ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐರಣಿ ಕೆರೆಯಲ್ಲಿ ಹೆಬ್ಬಾತುಗಳ ಕಲರವ: ಮಂಗೋಲಿಯಾದಿಂದ ಹಾರಿ ಬಂದ ಬಾನಾಡಿಗಳು

ಆಹಾರ–ವಿಹಾರಕ್ಕಾಗಿ ಸಾವಿರಾರು ಕಿ.ಮೀ. ವಲಸೆ
Last Updated 2 ಜನವರಿ 2022, 19:30 IST
ಅಕ್ಷರ ಗಾತ್ರ

ಹಾವೇರಿ: ಇತಿಹಾಸದ ಗತವೈಭವವನ್ನು ಕಣಕಣದಲ್ಲಿ ತುಂಬಿಕೊಂಡಿರುವ ರಾಣೆಬೆನ್ನೂರು ತಾಲ್ಲೂಕಿನ ‘ಐರಣಿ’ ಗ್ರಾಮದ ಸಮೀಪವಿರುವ ಐರಣಿ ಬೊಮ್ಮನಕಟ್ಟಿ ಕೆರೆಯಲ್ಲಿ ವಲಸೆ ಹಕ್ಕಿಗಳ ಕಲರವ ಪಕ್ಷಿ ಪ್ರಿಯರ ಕಣ್ಮನ ತಣಿಸುತ್ತಿದೆ.

ರಾಣೆಬೆನ್ನೂರು ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಬರುವ ಐರಣಿ ಬೊಮ್ಮನಕಟ್ಟಿ ಕೆರೆಯು 11.60 ಹೆಕ್ಟೇರ್‌ನಲ್ಲಿ ಮೈಚಾಚಿಕೊಂಡಿರುವ ನಿಸರ್ಗದ ಸುಂದರ ತಾಣವಾಗಿದೆ. ಬೆಟ್ಟ ಗುಡ್ಡಗಳಿಂಡ ಕೂಡಿದ ಈ ಪ್ರದೇಶ ಪಕ್ಷಿಗಳ ಆಹಾರ–ವಿಹಾರಕ್ಕೆ ಹೇಳಿ ಮಾಡಿಸಿದ ವಾಸಸ್ಥಾನವಾಗಿದೆ. ಇಲ್ಲಿ ಬಿಡಾರ ಹೂಡಿರುವ ‘ವಿದೇಶಿ ಅತಿಥಿ’ಗಳಾದ ಪಟ್ಟೆ ತಲೆಯ ಹೆಬ್ಬಾತುಗಳು (ಬಾರ್‌ ಹೆಡೆಡ್‌ ಗೂಸ್‌) ನೀರಿನಲ್ಲಿ ಮಿಂದೇಳುತ್ತಾ, ನೋಡುಗರನ್ನು ಪುಳಕಿತರನ್ನಾಗಿ ಮಾಡುತ್ತಿವೆ.

ಮಂಗೋಲಿಯಾದ ಅತಿಥಿಗಳು: ಈ ಪಟ್ಟೆ ತಲೆಯ ಹೆಬ್ಬಾತುಗಳು ಮಂಗೋಲಿಯಾ ದೇಶದಿಂದ20 ಸಾವಿರ ಅಡಿಗಳ ಎತ್ತರದಲ್ಲಿರುವ ಹಿಮಾಲಯ ಪರ್ವತವನ್ನು ದಾಟಿಕೊಂಡು ಪ್ರತಿ ಚಳಿಗಾಲದಲ್ಲಿ ದಕ್ಷಿಣ ಭಾರತದತ್ತ ವಲಸೆ ಬರುತ್ತವೆ. ಚಳಿಗಾಲದಲ್ಲಿ ಮಂಗೋಲಿಯಾ ದೇಶ ಹಿಮದಿಂದ ಆವೃತವಾಗುವುದರಿಂದ, ಪಕ್ಷಿಗಳಿಗೆ ಆಹಾರದ ಕೊರತೆ ತೀವ್ರವಾಗಿ ಕಾಡುತ್ತದೆ. ಹೀಗಾಗಿ ಆಹಾರ ಅರಸುತ್ತಾ, 4 ಸಾವಿರ ಕಿ.ಮೀ. ದೂರದಿಂದ ಹಾರಿ ಬರುತ್ತವೆ.

‘ವಿಶ್ವದಲ್ಲೇ ಅತಿ ಎತ್ತರದಲ್ಲಿ ಹಾರಾಡುವ ಬಾನಾಡಿ’ ಎಂಬ ಖ್ಯಾತಿ ಪಡೆದಿರುವ ಪಟ್ಟೆ ತಲೆಯ ಹೆಬ್ಬಾತುಗಳನ್ನು ‘ಪರ್ವತ ಹಕ್ಕಿಗಳು’ ಎಂದೂ ಕರೆಯುತ್ತಾರೆ.ಕೆರೆಯಲ್ಲಿ ಮಿಂದೆದ್ದರೂ ಇವು ಮೀನು ತಿನ್ನುವುದಿಲ್ಲ ಎಂಬುದು ವಿಶೇಷ. ಶುದ್ಧ ಸಸ್ಯಾಹಾರಿಗಳಾದ ಹೆಬ್ಬಾತುಗಳು ಕೆರೆ ದಡದಲ್ಲಿ ವಾಸಿಸುತ್ತಾ, 10ರಿಂದ 20 ಕಿ.ಮೀ. ದೂರದ ಜಮೀನುಗಳಿಗೆ ತೆರಳಿ ಶೇಂಗಾ, ಕಡಲೆ, ಅಲಸಂದೆ ಹಾಗೂ ಕೆರೆ ಕುಂಟೆಗಳಲ್ಲಿ ಸಿಗುವ ಹುಲ್ಲಿನ ಚಿಗುರನ್ನು ತಿನ್ನುತ್ತವೆ.

‘ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆರೆ ಕಟ್ಟೆಗಳು ತುಂಬಿ ವಲಸೆ ಹಕ್ಕಿಗಳ ಆಹಾರ–ವಿಹಾರಕ್ಕೆ ಅನುಕೂಲವಾಗಿದೆ. ಮೊದಲು ಐರಣಿ ಕೆರೆಯು ಬೇಸಿಗೆಯಲ್ಲಿ ಒಣಗುತ್ತಿತ್ತು. ಇತ್ತೀಚೆಗೆ ತುಂಗಾ ಮೇಲ್ದಂಡೆ ಯೋಜನೆಯಿಂದ ನೀರು ತುಂಬಿಸುತ್ತಿರುವ ಪರಿಣಾಮ ವರ್ಷಪೂರ್ತಿ ಕೆರೆ ನಳನಳಿಸುತ್ತಾ ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತಿದೆ’ ಎಂದುರಾಣೆಬೆನ್ನೂರು ವನ್ಯಜೀವಿ ವಲಯದ ಅರಣ್ಯ ರಕ್ಷಕ ರವೀಂದ್ರ ಕೆ. ತಿಳಿಸಿದರು.

ಮೂರು ತಿಂಗಳು ಬಿಡಾರ

ಈ ಪಟ್ಟೆ ತಲೆಯ ಹೆಬ್ಬಾತುಗಳು ನವೆಂಬರ್ ಕೊನೆಯ ವಾರದಲ್ಲಿ ಅಥವಾ ಡಿಸೆಂಬರ್‌ನಲ್ಲಿ ಕರ್ನಾಟಕಕ್ಕೆ ವಲಸೆ ಬಂದು‌ ಮೂರು ತಿಂಗಳು ಇಲ್ಲೇ ಬಿಡಾರ ಹೂಡುತ್ತವೆ. ಮಾರ್ಚ್ ವೇಳೆಗೆ ಮತ್ತೆ ತವರು ದೇಶಕ್ಕೆ ಮರಳುತ್ತವೆ. ಮೈಸೂರಿನ ಕಬಿನಿ ಹಿನ್ನೀರು, ಹದಿನಾರು ಕೆರೆ ಹಾಗೂ ಗದಗ ಜಿಲ್ಲೆಯ ಮಾಗಡಿ ಕೆರೆಯಲ್ಲಿ ಇವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ‌.ಮಧ್ಯ ಏಷ್ಯಾದ ಪರ್ವತ ಶ್ರೇಣಿಗಳ ಕೆರೆ ಕುಂಟೆಗಳಲ್ಲಿ ಸಾವಿರ ಸಾವಿರ ಸಂಖ್ಯೆಗಳಲ್ಲಿ ಕಂಡು ಬರುತ್ತವೆ.

ಇವು ಒಂದು ಬಾರಿಗೆ ಮೂರರಿಂದ ಎಂಟು ಮೊಟ್ಟೆಗಳನ್ನು ಇಡುತ್ತವೆ. ಈ ಹಕ್ಕಿಗಳು ಬೂದು ಬಣ್ಣ ಹೊಂದಿದ್ದು, ತಲೆಯು ಪಟ್ಟೆಗಳಿಂದ ಕೂಡಿರುತ್ತದೆ. ಹಾರುವಾಗ ವಿಶಿಷ್ಟವಾಗಿ ಕೂಗುತ್ತಾ ಸಾಗುತ್ತವೆ. ಇವು ಸುಮಾರು 71–76 ಸೆಂ.ಮೀ. ಉದ್ದ ಹಾಗೂ 1.80 ರಿಂದ 3.2 ಕೆ.ಜಿ. ತೂಕವಿರುತ್ತವೆ.

***

ಐರಣಿ ಕೆರೆಗೆ ಮೂರು ವರ್ಷಗಳಿಂದ ಪಟ್ಟೆ ತಲೆಯ ಹೆಬ್ಬಾತುಗಳು ವಲಸೆ ಬರುತ್ತಿವೆ. ಈ ಬಾರಿ 100ಕ್ಕೂ ಅಧಿಕ ಸಂಖ್ಯೆಯಲ್ಲಿ ಕಂಡು ಬಂದಿವೆ

- ಮಲ್ಲಿಕಾರ್ಜುನ ಕೆ., ಡಿಆರ್‌ಎಫ್‌ಒ, ರಾಣೆಬೆನ್ನೂರು ವನ್ಯಜೀವಿ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT