ಹಾವೇರಿ: ಮಿಶ್ರ ಪ್ರತಿಕ್ರಿಯೆ, ‘ಮೋದಿಗೆ ಜನರ ನೋವು ಗೊತ್ತೇ ಆಗುತ್ತಿಲ್ಲ' ಎಂದರು

7

ಹಾವೇರಿ: ಮಿಶ್ರ ಪ್ರತಿಕ್ರಿಯೆ, ‘ಮೋದಿಗೆ ಜನರ ನೋವು ಗೊತ್ತೇ ಆಗುತ್ತಿಲ್ಲ' ಎಂದರು

Published:
Updated:
Deccan Herald

ಹಾವೇರಿ: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಯೇರಿಕೆ ಖಂಡಿಸಿ ಸೋಮವಾರ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಿಗ್ಗೆ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೂ, ಕ್ರಮೇಣವಾಗಿ ತೆರೆದವು. ಆದರೆ, ಎಂದಿನಂತೆ ವ್ಯಾಪಾರ–ವಹಿವಾಟುಗಳು ಕಂಡುಬಂದಿರಲಿಲ್ಲ. ಬಸ್‌ ಸಂಚಾರವಿದ್ದರೂ, ಪ್ರಯಾಣಿಕರ ಕೊರತೆಯಿಂದ ಭಣಗುಟ್ಟುತ್ತಿತ್ತು. ಜನರು ಹೆಚ್ಚಾಗಿ ತಮ್ಮ ವೈಯಕ್ತಿಕ ವಾಹನದಲ್ಲಿ ಸಂಚರಿಸುವುದು ಕಂಡುಬಂತು. ಆದರೆ, ವಾಹನ ದಟ್ಟಣೆ ಕಂಡು ಬರಲಿಲ್ಲ. ಶಾಲಾ–ಕಾಲೇಜುಗಳಿಗೆ ರಜೆಯಿದ್ದ ಕಾರಣ ಹೆಚ್ಚಿನ ಸಂಚಾರ ಕಂಡುಬರಲಿಲ್ಲ.

ಪ್ರತಿಭಟನೆ

ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜಾಥಾ ಹಾಗೂ ಪ್ರತಿಭಟನೆ ನಡೆಯಿತು. ನಗರದ ಹುಕ್ಕೇರಿ ಮಠದಿಂದ ಜಾಥಾ ಮೂಲಕ ಬಂದ ಕಾರ್ಯಕರ್ತರು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಸರ್ಕಾರಿ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡಿಕೊಂಡು ವಿಮಾನದಲ್ಲೇ ಹಾರಾಡುತ್ತಾ ಇರುತ್ತಾರೆ. ಅವರಿಗೆ ಭೂಮಿಯಲ್ಲಿರುವ ಸಾಮಾನ್ಯ ಜನರ ಬೆಲೆಯೇರಿಕೆಯ ಬಿಸಿ ಅರ್ಥವಾಗುತ್ತಿಲ್ಲ. ಮೋದಿಯವರು ಪೂರ್ಣ ಪ್ರಮಾಣದ ಸಂಸಾರಿಯೂ ಅಲ್ಲ. ಹೀಗಾಗಿ, ಜನರ ನೋವು ಗೊತ್ತೇ ಆಗುತ್ತಿಲ್ಲ’ ಎಂದು ಲೇವಡಿ ಮಾಡಿದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಿದ್ದರೂ, ಕ್ರಮಕೈಗೊಳ್ಳದೇ ಸುಮ್ಮನಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಸ್ಥಿರವಾಗಿದ್ದ ರೂಪಾಯಿ ಮೌಲ್ಯ ಹಾಗೂ ಅಡುಗೆ ಅನಿಲಗಳ ಬೆಲೆಯು ಈಗ ಶೇ 400 ರಷ್ಟು ಹೆಚ್ಚಳವಾಗಿದೆ. ಪೆಟ್ರೋಲ್‌ ಮತ್ತು ಡಿಸೇಲ್‌ ದರವನ್ನೂ ಏರಿಕೆ ಮಾಡಿದ್ದಾರೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಜಯಸಿಂಹ ಮಾತನಾಡಿ, ಉಜ್ವಲ ಯೋಜನೆ ಮೂಲಕ ಅಡುಗೆ ಅನಿಲ ಸಿಲಿಂಡರ್ ವಿತರಣೆ ಮಾಡುತ್ತಿದ್ದಾರೆ. ಇತ್ತ ಗ್ಯಾಸ್‌ ಬೆಲೆ ನಾಲ್ಕು ಪಟ್ಟು ಹೆಚ್ಚಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ನಯವಂಚನೆ ಬಗ್ಗೆ ಜನತೆ ಎಚ್ಚರ ವಹಿಸಬೇಕಾಗಿದೆ. ಸಾಮಾನ್ಯ ಜನರ ಸಮಸ್ಯೆ ನಿವಾರಣೆ ಮಾಡಲು ಕಾಂಗ್ರೆಸ್‌ ನಿಂದ ಮಾತ್ರ ಸಾಧ್ಯ ಎಂದರು.

ಎತ್ತಿನ ಬಂಡಿಯಲ್ಲಿ ಬಂದ ಕೆಪಿಸಿಸಿ ಕಾರ್ಯದರ್ಶಿ ರಾಜೇಶ್ವರಿ ಪಾಟೀಲ್‌ ಮಾತನಾಡಿ, ಬಿಜೆಪಿ ಸರ್ಕಾರವು ಮಹಿಳೆಯರ ರಕ್ಷಣೆ ಮಾಡಲು ವಿಫಲವಾಗಿದೆ. ಸಾಮಾನ್ಯ ಜನಜೀವನದ ಬದಲಾಗಿ ಬೃಹತ್ ಕಂಪನಿಗಳಗಳನ್ನು ಉದ್ಧಾರ ಮಾಡುತ್ತಿದ್ದಾರೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ ಮಾತನಾಡಿ, ನರೇಂದ್ರ ಮೋದಿ ಅವರ ‘ಮನ್‌ ಕೀ ಬಾತ್‌’ ಕೇಳಿ ಜನರಿಗೆ ಸಾಕಾಗಿದೆ. ಈಗ ಸಮಸ್ಯೆಗಳಿಗೆ ಪರಿಹಾರ ಬೇಕಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಇದ್ದಾಗ ಅಡುಗೆ ಅನಿಲದ ಸಿಲಿಂಡರ್‌ಗೆ ₹380 ಇತ್ತು. ಈಗ ಅದರ ಎರಡು ಪಟ್ಟು ಏರಿಕೆಯಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಸ್‌. ಸಿ. ಶಿಡೇನೂರ, ಜಿಲ್ಲಾ ಪಂಚಾಯ್ತಿ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಸದಸ್ಯ ಐ. ಯು. ಪಠಾಣ, ಎಸ್.ಎಫ್‌.ಎನ್‌. ಗಾಜಿಗೌಡ್ರ ಇದ್ದರು.

ಕರವೇ ಪ್ರತಿಭಟನೆ

ಬೆಲೆಯೇರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ವೇದಿಕೆಯ ಸತೀಶಗೌಡ ಜೀ ಮುದಿಗೌಡ್ರ, ಯಶವಂತಗೌಡ ದೊಡ್ಡಗೌಡ್ರ, ಬಿ.ಎಚ್.ಬಣಕಾರ, ನಾಗಯ್ಯ ಹಿರೇಮಠ, ಬಸವರಾಜ ಹೊಂಭರಡಿ, ಗಿರೀಶ ಬಾರ್ಕಿ, ಜಿ.ಎಸ್.ಕೊಟ್ರೇಶ್ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !