ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪ್ಯಾಕೇಜ್‍ ಸಿದ್ಧತೆ ಮಾಡಿಕೊಳ್ಳಿ: ಬಸವರಾಜ ಬೊಮ್ಮಾಯಿ

Last Updated 19 ಮೇ 2020, 14:19 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯ ಸರ್ಕಾರದ ಹೊಸ ಬಜೆಟ್ ಘೋಷಿತ ಕಾರ್ಯಕ್ರಮಗಳ ಆರಂಭ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಅಡಿ ಜಿಲ್ಲೆಗೆ ಅನ್ವಯಿಸುವ ಆರ್ಥಿಕ ಕಾರ್ಯಕ್ರಮಗಳನ್ನು ಪಡೆಯುವ ನಿಟ್ಟಿನಲ್ಲಿ ಜಿಲ್ಲೆಗೆ ವಿಶೇಷ ಆರ್ಥಿಕ ಪ್ಯಾಕೇಜ್ ರೂಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ ಲಾಕ್‍ಡೌನ್ 4.0 ಜಾರಿಗೊಂಡಿರುವುದರಿಂದ ಕೆಲ ನಿರ್ಬಂಧಗಳನ್ನು ಹೊರತುಪಡಿಸಿ ಸಾಕಷ್ಟು ಚಟುವಟಿಕೆಗಳು ಆರಂಭಗೊಳ್ಳಲಿರುವುದರಿಂದ ಹೊಸದಾಗಿ ಕೋವಿಡ್ ಪ್ರಕರಣಗಳು ಪತ್ತೆಯಾಗದಂತೆ ಹೆಚ್ಚಿನ ಗಮನ ಹರಿಸಬೇಕು.ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ. ತಾತ್ಕಾಲಿಕವಾಗಿ ಹಣಕಾಸಿನ ತೊಂದರೆ ಕೋವಿಡ್‌ನಿಂದ ಆಗಿದ್ದರೂ ಅದನ್ನು ಮೆಟ್ಟಿನಿಲ್ಲುವ ಶಕ್ತಿ ರಾಜ್ಯಕ್ಕಿದೆ ಎಂದರು.

ರಾಜ್ಯ ಸರ್ಕಾರ ಮುಂದಿನ ಎರಡು ಮೂರು ದಿನಗಳಲ್ಲಿ 2020-21ನೇ ಸಾಲಿನ ಬಜೆಟ್ ಘೋಷಿತ ಯೋಜನೆಗಳ ಅನುಷ್ಠಾನಕ್ಕೆ ಆದೇಶ ಹೊರಡಿಸಲಿದೆ. ಬಜೆಟ್ ಘೋಷಿತ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯಾವುದೇ ತೊಂದರೆ ಇಲ್ಲ. ಈ ಕುರಿತಂತೆ ಜಿಲ್ಲಾಡಳಿತಕ್ಕೆ ಹಣಕಾಸು ಇಲಾಖೆ ಆದೇಶ ನೀಡುತ್ತದೆ. ಇದರೊಂದಿಗೆ ನೀರಾವರಿ, ಕೃಷಿ, ತೋಟಗಾರಿಕೆ, ಲೋಕಪಯೋಗಿ, ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಯ ಹೊಸ ಯೋಜನೆಗಳ ವಿಸ್ತೃತ ಕ್ರಿಯಾ ಯೋಜನೆಗಳನ್ನು ತಯಾರಿಸಿಕೊಂಡು ಅನುಷ್ಠಾನಕ್ಕೆ ಸಿದ್ಧವಾಗಬೇಕು ಎಂದರು.

ವರದಾ ಮರಳು ಸಾಗಣೆಗೆ ನಿರ್ಬಂಧ ಬೇಡ:ವರದಾ ನದಿಯ ಮರಳು ಸಾಗಾಣಿಕೆಗೆ ನಿರ್ಬಂಧ ಹಾಕಬಾರದು. ಈ ಕುರಿತಂತೆ ಜಿಲ್ಲಾಧಿಕಾರಿ ನಾಳೆಯೇ ಆದೇಶ ಹೊರಡಿಸಬೇಕು. ವರದಾ ಮರಳು ಐ.ಎಸ್. ಓ ಮಾರ್ಗಸೂಚಿಯಂತೆ ಕಟ್ಟಡ ಕಾರ್ಯಕ್ಕೆ ಬಳಸಲು ಯೋಗ್ಯ ಅಲ್ಲ ಎಂದು ಈಗಾಗಲೇ ಹೊಸ ಮರಳು ನೀತಿ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲೇ ವಿತರಣೆಗೆ ಅವಕಾಶ ಕಲ್ಪಿಸಿದೆ. ನಾಳೆಯಿಂದಲೇ ರೈತರಿಗೆ ತೊಂದರೆ ಇಲ್ಲದಂತೆ ವರದಾ ಮರಳು ಬಳಸಬಹುದು. ಈ ಕುರಿತಂತೆ ನಾಳೆಯಿಂದ ಹೊಸ ಆದೇಶವನ್ನು ಹೊರಡಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಲತಾ ಅವರಿಗೆ ಸೂಚನೆ ನೀಡಿದರು.

ಕಾಯಂಗೊಳಿಸಲು ಸೂಚನೆ:ಜಿಲ್ಲೆಯ ಪುರಸಭೆ, ನಗರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಬಹಳ ವರ್ಷದಿಂದ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವವರ ಪೈಕಿ ಕಾಯಂ ಆಗದೇ ಉಳಿದಿರುವವರನ್ನು ಅವರ ಸೇವೆ ಹಾಗೂ ಮಾನವೀಯತೆಯ ದೃಷ್ಟಿಯಿಂದ ಪರಿಗಣಿಸಿ ಕಾಯಂ ಮಾಡಲು ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT