ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಗಾಳಿ, ಮಳೆ: ಮಾವು ಇಳುವರಿ ಕುಂಠಿತ

ರೋಣ ತಾಲ್ಲೂಕಿನ 97 ಗ್ರಾಮಗಳ ಒಂದು ಲಕ್ಷಕ್ಕೂ ಹೆಕ್ಟೇರ್‌ ಪ್ರದೇಶದಲ್ಲಿ ಮಾವಿನ ಕೃಷಿ
Last Updated 10 ಏಪ್ರಿಲ್ 2018, 8:21 IST
ಅಕ್ಷರ ಗಾತ್ರ

ರೋಣ: ಅಕಾಲಿಕ ಮಳೆ ಗಾಳಿ ಮತ್ತು ಮಳೆ ಕೊರತೆ ರೋಣ ತಾಲ್ಲೂಕಿನಲ್ಲಿ ಈ ಬಾರಿ ಮಾವಿನ ಇಳುವರಿ ಕುಸಿತ ಉಂಟಾಗಿದೆ. ಪರಿಣಾಮ ಮಾವು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಈ ಭಾಗದ ಮಾವಿನ ತೋಟಗಳಲ್ಲಿ ಒಮ್ಮೆ ಸುತ್ತಾಡಿದರೆ ಹಲವು ಮರಗಳಲ್ಲಿ ಕಾಯಿಗಳೇ ಇಲ್ಲ. ಕೆಲವು ಮರಗಳಲ್ಲಿ ಅಲ್ಲೊಂದು ಇಲ್ಲೊಂದು ಕಾಯಿಗಳು ಕಾಣುತ್ತವೆ. ಮಳೆ ಪ್ರಮಾಣ ಕಡಿಮೆಯಾದ ಕಾರಣ ಭೂಮಿಯಲ್ಲಿ ತೇವಾಂಶವಿಲ್ಲ ಒಣಹವೆಯಿಂದ ಹೂವುಗಳು ಕಾಯಿಗಳಾಗದೆ ಉದುರಿವೆ.

ರೋಣ ತಾಲ್ಲೂಕಿನ 97 ಗ್ರಾಮಗಳ ಪೈಕಿ ಸುಮಾರು 1,10,500 ಹೆಕ್ಟೇರ್ ಸಾಗುವಳಿ ಕೃಷಿ ಕ್ಷೇತ್ರವನ್ನು ಹೊಂದಿದೆ. ಗಜೇಂದ್ರಗಡ ಭಾಗದಲ್ಲಿ ಒಟ್ಟು 60 ಹೆಕ್ಟೇರ್ (160 ಎಕರೆ) ಭೂ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ನದಿ-ನಾಲೆಗಳಿಲ್ಲದ ರೋಣ ತಾಲ್ಲೂಕಿನಾದ್ಯಂತ ಅಸಮರ್ಪಕ ಮಳೆ, ವಿದ್ಯುತ್ ಕಣ್ಣಾಮುಚ್ಚಾಲೆ, ಕುಸಿಯುತ್ತಿರುವ ಅಂತರ್ಜಲ... ಹೀಗೆ ಹತ್ತಾರು ಸಮಸ್ಯೆಗಳ ಸರಮಾಲೆಯ ನಡುವೆಯೂ ಪರಿಶ್ರಮದಿಂದ ಮಾವು ಬೆಳೆಯನ್ನು ಸಂರಕ್ಷಿಸಿ ಪೋಷಿಸುತ್ತಿದ್ದಾರೆ.

ಬದಾಮಿ, ಸಿಂಧೂರ, ರಸಪೂರಿ, ತೋತಾಪುರಿ ಹಾಗೂ ನಾಟಿ ಮಾವಿನ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. “ಹಣ್ಣುಗಳ ರಾಜ” ಎಂದು ಹೆಸರು ಪಡೆದುಕೊಂಡಿರುವ ಮಾವು ಈಗಾಗಲೇ ಗಿಡದಲ್ಲಿ ತುಂಬಿ ತುಳುಕಬೇಕಾಗಿದ್ದ ಮಾವಿನ ಕಾಯಿಗಳು ಹವಾಮಾನ ವೈಪರೀತ್ಯಕ್ಕೆ ತುತ್ತಾಗಿವೆ. ಗಜೇಂದ್ರಗಡ, ಗೋಗೇರಿ, ನೆಲ್ಲೂರ, ಕಣವಿ, ಕಾಲಕಾಲೇಶ್ವರ, ದಿಂಡೂರ, ಮಾಡಲಗೇರಿ, ನೈನಾಪುರ, ಹಿರೇಹಾಳ, ಲಕ್ಕಲಕಟ್ಟಿ ಸೇರಿದಂತೆ ಇತರ ಗ್ರಾಮಗಳಲ್ಲಿನ ತೋಟ ಮತ್ತು ಹೊಲಗಳಲ್ಲಿ ಮಾವು ಬೆಳೆಯಲಾಗುತ್ತಿದೆ. ವರ್ಷಕ್ಕೆ ಒಂದೇ ಫಲ ನೀಡುವ ಮಾವಿನ ಫಸಲು ಸಮರ್ಪಕವಾಗಿ ಬರದೆ ಬೆಳೆಗಾರರಿಗೆ ಬಲವಾದ ಪೆಟ್ಟು ನೀಡಿದೆ.

ಮಳೆ ಕೊರತೆ ಮತ್ತು ವಿಪರೀತವಾದ ಬಿಸಿಲಿನ ತಾಪವೂ ಇಳುವರಿ ಕುಸಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ಇಲ್ಲದ ಕಾರಣ ಮಾವು ಬೆಳೆಯುತ್ತಿಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಿ ನಷ್ಟ ಅನುಭವಿಸುತ್ತಿದ್ದೇವೆ ಎಂಬುದು ಮಾವು ಬೆಳೆಗಾರರ ಅಳಲು.

ಒಂದು ಎಕರೆಯಲ್ಲಿ 150 ಮಾವಿನ ಗಿಡಗಳನ್ನು ಬೆಳೆಸಿದ್ದೇನೆ. ವಾರ್ಷಿಕ ಬೆಳೆ ಮಾವಿಗೆ ವರ್ಷಕ್ಕೆ ₹70 ಸಾವಿರ ಖರ್ಚು ಬರುತ್ತದೆ. ನೀರಿನ ಕೊರತೆಯಿಂದ ಒಂದು ಗಿಡದಲ್ಲಿ 1500 ರಿಂದ 2500 ಕಾಯಿ ಫಸಲು ಬಿಡುವ ಗಿಡದಲ್ಲಿ 100 ಕಾಯಿ ಸಹ ಇಲ್ಲ’ ಎಂದು ಮಾವು ಬೆಳೆಗಾರ ಶರಣಗೌಡ ಪಾಟೀಲ ಪ್ರಜಾವಾಣಿ ಎದುರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT