ಶುಕ್ರವಾರ, ಜೂನ್ 18, 2021
21 °C
ಹಾವೇರಿ ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕ, ಲಿಂಗಾಯತ ನಾಯಕ, ಮೂರನೇ ಬಾರಿಗೆ ಆಯ್ಕೆ

ರಾಜಕೀಯ ಬೆಳವಣಿಗೆ: ಬಿ.ಸಿ.ಪಾಟೀಲರತ್ತ ಎಲ್ಲರ ಚಿತ್ತ!, ಉಳಿಯುವರೋ, ಹೋಗುವರೋ!

ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

Deccan Herald

ಹಾವೇರಿ: ಅತ್ತ ರಾಜ್ಯರಾಜಕಾರಣದಲ್ಲಿ ಕ್ಷಣ ಕ್ಷಣದ ಬೆಳವಣಿಗೆಗಳು ನಡೆಯುತ್ತಿದ್ದರೆ, ಇತ್ತ ಎಲ್ಲರ ಕಣ್ಣು ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕ ಬಿ.ಸಿ.ಪಾಟೀಲರತ್ತ ನೆಟ್ಟಿದೆ.

‘ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಹಿರಿಯ ನಾಯಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ’ ಎಂಬ ಸುದ್ದಿಯೇ ಇದಕ್ಕೆ ಕಾರಣವಾಗಿದೆ. ಬಿಜೆಪಿ ಪ್ರಯತ್ನಗಳ ಕುರಿತು ಈ ಹಿಂದೊಮ್ಮೆ ಶಾಸಕ ಬಿ.ಸಿ. ಪಾಟೀಲ ಹೇಳಿಕೆ ನೀಡಿದ್ದರು. ಆದರೆ, ತಾವು ಕಾಂಗ್ರೆಸ್ ಬಿಡುವುದಿಲ್ಲ ಎಂದೂ ಹೇಳಿದ್ದರು.

ಈಚೆಗೆ ಕೆಲ ದಿನಗಳಿಂದ ಬೆಳಗಾವಿ ವಿಭಾಗದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಜಾರಕಿಹೊಳಿ ಸಹೋದರರು ನೇರ ಅಖಾಡಕ್ಕೆ ಇಳಿದಿದ್ದಾರೆ. ಈ ಬೆಳವಣಿಗೆಯಿಂದಾಗಿ ಮತ್ತೊಮ್ಮೆ ಶಾಸಕ ಬಿ.ಸಿ. ಪಾಟೀಲರ ಹೆಸರು ತೇಲಿ ಬಂದಿದೆ. ಪಾಟೀಲರು ಮೂರನೇ ಬಾರಿ ಆಯ್ಕೆಯಾಗಿರುವುದಲ್ಲದೇ, ಈ ಭಾಗದ ಲಿಂಗಾಯತ ನಾಯಕರು. ಲೋಕಸಭಾ ಚುನಾವಣೆ ಹಿನ್ನೆಯಲ್ಲಿ ಪಕ್ಷ ಬಲವರ್ಧನೆಗಾಗಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲೆಯ ಕಾಂಗ್ರೆಸ್ ನಾಯಕರು ಬೇಡಿಕೆ ಮಂಡಿಸಿದ್ದರು. ಸಚಿವ ಸ್ಥಾನ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳು ಘೋಷಿಸಿದ್ದರು. ಈಗ ಅವರೆಲ್ಲ ಕಾದು ನೋಡುವ ತಂತ್ರಕ್ಕೆ ಮೊರೆಹೋದರೆ, ಬಿ.ಸಿ. ಪಾಟೀಲರು ತಮ್ಮ ಪ್ರಯತ್ನದಲ್ಲಿ ಮುನ್ನಡೆದಿದ್ದಾರೆ.

ರಾಜಧಾನಿಯತ್ತ
ಕಳೆದೊಂದು ವಾರದಿಂದ ಜಿಲ್ಲೆಯ ರಾಜಕಾರಣವು ಬೆಂಗಳೂರಿನಲ್ಲಿ ಕೇಂದ್ರೀಕೃತಗೊಂಡಿದೆ. ಒಂದೆಡೆ ರಾಜ್ಯ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದರೆ, ಇಲ್ಲಿನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಆಯ್ಕೆ, ರಾಣೆಬೆನ್ನೂರು ನಗರಸಭೆಯಲ್ಲಿ ಕೆಪಿಜೆಪಿ ಜೊತೆಗಿನ ಹೊಂದಾಣಿಕೆ, ಲೋಕಸಭಾ ಚುನಾವಣೆಗೆ ಸಿದ್ಧತೆಗಳ ಕುರಿತ ಚರ್ಚೆಗಳಿಗೆ ಕಾಂಗ್ರೆಸಿಗರು ಬೆಂಗಳೂರು ಸೇರಿದ್ದಾರೆ.

ಬಿಜೆಪಿಯಲ್ಲೂ ಪ್ರಭಾವಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಸಿ.ಎಂ. ಉದಾಸಿ ಅವರೂ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಶಾಸಕ ಬಿ.ಸಿ. ಪಾಟೀಲ ಹಾಗೂ ಬೆಂಬಲಿಗರು ಭೇಟಿ ಮಾಡಿ ಚರ್ಚಿಸಿದ್ದಾರೆ. ‘ಸಿದ್ದರಾಮಯ್ಯ ನಮ್ಮ ನಾಯಕರು. ಹೀಗಾಗಿ, ಇದೊಂದು ಸಾಮಾನ್ಯ ಭೇಟಿ. ಆದರೆ, ಕೆಲವು ಟಿ.ವಿ. ಮಾಧ್ಯಮಗಳು ಇದಕ್ಕೆ ವಿಭಿನ್ನ ಬಣ್ಣ ನೀಡಿದರೆ, ನಾನು ಹೇಗೆ ಉತ್ತರಿಸಲು ಸಾಧ್ಯ’ ಎಂದು ಬಿ.ಸಿ.‍ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಾನು ಸಚಿವ ಸ್ಥಾನದ ಆಕಾಂಕ್ಷಿ ಸಹಜ. ಆದರೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಆಯ್ಕೆ, ನಮ್ಮ ಜಿಲ್ಲೆಯ ರಾಜಕೀಯದ ಕುರಿತು ಕೆಪಿಸಿಸಿ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿದ್ದೇವೆ. ಇದಕ್ಕೆ ಯಾವುದೇ ಅರ್ಥ ಕಲ್ಪಿಸಬೇಕಾಗಿಲ್ಲ’ ಎಂದರು.

ಉಳಿಯುವರೋ, ಹೋಗುವರೋ!

ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅವಕಾಶ ಸಿಗದಿದ್ದರೆ, ಬಿ.ಸಿ. ಪಾಟೀಲರು ಬಿಜೆಪಿ ಹೋಗುವರೇ? ಎಂಬ ಚರ್ಚೆಗಳೇ ಕ್ಷೇತ್ರದಲ್ಲಿ ಹೆಚ್ಚಾಗಿವೆ. ಆದರೆ, ಜಿಲ್ಲೆ ಹಾಗೂ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಪ್ರಭಾವಿಗಳಿದ್ದಾರೆ. ಲಿಂಗಾಯತ ನಾಯಕರೂ ಹೆಚ್ಚಿದ್ದಾರೆ. ಇನ್ನೊಂದೆಡೆ ಬಿಜೆಪಿ ವಿರೋಧಿಸಿಕೊಂಡೇ ಈ ತನಕ ರಾಜಕಾರಣ ಮಾಡಿದ್ದು, ತಾತ್ಕಾಲಿಕವಾಗಿ ಸಚಿವರಾದರೂ, ಮುಂದಿನ ದಿನಗಳಲ್ಲಿ ಮೂಲೆಗುಂಪಾಗುವ ಅಪಾಯ ಇದೆ. ಆದರೆ, ಕಾಂಗ್ರೆಸ್‌ನಲ್ಲಿ ಉಳಿದುಕೊಂಡರೆ ಮುಂದಿನ ದಿನಗಳಲ್ಲಿ ಜಿಲ್ಲಾ ಅಥವಾ ಲಿಂಗಾಯತ ಕೋಟಾದಡಿ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ಅವರ ಕ್ಷೇತ್ರದ ಕೆಲವು ಪ್ರಮುಖರು ವಿಶ್ಲೇಷಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು