ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳಿ ನೇಯ್ಗೆ ಮೇಡ್ಲೇರಿ ಜನರ ಜೀವನಾಡಿ

ಮೇಡ್ಲೇರಿ ಗ್ರಾಮದಲ್ಲಿ ನೆಲೆಸಿದ ಬೀರೇಶ್ವರ: ಸಿಡಿಮದ್ದು ತಯಾರಿಕೆಯಲ್ಲೂ ಖ್ಯಾತಿ
Last Updated 23 ಅಕ್ಟೋಬರ್ 2021, 15:25 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನ ಮೇಡ್ಲೇರಿ ಗ್ರಾಮವು ಬೀರೇಶ್ವರ ದೇವಸ್ಥಾನ ಹಾಗೂ ಕಂಬಳಿ ನೇಯ್ಗೆಯಿಂದಲೇ ಜನಪ್ರಿಯವಾಗಿದೆ. ಪ್ರತಿ ವರ್ಷ ಶಿವರಾತ್ರಿ ಹಾಗೂ ಶ್ರಾವಣ ಮಾಸದ ಪಂಚಮಿಯಲ್ಲಿ ಜಾತ್ರೆ ನಡೆಯುತ್ತದೆ. ಭಕ್ತರು ವಿಶೇಷವಾಗಿ ಬೀರಪ್ಪ ದೇವರ ಸೇವೆ ಮಾಡುತ್ತಾರೆ.

ಇಪ್ಪತ್ತು ವರ್ಷಕ್ಕೊಮ್ಮೆ ದಿಲ್ಲಿ ಸುಲ್ತಾನ ಮತ್ತು ಫಾತಿಮಾ ಹೆಸರಿನಲ್ಲಿ ಕರಿಯಪ್ಪ ಕಾಮವ್ವ ಮತ್ತು ದಿಳ್ಳೆಪ್ಪಸ್ವಾಮಿ ಹೆಸರಿನಲ್ಲಿ ಭಾವೈಕ್ಯ ಸಾರುವ ವಿವಾಹ ಮಹೋತ್ಸವ ನಡೆಯುತ್ತದೆ ಎನ್ನುತ್ತಾರೆ ಬಿರೇಶ ಪೂಜಾರ ಮತ್ತು ನಿಂಗಪ್ಪ ಬಿಲ್ಲಾಳ.

ಕುರಿಸಾಕಣೆ ಮತ್ತು ಕಂಬಳಿ ನೇಯ್ಗೆ ಇಲ್ಲಿನ ಜನರ ಮುಖ್ಯ ಕಸುಬು. ಇದರಿಂದಲೇ ಹಲವರು ಬದುಕು ಕಟ್ಟಿಕೊಂಡಿದ್ದಾರೆ. ಕಚ್ಚಾ ಉಣ್ಣೆ, ಪ್ರೋತ್ಸಾಹದ ಕೊರತೆಯಿಂದ ಪಾರಂಪರಿಕ ಕಂಬಳಿ ನೇಯ್ಗೆ ಮಾಡುವ ವೃತ್ತಿಗೆ ಪೆಟ್ಟು ಬೀಳುತ್ತಿದೆ.

ಕಚ್ಚಾ ಉಣ್ಣೆ ಖರೀದಿಸಿ ನೂಲು ತೆಗೆದು ಕಂಬಳಿ ಸಿದ್ಧಪಡಿಸಿದ ಬಳಿಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ. ಕಂಬಳಿಗೆ ₹1200 ರಿಂದ ₹1500 ಸಿಗಬಹುದು. ಒಂದು ಕಂಬಳಿ ತಯಾರಿಸಲು 3ರಿಂದ 5 ಕೆಜಿ ಕುರಿ ಉಣ್ಣೆ, 3 ಕೆ.ಜಿ ನೂಲು, 1/2 ಕೆ.ಜಿ ಗಂಜಿ ಹಿಟ್ಟು ಬೇಕು. ಈಗ ಎಲ್ಲವೂ ದುಬಾರಿಯಾಗಿದೆ.

‘ಮಾರುಕಟ್ಟೆಯಲ್ಲಿ ದೊರೆಯುವ ವರ್ಣರಂಜಿತ ಕಂಬಳಿಗಳಿಗೆ ಮನಸೋತು ಅವುಗಳನ್ನೇ ಹೆಚ್ಚಾಗಿ ಖರೀದಿಸುತ್ತಾರೆ. ಇದರಿಂದ ನಮ್ಮ ಕಂಬಳಿಗೆ ಬೇಡಿಕೆ ಕುಸಿದಿದೆ. ಕೆಲವರು ಪಾಣಿಪತ್‌, ಹರಿಯಾಣದ ನೂಲು ತರಿಸಿಕೊಂಡು ಕಡಿಮೆ ಬೆಲೆಗೆ ಮಾರುತ್ತಾರೆ. ಚಳ್ಳಕೆರೆ ವ್ಯಾಪಾರಿಗಳು ರೆಡಿಮೇಡ್‌ ಕಂಬಳಿ ಮಾರುತ್ತಾರೆ. ನೇಯ್ಗೆ ಕಂಬಳಿ ತಯಾರಿಸಲು ಹಿಂದೇಟು ಹಾಕುವಂತಾಗಿದೆ’ ಎನ್ನುತ್ತಾರೆ ಕುಲ್ಡಪ್ಪ ಕೆ.ಪಾಶಿಗಾರ.

‘ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ನೀಡುವ ಯೋಜನೆ ರೂಪುಗೊಂಡರೆ ಮಾತ್ರ ಪರಂಪರಾಗತ ಕೌಶಲ ಉಳಿಸಿಕೊಳ್ಳಲು ಸಾಧ್ಯ. ಹಳೆಯ ಕಸುಬುಗಳಿಗೆ ಆಧುನಿಕ ಸ್ಪರ್ಶ, ತಾಂತ್ರಿಕ ತರಬೇತಿ, ಮಾರುಕಟ್ಟೆ ಉತ್ತಮಗೊಳಿಸುವುದು ಅವಶ್ಯ’ ಎನ್ನುತ್ತಾರೆ ಚಂದ್ರು ಎಲ್‌.ಪೂಜಾರ.

ಸಿಡಿಮದ್ದು ತಯಾರಿಕೆ: ಮೆಡ್ಲೇರಿ ಗ್ರಾಮ ಸಿಡಿ ಮದ್ದುಗಳ ತಯಾರಿಕೆಯಲ್ಲೂ ಪ್ರಗತಿ ಸಾಧಿಸಿದೆ. ಹಾವೇರಿ, ದಾವಣಗೆರೆ, ಬಳ್ಳಾರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಗ್ರಾಹಕರು ಸಿಡಿ ಮದ್ದುಗಳನ್ನು ಖರೀದಿಸಲು ಆಗಮಿಸುತ್ತಾರೆ.

ವಿನ್ಯಾಸದಲ್ಲೂ ಪೈಪೋಟಿ

ಹತ್ತಿ, ಉಣ್ಣೆ ಉತ್ಪನ್ನಗಳಿಗೆ ಪೈಪೋಟಿ ನೀಡುವ ದೃಷ್ಟಿಯಿಂದ ಕಂಬಳಿ ಉದ್ಯಮದಲ್ಲೂ ಹೊಸ ವಿನ್ಯಾಸ ಮತ್ತು ಬಣ್ಣದ ಕುಸುರಿ ಕಲೆಯನ್ನು ಕಾಣಬಹುದು. ರತ್ನ ಗಂಬಳಿ, ಟೇಬಲ್ ಕ್ಲಾತ್, ಟೊಪ್ಪಿಗೆ, ಚಿಕ್ಕ ಹೊದಿಕೆ, ಬ್ಯಾಗ್‌ಗಳನ್ನೂ ಕಂಬಳಿಯಲ್ಲಿ ತಯಾರಿಸಲಾಗುತ್ತದೆ. ಧಾರ್ಮಿಕ ಕಾರ್ಯಕ್ಕೆ ಬಳಸುವ ಗದ್ದುಗೆ ಕಂಬಳಿಗೆ ಅಪಾರ ಬೇಡಿಕೆ ಇದೆ. ಕಂಬಳಿಗಳಿಗೆ ನಿಗದಿತ ಬೆಂಬಲ ಬೆಲೆ ಇಲ್ಲ. ವಾರದ ವಹಿವಾಟಿನ ಮೇಲೆ ಬೆಲೆ ನಿಂತಿರುತ್ತದೆ. ರೆಡಿಮೇಡ್‌ ಕಂಬಳಿ ಹಾವಳಿಯಿಂದ ಕಂಬಳಿ ನೇಕಾರರು ತೊಂದರೆ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ದಿಳ್ಳೆಪ್ಪ ಅಣ್ಣೇರ.

20 ವರ್ಷಗಳಿಂದ ಕಂಬಳಿ ನೇಯುತ್ತಿದ್ದೇವೆ. ಕೂಲಿ ಹೋಗುವುದು ತಪ್ಪಿದೆಯೇ ಹೊರತು, ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆಯಾಗಿಲ್ಲ.
- ನಿಂಗಪ್ಪ ಎಂ.ಗೊಣ್ಣೇರ, ಕಂಬಳಿ ತಯಾರಕ

ಕಂಬಳಿ ನೇಯ್ಗೆ ಯುವಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಕಂಬಳಿ ಉದ್ಯಮ ಪುಶ್ಚೇತನಗೊಳಿಸುವ ಅಗತ್ಯವಿದೆ
- ನೀಲಪ್ಪ ಎನ್‌.ಕೂನಬೇವು, ನಿವೃತ್ತ ಕೈಗಾರಿಕಾ ವಿಸ್ತರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT