ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಂಪರಿಕ ಭಜನಾ ಪದ ಉಳಿಯಲಿ: ಶಾಸಕ ನೆಹರು ಓಲೇಕಾರ ಅಭಿಮತ

ಭಜನಾ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ
Last Updated 12 ಫೆಬ್ರುವರಿ 2020, 14:21 IST
ಅಕ್ಷರ ಗಾತ್ರ

ಹಾವೇರಿ: ‘ನಾಡಿನ ಶರೀಫರು, ಗವಾಯಿಗಳು, ಸಂತರ ತತ್ವಪದಗಳು ಉಳಿದು ಬೆಳೆಯಲು ಭಜನಾ ಪದಗಳು ಪ್ರಮುಖ ಕಾರಣವಾಗಿವೆ. ಜನರು ಅಂಥವರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಂಡು ಮೌಲ್ಯಯುತವಾದ ಜೀವನ ನಡೆಸಬೇಕು’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮದ ಅಂಗವಾಗಿ ಬುಧವಾರ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ ಭಜನಾ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಜನಾ ಪದಗಳು ಕೇವಲ ಮನರಂಜನೆಗೆ ಅಷ್ಟೇ ಅಲ್ಲದೇ ವಿವಿಧ ಮಹಾನ ದಾರ್ಶನಿಕರ ಜೀವನದ ಚರಿತ್ರೆ, ಪುರಾಣಗಳು, ರಾಮಾಯಣ, ಮಹಾಭಾರತಗಳಂತಹ ಕಥೆಗಳನ್ನು ಅರಿತುಕೊಂಡು ಭಜನೆಗಳ ಮೂಲಕ ಜನಸಾಮಾನ್ಯರಿಗೆ ತಿಳಿಸುವಂತಹ ಪ್ರಯತ್ನವನ್ನು ಭಜನಾ ಪದಗಳು ಮಾಡುತ್ತಿವೆ. ಪ್ರಸ್ತುತ ದಿನಗಳಲ್ಲಿ ಯುವಕರು ದುಶ್ಚಟಗಳಿಂದ ದೂರವಿದ್ದು ಭಜನಾ ಪದಗಳನ್ನು ಹವ್ಯಾಸವಾಗಿ ಬೆಳೆಸಿಕೊಂಡು ಕರಗತ ಮಾಡಿಕೊಳ್ಳಬೇಕು. ಜಾನಪದ ಜಾತ್ರೆಗಳ ಹಬ್ಬ ಆಚರಣೆ ಮಾಡುವ ಮೂಲಕ ಮೂಲ ಜನಪದ ಕಲೆಗೆ ಪ್ರೋತ್ಸಾಹ ನೀಡುತ್ತಿರುವ ಸರ್ಕಾರದ ಕೆಲಸ ಶ್ಲಾಘನೀಯ ಎಂದರು.

ವಿಜೇತರಿಗೆ ಬಹುಮಾನ:ಸ್ಪರ್ಧೆಯಲ್ಲಿ ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದು, ಬಸವೇಶ್ವರ ಕಲಾ ತಂಡ ಜೋಯಿರಹಳ್ಳಿ ಪ್ರಥಮ, ಕಾಗಿನೆಲೆಯ ಮಹಾಲಕ್ಷ್ಮೀ ಕಲಾ ತಂಡ ಮತ್ತು ಕುರಬಗೊಂಡ ಗರಾಮದ ಮಲ್ಲಿಕಾರ್ಜುನ ಮಹಿಳಾ ಮಕ್ಕಳ ಕಲಾ ತಂಡ ದ್ವಿತೀಯ ಸ್ಥಾನ ಹಂಚಿಕೊಂಡರು. ಕಡಕೊಳ ಗ್ರಾಮದ ಹನುಮಂತಪ್ಪ ಕಲಿವಾಳ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.

ಸ್ಪರ್ಧೆಯಲ್ಲಿ ಎರಡು ಮಹಿಳಾ ಕಲಾ ತಂಡಗಳು ಭಾಗವಹಿಸಿದ್ದು ವಿಶೇಷವೇನಿಸಿತು. ವಿವಿಧ ಶಾಲೆಯ ಮಕ್ಕಳಿಂದ ಮೆರವಣಿಗೆಯ ಪೂರ್ವ ತಯಾರಿಯನ್ನು ಶಾಸಕರು, ಕ್ಷೇತ್ರ ಶಿಕ್ಷಾಣಾಧಿಕಾರಿ ವೀಕ್ಷಣೆ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಈರಣ್ಣ ಸಂಗೂರ ಪಾಲ್ಗೊಂಡಿದ್ದರು. ಎಂ.ಬಿ. ಕಾಳೆ ಸ್ವಾಗತಿಸಿದರು. ಬಸವರಾಜ ಶಿಗ್ಗಾವಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT