರ್ಜನ್ಯ ಸಮಿತಿಯ ಸದಸ್ಯರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.