ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಚುನಾವಣೆಯಾಗಿ ಮೂರು ವರ್ಷ ಕಳೆದ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಚುನಾವಣೆ ಶುಕ್ರವಾರ ನಡೆಯಲಿದ್ದು, ಈ ಸ್ಥಾನಕ್ಕೆ ಮಹಿಳಾ ಸದಸ್ಯರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.
ಕಳೆದ 2021ರ ಡಿಸೆಂಬರ್ 27ರಂದು ಪುರಸಭೆ ಸದಸ್ಯರ ಚುನಾವಣೆ ನಡೆಯಿತು. ನಂತರ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಈವರೆಗೆ ಚುನಾವಣೆ ನಡೆದಿಲ್ಲ. ಈಗ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಮೂರು ವರ್ಷದ ನಂತರ ನಾವು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂಬ ಸಂತಸ ಚುನಾಯಿತ ಸದಸ್ಯರಲ್ಲಿ ಕಾಣುತ್ತಿದೆ.
ಅಧ್ಯಕ್ಷ ಸ್ಥಾನ ‘ ಸಾಮಾನ್ಯ ಮಹಿಳೆ’ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮೀಸಲಾತಿ ಪ್ರಕಟಿಸಿದೆ. ಅದರನ್ವಯವಾಗಿ ಮಹಿಳಾ ಸದಸ್ಯರಲ್ಲಿ ಅಧಿಕಾರ ಚುಕ್ಕಾಣೆ ಹಿಡಿಯುವ ಹುಮ್ಮಸ್ಸು ಹೆಚಾಗಿದೆ. ‘ಸಾವು ಅರ್ಹರಿದ್ದೇವೆ ಈ ಬಾರಿ ನಮ್ಮಗೂ ಅಧ್ಯಕ್ಷ ಸ್ಥಾನ ನೀಡಿರಿ’ ಎಂದು ತಮ್ಮ, ತಮ್ಮ ಪಕ್ಷದ ವರಿಷ್ಠರ ಮೇಲೆ ಒತ್ತಡ ತರುತ್ತಿದ್ದಾರೆ.
ಪುರಸಭೆ 23 ಸದಸ್ಯರ ಬಲಾಬಲ ಹೊಂದಿದ್ದು, ಅದರಲ್ಲಿ ಕಾಂಗ್ರೆಸ್ 14, ಬಿಜೆಪಿ 07, ಪಕ್ಷೇತರ 2 ಸದಸ್ಯರಿದ್ದಾರೆ. ಅವರಲ್ಲಿ 10 ಮಹಿಳಾ ಸದಸ್ಯರಿದ್ದಾರೆ. ಹೀಗಾಗಿ ಮೀಸಲಾತಿ ಅನ್ವಯವಾಗಿ ಈ ಮಹಿಳಾ ಸದಸ್ಯರು ಅಧಿಕಾರದ ಗದ್ದುಗೆಗೆ ತೀವ್ರ ಪೈಪೋಟಿ ಒಡ್ಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ 14 ಸದಸ್ಯರಿದ್ದು, ಅದರಲ್ಲಿ 6 ಮಹಿಳಾ ಸದಸ್ಯರಿದ್ದಾರೆ. ಎಲ್ಲರು ಆಕಾಂಕ್ಷಿಗಳಿದ್ದಾರೆ. ಪುರಸಭೆ ಕಾಂಗ್ರೆಸ್ ಪಕ್ಷದ ಬಲಾಬಲ ಹೊಂದಿದ್ದು, ಅದರಲ್ಲಿ ಕೆಲ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಅನ್ವಯ ಒಬ್ಬರೆ ಇರುವ ಕಾರಣ ಅವರ ಆಯ್ಕೆ ಸುಲಭವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಅದರಲ್ಲಿ ವರಿಷ್ಠರ ಆದೇಶದ ಅನ್ವಯವಾಗಿ 10 ತಿಂಗಳಂತೆ 3 ಮಹಿಳಾ ಸದಸ್ಯರಿಗೆ ಅವಕಾಶ ಸಿಗಲಿದೆ. ವರಿಷ್ಠರ ಆದೇಶವನ್ನು ಕಾಯುತ್ತಿದ್ದೇವೆ ಎಂದು ಪುರಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಹಿರಿಯ ಸದಸ್ಯರಾದ ಸತೀಶ ಆಲದಕಟ್ಟಿ, ಮುನ್ನಾ ಗುಲ್ಮಿ ಹೇಳುತ್ತಾರೆ.
ಚುನಾವಣೆ ಇಂದು
ಬಂಕಾಪುರ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾಗಿದ್ದು ಆದೇಶದಂತೆ ಸೆ.6ರಂದು ಪುರಸಭೆ ಸಭಾಭವನದಲ್ಲಿ ನಡೆಸಲು ನಿಗದಿ ಪಡಿಸಲಾಗಿದೆ. ಬೆಳಿಗ್ಗೆ 10ರಿಂದ 12 ಗಂಟೆ ವರೆಗೆ ನಾಮಪತ್ರ ಸಲ್ಲಿಸುವುದು ಮಧ್ಯಾಹ್ನ 2 ಗಂಟೆ ವರೆಗೆ ಚುನಾವಣೆ ಸಭೆ 2ರಿಂದ 2.15ರ ವರೆಗೆ ನಾಮಪತ್ರ ಪರಿಶೀಲನೆ ನಂತರ 2.15 ರಿಂದ 2.30ರ ವರೆಗೆ ನಾಮಪತ್ರ ಹಿಂತೆಗೆದುಕೊಳ್ಳುವ ಸಮಯ 2.30ಕ್ಕೆ ಅವಶ್ಯವಿದ್ದಲ್ಲಿ ಮತದಾನ ನಡೆಸಲಾಗುವುದು ಎಂದು ತಹಶೀಲ್ದಾರ್ ಸಂತೋಷ ಹಿರೇಮಠ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.