ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆಗೆ ನಾನೇ ನಿಲ್ತೀನಿ; ಬಿ.ಸಿ.ಪಾಟೀಲ

ಒಂದೂವರೆ ತಿಂಗಳ ಬಳಿಕ ಸೋಮವಾರ ಕ್ಷೇತ್ರಕ್ಕೆ ವಾಪಸ್
Last Updated 4 ಆಗಸ್ಟ್ 2019, 9:19 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿ ಬೆಂಗಳೂರು, ಮುಂಬೈ ಹಾಗೂ ದೆಹಲಿಯಲ್ಲಿ ಓಡಾಡಿಕೊಂಡಿದ್ದ ಬಿ.ಸಿ.ಪಾಟೀಲ ಅವರು ಒಂದೂವರೆ ತಿಂಗಳ ವನವಾಸದ ಬಳಿಕ ಕೊನೆಗೂ ಸೋಮವಾರ ಕ್ಷೇತ್ರಕ್ಕೆ ಮರಳಲಿದ್ದಾರೆ.

ಮೈತ್ರಿ ಸರ್ಕಾರ ಪತನಗೊಂಡ ಬೆನ್ನಲ್ಲೇ ತಮ್ಮನ್ನು ಅನರ್ಹಗೊಳಿಸಿದ ಸ್ಪೀಕರ್ ಅವರ ಕ್ರಮವನ್ನು ಪ್ರಶ್ನಿಸಿ, ಬಿ.ಸಿ.ಪಾಟೀಲ ಹಾಗೂ ಇತರೆ ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಿ ಬಿ.ಸಿ.ಪಾಟೀಲ ದೆಹಲಿಯಿಂದ ಶನಿವಾರ ವಿಮಾನದಲ್ಲಿ ಬೆಂಗಳೂರಿಗೆ ವಾಪಸಾಗಿದ್ದಾರೆ.

ಈ ವೇಳೆ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ನನ್ನ ಅರ್ಜಿಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದೆ. ಮುಂದಿನ ವಾರ ಅದು ವಿಚಾರಣೆಗೆ ಬರುತ್ತದೆ. ನ್ಯಾಯ ನನ್ನ ಪರವಾಗಿಯೇ ಇದೆ. ಶನಿವಾರ ರಾತ್ರಿ ಅಥವಾ ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಸೋಮವಾರ ಕ್ಷೇತ್ರಕ್ಕೆ ತೆರಳುತ್ತೇನೆ’ ಎಂದು ಹೇಳಿದರು.

‘ನನ್ನ ಕ್ಷೇತ್ರದಲ್ಲಿ ಕೆಲವು ಅಭಿವೃದ್ಧಿ ಕೆಲಸಗಳಾಗಬೇಕಿವೆ. ಅವುಗಳ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಿದ್ದೇನೆ. ಸದ್ಯ ಬೇರಾವುದೇ ಬೇಡಿಕೆಗಳನ್ನು ಮುಂದಿಡುವ ಸ್ಥಿತಿಯಲ್ಲಿಲ್ಲ. ಕ್ಷೇತ್ರದಲ್ಲಿ ಕೆಲವರು ತಪ್ಪು ಸಂದೇಶಗಳನ್ನು ಹರಡಿ ಅಪಪ್ರಚಾರ ಮಾಡಿದ್ದಾರೆ. ಹೀಗಾಗಿ, ಮೊದಲು ಜನರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಸೋಮವಾರ ಅಲ್ಲಿ ಸಾರ್ವಜನಿಕ ಸಭೆ ನಡೆಸುತ್ತೇನೆ’ ಎಂದರು.

ಚುನಾವಣೆಗೆ ನಾನೇ ನಿಲ್ತೀನಿ: ‘ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದ್ದು, ನಾನೇ ಕಣಕ್ಕಿಳಿಯುತ್ತೇನೆ. ಅನರ್ಹಗೊಂಡವರು ಚುನಾವಣೆಯಲ್ಲಿ ಪಾಲ್ಗೊಳ್ಳಬಾರದು ಎಂದು ಹೇಳಲು ಸ್ಪೀಕರ್ ಏನು ‘ಇಂಟರ್‌ನ್ಯಾಷನಲ್‌ ಕೋರ್ಟ್‌ ಆಫ್ ಜಸ್ಟಿಸ್’ ಅಲ್ಲ. ‘ಅನರ್ಹ ಶಾಸಕರೂ ಸ್ಪರ್ಧಿಸಬಹುದು’ ಎಂದು ಕೇಂದ್ರ ಚುನಾವಣಾ ಆಯೋಗದ ನಿವೃತ್ತ ಅಧಿಕಾರಿಯೇ ಹೇಳಿದ್ದಾರೆ. ತಮಿಳುನಾಡಿನಲ್ಲಿ ಅನರ್ಹ ಶಾಸಕ ಚುನಾವಣೆಗೆ ಸ್ಪರ್ಧಿಸಿರುವ ನಿದರ್ಶನವೂ ಇದೆ’ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಸಂಘಟನೆ: ಹಿರೇಕೆರೂರು ಹಾಗೂ ರಾಣೆಬೆನ್ನೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಮುಖಂಡರು ಈಗಾಗಲೇ ಬೂತ್ ಮಟ್ಟದ ಕಾರ್ಯಕರ್ತರನ್ನು ಬಳಸಿಕೊಂಡು ಪಕ್ಷ ಸಂಘಟನೆ ಕಾರ್ಯಕ್ಕೆ ಧುಮುಕಿದ್ದಾರೆ.

ಕೆ.ಬಿ.ಕೋಳಿವಾಡ, ಬಿ.ಎಚ್.ಬನ್ನಿಕೋಡ, ಮನೋಹರ ತಹಸೀಲ್ದಾರ, ರುದ್ರಪ್ಪ ಲಮಾಣಿ ಸೇರಿದಂತೆ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರು ಶುಕ್ರವಾರ ಕಾರ್ಯಕರ್ತರ ಬೃಹತ್ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.ಇದೀಗ ಬಿ.ಸಿ.ಪಾಟೀಲ ಕೂಡ ಮರಳುತ್ತಿರುವ ಕಾರಣ, ಕ್ಷೇತ್ರದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಲಿದೆ ಎಂಬ ಮಾತುಗಳು ಜನರಿಂದ ಕೇಳಿಬರುತ್ತಿವೆ.

‘ಭಂಡತನ ಪ್ರದರ್ಶಿಸಿದಂತೆ’

‘ಸುಪ್ರೀಂ ಕೋರ್ಟ್‌ನಲ್ಲಿ ಆದೇಶ ತಮ್ಮ ವಿರುದ್ಧವಾದರೆ ಬಿ.ಸಿ.ಪಾಟೀಲರು 2023ರವರೆಗೂ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಅದನ್ನೂ ಮೀರಿ ಏನೋ ಮಾಡಲು ಹೋದರೆ ಭಂಡತನ ಪ್ರದರ್ಶಿಸಿದಂತೆ ಆಗುತ್ತದೆ. ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದಾಗಿ ಕ್ಷೇತ್ರದಲ್ಲಿ ನನಗೆ ಜನ ಬೆಂಬಲ ಹೆಚ್ಚಾಗಿದೆ. ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಹೋದಾಗ, ಹಿಂದೆಂದೂ ಸೇರದಷ್ಟು ಜನ ಬೆನ್ನಿಗೆ ನಿಂತಿದ್ದನ್ನು ನೋಡಿ ಅಚ್ಚರಿಯಾಗಿದೆ. ವಿಶ್ವಾಸವೂ ದುಪ್ಪಟ್ಟಾಗಿದೆ’ ಎಂದು ಹಿರೇಕೆರೂರು ಕ್ಷೇತ್ರದ ಮಾಜಿ ಶಾಸಕ ಯು.ಬಿ.ಬಣಕಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT