ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ವಲಯವನ್ನಾಗಿಸಲು ಅಗತ್ಯ ಕ್ರಮ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡ್‌ ವೀಕ್ಷಣೆ
Last Updated 19 ಮೇ 2020, 13:29 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಯ ಮೂಲಸೌಕರ್ಯ, ಕೋವಿಡ್ ವ್ಯಕ್ತಿಗಳಿಗೆ ಚಿಕಿತ್ಸಾ ಕ್ರಮ, ಹೊಸ ವೆಂಟಿಲೇಟರ್ ವ್ಯವಸ್ಥೆ, ಹಾಸಿಗೆ ಸೌಲಭ್ಯ ಸೇರಿದಂತೆ ವಿವಿಧ ಸೌಕರ್ಯಗಳನ್ನು ವೀಕ್ಷಿಸಿ, ವೈದ್ಯರಿಂದ ಮಾಹಿತಿ ಪಡೆದರು.

ಮಂಗಳವಾರ ಮಧ್ಯಾಹ್ನ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ, ಕೋವಿಡ್ ಆಸ್ಪತ್ರೆ ವಾರ್ಡ್‍ಗಳ ವೀಕ್ಷಣೆಗೆ ಮುನ್ನ ಪಿಪಿಇ ಕಿಟ್ ಧರಿಸಿ ಎಲ್ಲರ ಗಮನ ಸೆಳೆದರು. ಸಚಿವರೊಂದಿಗೆ ವೈದ್ಯರು ಕೋವಿಡ್ ವಾರ್ಡ್‍ಗಳ ಡ್ಯೂಟಿಯಲ್ಲಿರುವ ಪೊಲೀಸರು ಪಿಪಿಇ ಕಿಟ್‍ಗಳನ್ನು ಧರಿಸಿದ್ದು ವಿಶೇಷವಾಗಿತ್ತು.

ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ಜಿಲ್ಲೆಗೆ ಹೊಸದಾಗಿ 11 ವೆಂಟಿಲೇಟರ್‌ಗಳನ್ನು ತರಿಸಲಾಗಿದೆ. 58 ಬೆಡ್‍ಗಳಿಗೆ ಕೇಂದ್ರೀಕೃತ ಆಮ್ಲಜನಕ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ಸೋಂಕು ಪರೀಕ್ಷಾಲಯ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಸಿಟಿವ್ ವ್ಯಕ್ತಿಗಳು ಆರೋಗ್ಯ ಸುಧಾರಣೆಗೊಳ್ಳುತ್ತಿದೆ. 14 ದಿನಕ್ಕೆ ಅವರನ್ನು ಬಿಡುಗಡೆಗೊಳಿಸಲು ಕ್ರಮವಹಿಸಲಾಗುವುದು. 12ನೇ ದಿನಕ್ಕೆ ಮತ್ತೊಮ್ಮೆ ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

‘ಹಸಿರು ವಲಯ’ದಲ್ಲಿದ್ದ ಹಾವೇರಿ ಜಿಲ್ಲೆಗೆ ಮುಂಬೈನಿಂದ ಬಂದ ವ್ಯಕ್ತಿಗಳಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಕಾರಣ ‘ಕಿತ್ತಳೆ ವಲಯ’ಕ್ಕೆ ಬದಲಾಗಿದೆ. ಸವಣೂರ ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಹಾಗೂ ಎರಡನೇ ಹಂತದ ಸಂಪರ್ಕ ವ್ಯಕ್ತಿಗಳ ಕೋವಿಡ್ ತಪಾಸಣೆ ನಡೆಸಲಾಗಿದ್ದು, ಎಲ್ಲರ ವರದಿ ಸಹ ನೆಗಟಿವ್ ಬಂದಿವೆ. ಅದೇ ರೀತಿ ಅಂದಲಗಿ ಪ್ರಕರಣದಲ್ಲಿ ಪ್ರಾಥಮಿಕ ಹಾಗೂ ಎರಡನೇ ಹಂತದ ಸಂಪರ್ಕ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದೆ ಹಾಗೂ ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಾವೇರಿ ಜಿಲ್ಲೆಯನ್ನು ಹಸಿರು ವಲಯವನ್ನಾಗಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಮೂಲಸೌಕರ್ಯ ಕಲ್ಪಿಸಲು ಒತ್ತು:ಅಂತರ ಜಿಲ್ಲಾ ಪ್ರವಾಸಕ್ಕೆ ಯಾವುದೇ ಅತಡೆಗಡೆಗಳಿಲ್ಲ. ಆದರೆ ಅಂತರರಾಜ್ಯ ಪ್ರಯಾಣಕ್ಕೆ ಕಡ್ಡಾಯವಾಗಿ ಸೇವಾ ಸಿಂಧು ನೋಂದಣಿ ಮೂಲಕ ಪಾಸ್ ಪಡೆಯಬೇಕು. ಕ್ವಾರಂಟೈನ್ ಕೇಂದ್ರಗಳಲ್ಲಿ ಮೂಲಸೌಕರ್ಯಗಳ ಲೋಪದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯದವರು ಬಂದ ಸಂದರ್ಭದಲ್ಲಿ ವ್ಯತ್ಯಾಸವಾಗಿರಬಹುದು. ಆದಾಗ್ಯೂ ಕ್ವಾರಂಟೈನ್ ಕೇಂದ್ರಗಳಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಶ್ರದ್ಧಾಂಜಲಿ ವಾಹನ ಸೇವೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಉತ್ತರಿಸಿದ ಸಚಿವರು ಶ್ರದ್ಧಾಂಜಲಿ ವಾಹನ ಚಾಲನೆಗೆ ಶೀಘ್ರ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT