ಗುರುವಾರ , ಮಾರ್ಚ್ 23, 2023
29 °C
ಕೈಗಾರಿಕಾ ಕಾರಿಡಾರ್‌ ಯೋಜನೆ ಕೈಬಿಡಲು ರೈತಸಂಘ ಆಗ್ರಹ

ಹಾವೇರಿ | ಸಿಎಂಗೆ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಬ್ಯಾಡಗಿ ತಾಲ್ಲೂಕು ಮೋಟೆಬೆನ್ನೂರು ಸುತ್ತಮುತ್ತಲಿನ 1,017 ಎಕರೆ ಕೃಷಿಭೂಮಿಯನ್ನು ‘ಕೈಗಾರಿಕಾ ಕಾರಿಡಾರ್‌’ ಯೋಜನೆಗೆ ಭೂಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ, ಫೆ.1ರಂದು ಬ್ಯಾಡಗಿ ಪಟ್ಟಣಕ್ಕೆ ಬರಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರೈತಸಂಘದಿಂದ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ರೈತ ಸಂಘದ ಹಾವೇರಿ ತಾಲ್ಲೂಕು ಘಟಕದ ಅಧ್ಯಕ್ಷ ದಿಳ್ಳೆಪ್ಪ ಮಣ್ಣೂರ ತಿಳಿಸಿದರು. 

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕೃಷಿಭೂಮಿ ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ ಮೋಟೆಬೆನ್ನೂರು ಬಳಿ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದೆವು. ಆಗ 15 ದಿನಗಳ ಒಳಗಾಗಿ ಕೈಗಾರಿಕಾ ಕಾರಿಡಾರ್‌ ಯೋಜನೆ ಕೈಬಿಡುವಂತೆ ಆದೇಶ ಪ್ರತಿ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಆದೇಶ ಪ್ರತಿ ನಮ್ಮ ಕೈಸೇರಿಲ್ಲ. ಹೀಗಾಗಿ ಕಪ್ಪುಬಟ್ಟೆ ಧರಿಸಿಕೊಂಡು ‘ಗೋ ಬ್ಯಾಕ್‌ ಸಿಎಂ’ ಎಂದು ಘೇರಾವ್‌ ಹಾಕುತ್ತೇವೆ’ ಎಂದರು.

ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ ಮಾತನಾಡಿ, ‘ಜೀವ ಬಿಟ್ಟೇವು, ಕೃಷಿಭೂಮಿ ಬಿಡುವುದಿಲ್ಲ. ಕೈಗಾರಿಕಾ ಕಾರಿಡಾರ್‌ ಯೋಜನೆ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ಸಚಿವರಿಗೂ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ. ಭೂಮಿ ಉಳಿಸಿಕೊಳ್ಳಲು, ಅಗತ್ಯಬಿದ್ದರೆ ಜೈಲಿಗೆ ಹೋಗಲು ಸಿದ್ಧವಿದ್ಧೇವೆ’ ಎಂದರು. 

ರೈತ ಸಂಘದ ಗೌರವ ಕಾರ್ಯದರ್ಶಿ ಸುರೇಶ ಚಲವಾದಿ ಮಾತನಾಡಿ, ಬ್ಯಾಡಗಿ ತಾಲೂಕಿನ ರೈತರ ಫಲವತ್ತಾದ ಭೂಮಿಯನ್ನು ಒತ್ತಾಯಪೂರ್ವಕವಾಗಿ ಕಸಿದುಕೊಳ್ಳುತ್ತಿರುವುದು ರೈತ ವಿರೋಧಿಯಾಗಿದೆ. ಕಾರಿಡಾರ್‍ಗೆ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ 1017 ಎಕರೆ ರೈತರ ಭೂಮಿಯ ಪಹಣಿನ್ನು ಸರ್ಕಾರ ಲಾಕ್ ಮಾಡಿದೆ. ಹೀಗಾಗಿ ರೈತರಿಗೆ ಬೆಳೆವಿಮೆ, ಬೆಳೆ ಹಾನಿ ಪರಿಹಾರ ಸೇರಿ ಸರ್ಕಾರದ ಯಾವ ಯೋಜನೆಯ ಲಾಭ ಸಿಗದಂತಾಗಿದೆ ಎಂದು ದೂರಿದರು.

ಶಹರ ರೈತ ಸಂಘದ ಅಧ್ಯಕ್ಷ ಚಂದ್ರಶೇಖರ ಜಾವಗಲ್ಲ ಮಾತನಾಡಿ, ನಗರದ ಇಜಾರಿಲಕಮಾಪುರದ ಹದ್ದಿನ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ಜಮೀನುಗಳಿಗೆ ತೆರಳು ರೈತರ ಸುಮಾರು 8 ಕಿ.ಮೀ ಸುತ್ತುವರೆದು ಬರುವಂತಾಗಿದೆ. ಈ ಹಿನ್ನೆಲೆ ಪಿ.ಬಿ.ರಸ್ತೆ ದಾಟಲು ಕೆಳಸೇತುವೆ ಹಾಗೂ ಸರ್ವೀಸ್ ರಸ್ತೆ ನಿರ್ಮಿಸಿಬೇಕು. ಬೆಳೆವಿಮೆ, ಬೆಳೆಹಾನಿ ಪರಿಹಾರ ಶೀಘ್ರ ರೈತರ ಖಾತೆಗೆ ಜಮೆ ಮಾಡಬೇಕು. ಜಿಲ್ಲೆಯಲ್ಲಿ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕಾ ಕಾರ್ಯದರ್ಶಿ ಶಿವಯೋಗಿ ಹೊಸಗೌಡ್ರ ಇದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು