ಹಾವೇರಿ ಲೋಕಸಭಾ ಕ್ಷೇತ್ರ: ಬುನಾದಿ ಹಾಕಿದರೂ, ಭವನ ಪ್ರವೇಶಿಸಲಿಲ್ಲ ಬಿ.ಜಿ. ಬಣಕಾರ

ಮಂಗಳವಾರ, ಮಾರ್ಚ್ 19, 2019
20 °C
ಬಿಜೆಪಿಗೆ ನೆಲೆ ನೀಡಿದ ಮಾಜಿ ವಿಧಾನಸಭಾಧ್ಯಕ್ಷ

ಹಾವೇರಿ ಲೋಕಸಭಾ ಕ್ಷೇತ್ರ: ಬುನಾದಿ ಹಾಕಿದರೂ, ಭವನ ಪ್ರವೇಶಿಸಲಿಲ್ಲ ಬಿ.ಜಿ. ಬಣಕಾರ

Published:
Updated:
Prajavani

ಹಾವೇರಿ: ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಇಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ನೀಡಿದವರು ವಿಧಾನಸಭೆಯ ಮಾಜಿ ಅಧ್ಯಕ್ಷ ಬಿ.ಜಿ. ಬಣಕಾರ. 1991ರಿಂದ ಬಿಜೆಪಿ ಅಭ್ಯರ್ಥಿ ಹಾಗೂ ಪದಾಧಿಕಾರಿಯಾಗಿ ದುಡಿಯುತ್ತಲೇ ಬಂದ ಅವರಿಗೆ ‘ಸಂಸತ್ತು ಭವನ’ ಪ್ರವೇಶಿಸುವ ಭಾಗ್ಯ ಮಾತ್ರ ಒಲಿಯಲೇ ಇಲ್ಲ.

ಭಾರತೀಯ ಜನತಾ ಪಕ್ಷ (ಬಿಜೆಪಿ) 1980ರಲ್ಲಿ ಉದಯಿಸಿತ್ತು. ಆದರೆ, ಇದೇ ವರ್ಷ ಲೋಕಸಭಾ ಕಣಕ್ಕೆ ಇಳಿದಿದ್ದ ಬಿ.ಜಿ. ಬಣಕಾರ, ಅರಸು ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಎಫ್‌.ಎಚ್.ಮೊಹಸೀನ್ ವಿರುದ್ಧ ಎರಡನೇ ಸ್ಥಾನ ಪಡೆದು, ಸೋತಿದ್ದರು.

1984ರ ಚುನಾವಣೆಯಲ್ಲಿ ಬಣಕಾರ ಸ್ಪರ್ಧಿಸಿರಲಿಲ್ಲ. ಆಗ ಅವರು ಶಾಸಕರಾಗಿದ್ದರು. 1989ರಲ್ಲಿ ನಡೆದ ಚುನಾವಣೆಯಲ್ಲಿ ಬಣಕಾರರು ಜನತಾ ದಳದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಕಾಂಗ್ರೆಸ್‌ನ ಬಿ.ಎಂ. ಮುಜಾಹಿದ್ 3,39,235 ಮತ ಪಡೆದರೆ, ಬಣಕಾರ 3,10,587 ಮತ ಪಡೆದರು. ಕೇವಲ 28,648 ಮತಗಳಿಂದ ಸೋತಿದ್ದರು.

ಬಿಜೆಪಿ ಸೇರ್ಪಡೆ:
ರಾಜಕೀಯದ ಪ್ರಬುದ್ಧ ಛಾಪು ಬೀರಿದ್ದ ಬಣಕಾರ ಅವರನ್ನು 1990ರಲ್ಲಿ ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ಬರಮಾಡಿಕೊಂಡರು. ಇದು, ಜಿಲ್ಲೆ ಹಾಗೂ ಕ್ಷೇತ್ರದಲ್ಲಿ ಬಿಜೆಪಿಗೆ ಬಲ ಹಾಗೂ ನೆಲೆಯನ್ನು ಒದಗಿಸಿತು. 1991ರ ಚುನಾವಣೆಯಲ್ಲಿ ಬಣಕಾರ ಬಿಜೆಪಿಯಿಂದ ಸ್ಪರ್ಧಿಸಿದ್ದು, ಕ್ಷೇತ್ರದಲ್ಲಿ ಬಿಜೆಪಿಯ ಚೊಚ್ಚಲ ಸ್ಪರ್ಧೆಯಾಗಿತ್ತು.

ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಎಂ. ಮುಜಾಹಿದ್‌ ಎದುರು 73,771 ಮತಗಳಿಂದ ಸೋತಿದ್ದರು. ಜನತಾ ದಳದಿಂದ ಸ್ಪರ್ಧಿಸಿದ್ದ ಡಾ.ಬಿ.ಜಿ.ಪಾಟೀಲ 78,844 ಮತಗಳನ್ನು ಪಡೆದಿದ್ದರು. ತಾವು ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದಿಂದ ಕಣಕ್ಕಿಳಿದ ಅಭ್ಯರ್ಥಿಯೇ, ಬಣಕಾರರ ಗೆಲುವಿಗೆ ಅಡ್ಡಿಯಾಗಿದ್ದರು.

1996ರ ಚುನಾವಣೆಯು ಕಾಂಗ್ರೆಸ್‌ನ ಐ.ಜಿ. ಸನದಿ, ಜನತಾ ದಳದ ಬಿ.ಎಂ. ಮೆಣಸಿನಕಾಯಿ ಹಾಗೂ ಬಿಜೆಪಿಯ ಬಿ.ಜಿ. ಬಣಕಾರ ನಡುವಿನ ತ್ರಿಕೋನ ಸ್ಪರ್ಧೆಯಾಯಿತು. ಕ್ರಮವಾಗಿ 1.96 ಲಕ್ಷ, 1.87 ಲಕ್ಷ, 1.85 ಲಕ್ಷ ಮತಗಳನ್ನು ಪಡೆದರು. 9,609 ಮತಗಳ ಅಂತರದಲ್ಲಿ ಗೆದ್ದ ಸನದಿ ಸಂಸದರಾದರು. ಆದರೆ, ಮೆಣಸಿನಕಾಯಿಗಿಂತ ಬಣಕಾರರಿಗೆ ಕೇವಲ 1,279 ಮತಗಳು ಕಡಿಮೆ ಬಂದವು. ಇದು, ಒಟ್ಟಾರೆ ಶೇ 0.21ರಷ್ಟು ಕಡಿಮೆಯಾಗಿದ್ದವು. 

ಕೈ ಕೊಟ್ಟ 1,279 ಮತಗಳು:
1996ರಲ್ಲಿ ಎಚ್.ಡಿ.ದೇವೇಗೌಡ ಪ್ರಧಾನಿಯಾದರು. ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು. ಹೆಗಡೆ ಅವರ ಜೊತೆಗೆ ಮೆಣಸಿನಕಾಯಿ ಅವರೂ ಹೊರಬಂದರು. ಹೆಗಡೆ ಅವರ ಲೋಕಶಕ್ತಿ ಪಕ್ಷವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ‘ಎನ್‌ಡಿಎ’ಗೆ ಸೇರಿತು.

1996ರ ಚುನಾವಣೆಯಲ್ಲಿ ಮೆಣಸಿನಕಾಯಿ ಅವರು ಬಣಕಾರರರಿಗಿಂತ 1279 ಮತ ಹೆಚ್ಚು ಪಡೆದಿದ್ದ ಕಾರಣ, ಬಿಜೆಪಿಯು ಕ್ಷೇತ್ರವನ್ನು ಲೋಕಶಕ್ತಿಗೆ ನೀಡಿತು. ಸತತ ಹೋರಾಟದಿಂದ ಸೃಷ್ಟಿಸಿದ್ದ ನೆಲೆಯನ್ನು ಬಣಕಾರ ಬಿಟ್ಟುಕೊಡಬೇಕಾಯಿತು. ಬಣಕಾರ ಬೆಂಬಲದಲ್ಲಿ ಮೆಣಸಿನಕಾಯಿ ಗೆದ್ದರು. 1999ರಲ್ಲಿ ಕ್ಷೇತ್ರವನ್ನು ಮತ್ತೆ ಬಿಟ್ಟುಕೊಡಬೇಕಾಯಿತು. ಆದರೆ, ಕಾಂಗ್ರೆಸ್‌ ಗೆಲುವು ಕಂಡಿತು.

2000 ಬಳಿಕ ಚುನಾವಣೆಯ ಮಾನದಂಡಗಳೂ ಬದಲಾಗಲು ಶುರುವಾಯಿತು. ಆರ್ಥಿಕತೆಯೂ ಪ್ರಮುಖವಾಯಿತು. 2004ರಲ್ಲಿ ಬಿ.ಜಿ. ಬಣಕಾರ ಲೋಕಸಭೆಯ ಚುನಾವಣೆಯಿಂದ ಹಿಂದೆ ಸರಿದಿದ್ದರು.

ಆ ಚುನಾವಣೆಯಲ್ಲಿ ಬಿಜೆಪಿಯು ಮಂಜುನಾಥ ಕುನ್ನೂರ ಅವರನ್ನು ಕಣಕಿಳಿಸಿತು. ಗೆಲುವು ಕಂಡರು. 2008ರ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ 2009 ಮತ್ತು 2014ರಲ್ಲಿ ಬಿಜೆಪಿಯ ಶಿವಕಮಾರ್ ಉದಾಸಿ ಸತತ ಗೆಲುವು ಸಾಧಿಸಿದರು. ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿ ಗೆಲುವಿನ ‘ಹ್ಯಾಟ್ರಿಕ್’ ಬಾರಿಸಿತು. ಆದರೆ, 1980ರಿಂದ ಕಾಂಗ್ರೆಸ್ ವಿರುದ್ಧ ಹೋರಾಡುತ್ತಾ ಬಿಜೆಪಿಗೆ ಬುನಾದಿ ಹಾಕಿದ್ದ  ಬಿ.ಜಿ.ಬಣಕಾರರಿಗೆ ಸಂಸತ್ತು ಭವನ ಪ್ರವೇಶದ ಭಾಗ್ಯ ಒಲಿಯಲೇ ಇಲ್ಲ. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !