6
ಹುಸಿಯಾದ ನಿರೀಕ್ಷಿತ ಯೋಜನೆಗಳು: ಹಳೇ ಘೋಷಣೆಗಳಿಗೆ ಅನುದಾನದ ನಿರೀಕ್ಷೆ

ಇಸ್ರೇಲ್ ಮಾದರಿ ಬಿಟ್ರೆ ಬೇರೇನೂ ಇಲ್ರಿ!

Published:
Updated:
ಸಾಂದರ್ಭಿಕ ಚಿತ್ರ

ಹಾವೇರಿ: ತೋಟಗಾರಿಕಾ ವಲಯದಲ್ಲಿ ಇಸ್ರೇಲ್ ಮಾದರಿಯಲ್ಲಿ ಜಿಲ್ಲೆಯ ಐದು ಸಾವಿರ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಹಾಗೂ ಕಾಗಿನೆಲೆ ಮಹಾಸಂಸ್ಥಾನ ಪೀಠಕ್ಕೆ ಅನುದಾನ ಹೊರತುಪಡಿಸಿದರೆ, ಗುರುವಾರದ ಬಜೆಟ್‌ನಲ್ಲಿ ಜಿಲ್ಲೆಗೆ ವಿಶೇಷ ಆದ್ಯತೆ ನೀಡಿದ ಕೊಡುಗೆಗಳಿಲ್ಲ.

ಇಸ್ರೇಲ್ ಮಾದರಿ ನೀರಾವರಿಗಾಗಿ ಒಟ್ಟು ನಾಲ್ಕು ಜಿಲ್ಲೆಗಳಿಗೆ ₹ 150 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಇತರ ಮಠಗಳ ಜೊತೆಗೆ ಕಾಗಿನೆಲೆ ಮಹಾಸಂಸ್ಥಾನ ಪೀಠಕ್ಕೂ ಅನುದಾನ ನೀಡಲಾಗಿದೆ. ಆದರೆ, ಬಹುನಿರೀಕ್ಷಿತ ವೈದ್ಯಕೀಯ ಕಾಲೇಜಿಗೆ ಅನುದಾನ ಸೇರಿ ಪ್ರಮುಖ ವಿಚಾರಗಳ ಕುರಿತು ಬಜೆಟ್‌ನಲ್ಲಿ ಉಲ್ಲೇಖಗಳಿಲ್ಲ. ಇದು ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿದೆ.

ಜಿಲ್ಲೆಯು ಕೃಷಿ ಪ್ರಧಾನವಾಗಿದ್ದರೂ, ಈ ವಲಯದಲ್ಲಿ ವಿಶೇಷ ಯೋಜನೆಗಳನ್ನು ನೀಡಿಲ್ಲ. ನೀರಾವರಿ ಯೋಜನೆಗಳಲ್ಲೂ ಎಂದಿನಂತೆ ಅನುದಾನ ನೀಡಲಾಗಿದೆ. ಆದರೆ, ಜಿಲ್ಲೆಗೆ ಹಾಸನ ಮತ್ತಿತರ ಜಿಲ್ಲೆಗಳಂತೆ ಹೊಸ ಯೋಜನೆಗಳನ್ನು ನೀಡಿಲ್ಲ. ಉದ್ಯೋಗ ಸೃಷ್ಟಿಗಾಗಿ ಕೈಗಾರಿಕೆಗಳ ಅಭಿವೃದ್ಧಿಗೂ ಯಾವುದೇ ಚಿಂತನೆಗಳು ಪ್ರಕಟಗೊಂಡಿಲ್ಲ. ಈಚಿನ ವರ್ಷಗಳಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ, ಈ ನಿಟ್ಟಿನಲ್ಲಿ ಪ್ರಾಧಿಕಾರಗಳ ರಚನೆ ಅಥವಾ ಈಗಿರುವ ಪ್ರಾಧಿಕಾರಗಳಿಗೆ ವಿಶೇಷ ಅನುದಾನವನ್ನು ಘೋಷಿಸಿಲ್ಲ.

ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲವು ಜಿಲ್ಲೆಯ ಏಕೈಕ ಹಾಗೂ ಅನನ್ಯ ವಿಶ್ವವಿದ್ಯಾಲವಾಗಿದ್ದು, ಅದರ ಅಭಿವೃದ್ಧಿಗೂ ಹೆಚ್ಚುವರಿ ಅನುದಾನ, ಅಧ್ಯಯನ ಪೀಠ, ಹೊಸ ಯೋಜನೆಗಳನ್ನು ನೀಡಿಲ್ಲ. ರೈತರ ಸಂಪೂರ್ಣ ಸಾಲಮನ್ನಾ ಮಾಡುವ ನಿರೀಕ್ಷೆ ಇತ್ತು. ಆದರೆ, ಭರವಸೆ ಹುಸಿಯಾಗಿದೆ. ₹ 2 ಲಕ್ಷದ ಮಿತಿ ಹೇರಿದ್ದಾರೆ ಎಂದು ರೈತ ಮುಖಂಡ ರಾಮಣ್ಣ ಕೆಂಚಳ್ಳೇರ ಪ್ರತಿಕ್ರಿಯಿಸಿದರು.

ರೈತರ ಸಲಹಾ ಸಮಿತಿ ರಚನೆ, ಬೀಜದಿಂದ ಮಾರುಕಟ್ಟೆ ತನಕ ಮೌಲ್ಯಮಾಪನ, ಕೃಷಿ ವಲಯದ ಕುರಿತು ಮೂರು ತಿಂಗಳಿಗೊಮ್ಮೆ ಸಭೆ ಕರೆದಿರುವುದು ಸ್ವಾಗತಾರ್ಹ. ಆದರೆ, ಕನಕಪುರಕ್ಕೆ ವೈದ್ಯಕೀಯ ಕಾಲೇಜು ಘೋಷಿಸಿರುವ ಸಿ.ಎಂ., ಹಾವೇರಿ ವೈದ್ಯಕೀಯ ಕಾಲೇಜಿಗೆ ಅನುದಾನ ನೀಡುವ ಕುರಿತು ಚಕಾರವನ್ನೂ ಎತ್ತಿಲ್ಲ. ಈಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಹೆಚ್ಚಾಗುತ್ತಿದೆ. ಮೈಸೂರು ಮಾದರಿಯಲ್ಲೇ ಹಾವೇರಿ ಮಾರುಕಟ್ಟೆ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕಿತ್ತು ಎಂದು ಜೆಡಿಯು (ಶರದ್ ಯಾದವ್ ಬಣ) ರಾಜ್ಯಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಕೋರಿಶೆಟ್ಟರ್ ತಿಳಿಸಿದರು.

ರೈತರ ಸಾಲ ಮನ್ನಾ ಸ್ವಾಗತಾರ್ಹ. ಆದರೆ, ಜಿಲ್ಲೆಯಲ್ಲಿ ಮೀನುಗಾರಿಕೆ, ನೇಕಾರಿಕೆ ಮತ್ತಿತರ ವೃತ್ತಿ ಅವಲಂಬಿಸಿದ ಸಣ್ಣ ಸಣ್ಣ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅವರ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಎಂದು ನಗರಸಭೆ ಸದಸ್ಯ ಕರಬಸಪ್ಪ ಹಳದೂರ ಬೇಸರ ವ್ಯಕ್ತಪಡಿಸಿದರು.

‘ಪೆಟ್ರೋಲ್–ಡೀಸೆಲ್ ಹಾಗೂ ವಿದ್ಯುತ್ ಮೇಲಿನ ತೆರಿಗೆ ಏರಿಕೆ ಹಾಗೂ ವಾಹನ ತೆರಿಗೆಗಳ ಏರಿಕೆಯು ಈಗಾಗಲೇ ಬೆಲೆಯೇರಿಕೆಯಿಂದ ತತ್ತರಿಸಿದ ಜನಸಾಮಾನ್ಯರ ನೋವಿನ ಮೇಲೆ ಬರೆ ಎಳೆದಂತಾಗಿದೆ’ ಎಂದು ಕೋರಿಶೆಟ್ಟರ್ ಮತ್ತು ಹಳದೂರ ಖಂಡಿಸಿದರು.

ರಾಜಕೀಯ: ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿದ್ದು, ಕೆಪಿಜೆಪಿಯಿಂದ ಗೆದ್ದ ಶಾಸಕ ಆರ್. ಶಂಕರ್ ಸಚಿವರಾಗಿದ್ದಾರೆ. ಆದರೆ, ಕಾಂಗ್ರೆಸ್ ಏಕೈಕ ಸೀಟು ಗೆದ್ದಿದ್ದರೆ, ಜೆಡಿಎಸ್–ಬಿಎಸ್ಪಿ ಮೈತ್ರಿಯು ಎಲ್ಲ ಕ್ಷೇತ್ರಗಳಲ್ಲೂ ಠೇವಣಿ ಕಳೆದುಕೊಂಡಿತ್ತು. ಹೀಗಾಗಿ ಜಿಲ್ಲೆಗೆ ಬಜೆಟ್‌ನಲ್ಲೂ ಕಡಿಮೆ ಪ್ರಾತಿನಿಧ್ಯ ದೊರೆತಿರಬಹುದು ಎಂಬ ರಾಜಕೀಯ ವಿಶ್ಲೇಷಣೆಗಳು ಕೇಳಿಬಂದವು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !