ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಬಂದ್‌: ಹಾವೇರಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ರಾಷ್ಟ್ರೀಯ ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ
Last Updated 27 ಸೆಪ್ಟೆಂಬರ್ 2021, 13:44 IST
ಅಕ್ಷರ ಗಾತ್ರ

ಹಾವೇರಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್‌ ಮೋರ್ಚಾ ಸೋಮವಾರ ಕರೆ ನೀಡಿದ್ದ ‘ಭಾರತ ಬಂದ್‌’ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರ ಮತ್ತು ಪಟ್ಟಣಗಳಲ್ಲಿ ರೈತಸಂಘಟನೆಗಳ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು. ಜಿಲ್ಲೆಯಾದ್ಯಂತ ಶಾಂತಿಯುತ ಹೋರಾಟ ನಡೆದ ಪರಿಣಾಮ ಎಲ್ಲಿಯೂ ಅಹಿತಕರ ಘಟನೆಗಳು ವರದಿಯಾಗಿಲ್ಲ.

ಬಸ್‌, ರೈಲು, ಆಟೊ, ಟ್ಯಾಕ್ಸಿ ಸಂಚಾರ ಎಂದಿನಂತೆಯೇ ಇತ್ತು. ಪ್ರತಿಭಟನೆ ನಡೆದ ಸ್ಥಳಗಳ ಸುತ್ತಮುತ್ತ ಮಾತ್ರ ಕೆಲವು ಅಂಗಡಿಗಳು ಬಾಗಿಲು ಮುಚ್ಚಿದ್ದವು. ಉಳಿದ ಕಡೆ ವ್ಯಾಪಾರ ವಹಿವಾಟು ಸುಸೂತ್ರವಾಗಿ ನಡೆಯಿತು. ಸರ್ಕಾರಿ ಕಚೇರಿ, ಶಾಲಾ–ಕಾಲೇಜು, ಹೋಟೆಲ್‌, ಚಿತ್ರಮಂದಿರ, ಶಾಪಿಂಗ್‌ ಮಾಲ್‌ಗಳು ಬಾಗಿಲು ತೆರೆದಿದ್ದವು.

ಹೆದ್ದಾರಿ ತಡೆ:

ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಟೋಲ್‌ ನಾಕಾದ ಬಳಿ ಅಖಂಡ ಕರ್ನಾಟಕ ರೈತ ಸಂಘದ ಪ್ರಕಾಶ ಯಮನಪ್ಪ ಬಾರ್ಕಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಸರಕು ಸಾಗಣೆ ವಾಹನ ಮತ್ತು ಕಾರುಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದವು.

ಹಾವೇರಿ ನಗರದಲ್ಲಿ ರೈತಸಂಘ ಮತ್ತು ಹಸಿರುಸೇನೆ, ಉತ್ತರ ಕರ್ನಾಟಕ ರೈತಸಂಘ, ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಕರ್ನಾಟಕ, ದಲಿತ ಸಂಘರ್ಷ ಸಮಿತಿ, ಬಹುಜನ ಸಮಾಜ ಪಕ್ಷ, ಎಸ್‌ಎಫ್‌ಐ, ಡಿವೈಎಫ್‌ಐ ಹಾಗೂ ಕನ್ನಡಪರ ಸಂಘಟನೆಗಳು ಭಾರತ್‌ ಬಂದ್‌ ಬೆಂಬಲಿಸಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.

270 ರೈತರ ಸಾವು:

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ, ಶಿವಬಸಪ್ಪಗೋವಿ ಮಾತನಾಡಿ, ‘ದೆಹಲಿಯಲ್ಲಿ 10 ತಿಂಗಳಿಂದ ರೈತರು ಹೋರಾಟ ನಡೆಸುತ್ತಿದ್ದು, 270 ರೈತರು ಮೃತಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೌಜನ್ಯಕ್ಕಾದರೂ ಮಾತುಕತೆಗೆ ಕರೆದಿಲ್ಲ. ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ತಕ್ಕ ಪಾಠ:

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್‌ ಖಾಸಗೀಕರಣ ಹಾಗೂ ಕಾರ್ಮಿಕರ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ರೈತರನ್ನು ಬೀದಿಪಾಲು ಮಾಡುವ ಹುನ್ನಾರ ನಡೆಯುತ್ತಿದೆ. ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ಕೂಡಲೇ ವಾಪಸ್‌ ಪಡೆಯಬೇಕು. ದೇಶದ ಸಂಪತ್ತನ್ನು ಬಂಡವಾಳಶಾಹಿಗಳಿಗೆ ಮಾರುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಬಸವರಾಜ ಕರಿಗಾರ, ಹನುಮಂತಪ್ಪ ದಿವಿಗೀಹಳ್ಳಿ, ಫಕ್ಕೀರೇಶ ಕಾಳಿ, ಫಕ್ಕೀರಗೌಡ ಗಾಜಿಗೌಡ್ರ, ಚಂದ್ರಶೇಖರ ಸುಣಗಾರ, ಹನುಮಂತಪ್ಪ ಹುಚ್ಚಣ್ಣನವರ, ಎಂ.ಎನ್‌.ನಾಯಕ, ರಾಜು ತರ್ಲಘಟ್ಟ, ಗೋಣೆಪ್ಪ ಕರಿಗಾರ, ಚನ್ನಪ್ಪ ಮರಡೂರ, ಮುತ್ತು ಗುಡಗೇರಿ, ಉಡಚಪ್ಪ ಮಾಳಗಿ, ಅಶೋಕ ಮರೆಣ್ಣನವರ, ಸುರೇಶ ಚಲವಾದಿ, ಅಕ್ಷತಾ ಕೆ.ಸಿ., ಬಸವರಾಜ ಪೂಜಾರ, ಬಸವರಾಜ ಭೋವಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT