ಹಾವೇರಿ: ‘ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನಸಿ ಪದಾರ್ಥಗಳ ಬೆಲೆಗಳು ಗಗನಕ್ಕೇರಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದರ ಇಳಿಸುವ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಸಾಮಾನ್ಯಜನ, ರೈತರು, ಕಾರ್ಮಿಕರು ಎಲ್ಲರ ಬದುಕನ್ನು ಬೀದಿಪಾಲು ಮಾಡಿದ ಬಿಜೆಪಿಯು ಮತ ಕೇಳುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ’ ಎಂದು ಶಾಸಕ ಎಚ್.ಕೆ.ಪಾಟೀಲ ಕಿಡಿಕಾರಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೆಹಲಿಯಲ್ಲಿ ರೈತರು ಧೀರ್ಘಕಾಲ ಧರಣಿ ನಡೆಸಿದರೂ, ಅವರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಯಾವ ಮುಖ ಹೊತ್ತು ಜನರ ಬಳಿ ಮತ ಕೇಳುತ್ತಾರೆ ಎಂದು ಹರಿಹಾಯ್ದರು.
ದೇಶದ ಸಂಪತ್ತು ಬಂಡವಾಳಶಾಹಿಗಳ ಪಾಲು:ಪ್ರತಿಭಟನೆ ನಡೆಸುವ ರೈತರ ಮೇಲೆ ಕೇಂದ್ರ ಸಚಿವರ ಪುತ್ರ ಜೀಪ್ ಹರಿಸಿದ್ದು, ಮಾನವೀಯತೆಯ ಮೇಲೆ ಆದ ಪ್ರಹಾರ. ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡದಿದ್ದರೆ ಆರೋಪಿಯ ಬಂಧನವೂ ಆಗುತ್ತಿರಲಿಲ್ಲ. 70 ವರ್ಷಗಳ ಕಾಲ ರೈತರು, ಶ್ರಮಜೀವಿಗಳು ಎಲ್ಲರೂ ಕೂಡಿ ಸೃಷ್ಟಿ ಮಾಡಿದ್ದ ಸಂಪತ್ತನ್ನು ಖಾಸಗಿಯವರಿಗೆ ಮಾರುವ ಮೂಲಕ ಬಿಜೆಪಿ ಬಂಡವಾಳಶಾಹಿಗಳಿಗೆ ನಿಷ್ಠೆ ತೋರುತ್ತಿದೆ ಎಂದು ಟೀಕಿಸಿದರು.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ ಬಿಎಂಟಿಸಿ ಚಾಲಕ ಕಂ ನಿರ್ವಾಹಕನಾಗಿದ್ದ ವ್ಯಕ್ತಿಯೊಬ್ಬ ನಾಲ್ಕು ಸಾವಿರ ಕೋಟಿ ಆಸ್ತಿ ಮಾಡಿದ್ದಾನೆ. ಜನರ ತೆರಿಗೆ ಹಣವನ್ನು ಲೂಟಿ ಮಾಡಿರುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಾ? ಮುಖ್ಯ ಎಂಜಿನಿಯರ್‌ಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಸರ್ಕಾರ ನಿದ್ದೆ ಮಾಡುತ್ತಿದೆ ಎಂದು ಮೂದಲಿಸಿದರು.
ಸುಳ್ಳಿನ ಪ್ರಚಾರ:ಅಮೆಜಾನ್ ಲಂಚ ಪ್ರಕರಣದಲ್ಲಿ ₹8586 ಕೋಟಿಯನ್ನು ಸರ್ಕಾರಿ ಅಧಿಕಾರಿಗಳಿಗೆ ಕೊಟ್ಟಿದ್ದಾರೆ ಎಂದು ಮಾಧ್ಯಮ ಸಂಸ್ಥೆಯೊಂದು ಬಹಿರಂಗ ಪಡಿಸಿದೆ. ಆದರೆ, ಕೇಂದ್ರ ಸರ್ಕಾರ ಅದ್ಧೂರಿ ಜಾಹೀರಾತುಗಳ ಮೂಲಕ ಅಭಿವೃದ್ಧಿ ಪಥದತ್ತ ದೇಶ ಮುನ್ನುಗ್ಗುತ್ತಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೆಲವು ಅಭಿಮಾನಿಗಳು ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಹೇಳಿರಬಹುದು. ಆದರೆ, ನಮ್ಮ ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ. ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ, ಮುಂದಿನ ಸಿಎಂ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ, ಡಿ.ಆರ್.ಪಾಟೀಲ್, ಎಸ್.ಆರ್. ಪಾಟೀಲ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.