ಮಂಗಳವಾರ, ಆಗಸ್ಟ್ 3, 2021
27 °C
ಜಿಲ್ಲೆಯಾದ್ಯಂತ ಸರಳ, ಶಾಂತಿಯುತ ಆಚರಣೆ: ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ

ತ್ಯಾಗ, ಬಲಿದಾನದ ಪ್ರತೀಕ ಬಕ್ರೀದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಶನಿವಾರ ಶ್ರದ್ಧಾಭಕ್ತಿಯಿಂದ ಬಕ್ರೀದ್‌ ಆಚರಿಸಿದರು. 

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಮತ್ತು ಶಾಂತಿಯುತವಾಗಿ ಬಕ್ರೀದ್‌ ನಡೆಯಿತು. ಹಾವೇರಿ ನಗರದ ಜಾಮೀಯಾ ಮಸೀದಿಯಲ್ಲಿ ತಂಡ–ತಂಡವಾಗಿ ಬೆಳಿಗ್ಗೆ 7ರಿಂದ 8.30ರವರೆಗೆ ಮುಸ್ಲಿಮರು ನಮಾಜ್‌ ಮಾಡಿದರು. ವಿಶೇಷ ಟೋಪಿ, ವಿವಿಧ ಬಗೆಯ ಅತ್ತರ್‌, ಕಣ್ಣಿಗೆ ಸುರಮಾ ಹಚ್ಚಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ‘ಈದ್‌ ಮುಬಾರಕ್’‌ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. 

ಈ ಬಾರಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲದ ಕಾರಣ ಮಸೀದಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಒಂದು ತಂಡದಲ್ಲಿ 50 ಜನರಂತೆ, ತಂಡ–ತಂಡವಾಗಿ ಪ್ರಾರ್ಥನೆ ಸಲ್ಲಿಸಿದರು. ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿಕೊಂಡು, ಸ್ಯಾನಿಟೈಸರ್‌ ಹಾಕಿಕೊಂಡು ಮಸೀದಿ ಪ್ರವೇಶಿಸಿದರು. 

ಭಾವೈಕ್ಯತೆಯ ಪ್ರತೀಕ: ‘ದೀಪಾವಳಿ ಸಂದರ್ಭದಲ್ಲಿ ನಾವು ಹಿಂದೂಗಳ ಮನೆಗಳಿಗೆ ಊಟಕ್ಕೆ ಹೋಗುತ್ತೇವೆ. ಅದರಂತೆ ಬಕ್ರೀದ್‌ ಸಂದರ್ಭದಲ್ಲಿ ಹಿಂದೂ ಸ್ನೇಹಿತರು ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ನಾಗಪಂಚಮಿಗೆ ತರಹೇವಾರಿ ಉಂಡಿಗಳನ್ನು ನಮ್ಮ ಮನೆಗೆ ಕಳುಹಿಸುತ್ತಾರೆ. ನಾವು ಕೂಡ ‘ಸುರಕುಂಬಾ’ (ಹಾಲಿನ ಪಾಯಸ) ಕಳುಹಿಸಿಕೊಟ್ಟೆವು. ಹೀಗೆ, ಹಿಂದೂ–ಮುಸ್ಲಿಮರು ಮೊದಲಿನಿಂದಲೂ ಭಾವೈಕ್ಯತೆಯಿಂದ ಇದ್ದೇವೆ’ ಎಂದು ಅಂಜುಮನ್‌ ಎ ಇಸ್ಲಾಂ ಸಮಿತಿಯ ಅಧ್ಯಕ್ಷ ಜೀಶಾನ್‌ ಪಠಾಣ್‌ ತಿಳಿಸಿದರು. 

'ಸಮಿತಿ ವತಿಯಿಂದ ಆಟೊಗಳಲ್ಲಿ ಧ್ವನಿವರ್ಧಕ ಕಟ್ಟಿಕೊಂಡು, ಸುರಕ್ಷತಾ ಕ್ರಮ ಪಾಲಿಸುವ ಮೂಲಕ ಬಕ್ರೀದ್‌ ಆಚರಿಸುವಂತೆ ಮನವಿ ಮಾಡಿದ್ದೆವು. ಸ್ವಚ್ಛತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡುವಂತೆ ತಿಳಿಸಿದ್ದೆವು. ಅದರಂತೆ ಮುಸ್ಲಿಮರು ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ಬಕ್ರೀದ್‌ ಆಚರಿಸಿದ್ದಾರೆ’ ಎಂದು ಹೇಳಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು