ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ

ರೈತರ ಖಾತೆಗೆ ಹಣ, ಆದಾಯ ತೆರಿಗೆ ಮಿತಿ, ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ
Last Updated 1 ಫೆಬ್ರುವರಿ 2019, 15:53 IST
ಅಕ್ಷರ ಗಾತ್ರ

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್‌ ಅನ್ನು ಶುಕ್ರವಾರ ಪಿಯೂಷ್ ಗೋಯಲ್ ಮಂಡಿಸಿದ್ದು, ಜಿಲ್ಲೆಯಲ್ಲಿ ‘ಹಿಂದಿನ ವರ್ಷಗಳಿಗಿಂತ ಉತ್ತಮ’ ಎಂಬ ಅಭಿಪ್ರಾಯದ ಜೊತೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲೆಯು ಕೃಷಿ ಪ್ರಧಾನವಾಗಿದ್ದು, ರೈತರ ಕುರಿತ ಯೋಜನೆಗಳ ಬಗ್ಗೆಯೇ ಹೆಚ್ಚಿನ ನಿರೀಕ್ಷೆ ಇತ್ತು. ಹೀಗಾಗಿ, ರೈತರ ಖಾತೆಗೆ ₹6 ಸಾವಿರ ನೀಡುವ ಯೋಜನೆಗೆ ಸ್ವಾಗತ ವ್ಯಕ್ತವಾಗಿದೆ. ಆದರೆ, ಸಾಲಮನ್ನಾ ಮತ್ತು ಪೂರಕ ಯೋಜನೆಗಳು ಇಲ್ಲದಿರುವುದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿನ ನೌಕರ ವರ್ಗದ ಪೈಕಿ ₹6.5 ಲಕ್ಷದೊಳಗಿನ ಆದಾಯ ಹೊಂದಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆದಾಯ ತೆರಿಗೆ ಮಿತಿ ಏರಿಕೆಗೆ ಶ್ಲಾಘನೆ ವ್ಯಕ್ತವಾಗಿದೆ. ಅಲ್ಲದೇ, ಉಳಿತಾಯದ ಮೂಲಕ ತೆರಿಗೆ ಉಳಿಸುವ ಅವಕಾಶವೂ ಹೆಚ್ಚಿದೆ. ಆದರೆ, ₹5 ಲಕ್ಷಕ್ಕಿಂತ ಆದಾಯ ಹೆಚ್ಚಿದ್ದಲ್ಲಿ ಷರತ್ತುಗಳನ್ನು ವಿಧಿಸಿರುವುದು ಸ್ವಲ್ಪ ಹಿನ್ನಡೆ ಉಂಟುಮಾಡಿದೆ.

ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳಕ್ಕೆ ಸ್ವಾಗತ ವ್ಯಕ್ತವಾಗಿದೆ. ಸೇವೆಯನ್ನು ಕಾಯಮಾತಿ ಮಾಡಬೇಕಿತ್ತು ಎಂಬ ಬೇಡಿಕೆಯೂ ಕೇಳಿಬಂದಿದೆ. ರೈತರ ಖಾತೆಗೆ ನೇರ ನಗದು ವರ್ಗಾವಣೆ, ಅಸಂಘಟಿತ ಕಾರ್ಮಿಕ ವಲಯಕ್ಕೆ ಶ್ರಮ ಯೋಗಿ ಮಂಧಾನ್ ಪಿಂಚಣಿ ಯೋಜನೆ, ಮಹಿಳೆಯರಿಗೆ ಮಾತೃ ವಂದನಾ ಯೋಜನೆಗಳು ಆಶಾಕಿರಣ ಮೂಡಿಸಿವೆ.

‘ಸಾಲಮನ್ನಾ, ನೀರಾವರಿ ಯೋಜನೆ, ಸ್ವಾಮಿನಾಥನ್‌ ವರದಿ ಜಾರಿಯು ನಮ್ಮ ಪ್ರಮುಖ ನಿರೀಕ್ಷೆಯಾಗಿತ್ತು. ಅದಕ್ಕೆ ಸ್ಪಂದಿಸದೇ ಇರುವುದು ಬೇಸರ ಮೂಡಿಸಿದೆ. ಖಾತೆಗೆ ಹಣ, ಬಡ್ಡಿ ಕಡಿತ ಮತ್ತಿತರ ಭರವಸೆಗಳು ಪರಿಣಾಮಕಾರಿಯಾಗಿಲ್ಲ’ ಎಂದು ರೈತ ಮುಖಂಡ ರಾಮಣ್ಣ ಕೆಂಚಳ್ಳೇರ ಪ್ರತಿಕ್ರಿಯಿಸಿದ್ದಾರೆ.

ಆದಾಯ ತೆರಿಗೆ ಮಿತಿ ಏರಿಕೆ, ಬ್ಯಾಂಕ್‌ ಠೇವಣಿ ಬಡ್ಡಿ ಮೇಲೆ ₹40 ಸಾವಿರವರೆಗೆ ಆದಾಯ ತೆರಿಗೆಮೂಲ ಕಡಿತ, ಬಾಡಿಗೆ ಮೇಲೆ ಮೂಲ ಕಡಿತ, ₹50 ಸಾವಿರ ಸ್ಟಾಂಡರ್ಡ್ ಡಿಡಕ್ಷನ್, ಅಲ್ಲದೇ, ಆದಾಯ ತೆರಿಗೆ ರಿಟರ್ನ್‌ ದಾಖಲಿಸಿದ 24 ಗಂಟೆಗಳಲ್ಲಿ ಅಸೆಸ್‌ಮೆಂಟ್ ಆಗಿ, ಹೆಚ್ಚುವರಿ ಮರುಪಾವತಿಯು ಉತ್ತಮ ಹೆಜ್ಜೆಯಾಗಿದೆ ಎಂದು ಎಂದು ತೆರಿಗೆ ತಜ್ಞ ರವಿಮೆಣಸಿನಕಾಯಿ ವಿಶ್ಲೇಷಿಸಿದ್ದಾರೆ.

ಆದರೆ, ಜಿಎಸ್‌ಟಿಯಲ್ಲಿ ಇನ್ನಷ್ಟು ಸುಧಾರಣೆಗಳು ಬರಬೇಕು. ಕಿಸಾನ್ ಸಮ್ಮಾನ್ ನಿಧಿ, ಕಾಮಧೇನು ಆಯೋಗ, ಮೆಗಾ ಪಿಂಚಣಿಗಳು ಸ್ವಾಗತಾರ್ಹವಾಗಿವೆ ಎಂದು ಅವರು ವಿವರಿಸಿದ್ದಾರೆ.

ಕಾರ್ಮಿಕ ಸಶಕ್ತೀಕರಣಕ್ಕೆ ಸೂಕ್ತ ಯೋಜನೆಗಳನ್ನು ನೀಡಿಲ್ಲ ಎಂದು ಕಾರ್ಮಿಕ ಮುಖಂಡ ವಿನಾಯಕ ಕುರುಬರ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಯ ಸಿದ್ದರಾಜಕಲಕೋಟಿ, ಗಿರೀಶ್ ತುಪ್ಪದ, ಸತೀಶ ಸಂದಿಮನಿ ಮತ್ತಿತರರು ಬಜೆಟ್ ಸ್ವಾಗತಿಸಿದರೆ, ಕಾಂಗ್ರೆಸ್‌ನ ಯಾಸಿರ್ ಅರಾಫತ್ ಮತ್ತಿತರರು ನಿರಾಶದಾಯಕ ಎಂದು ಪ್ರತಿಕ್ರಿಯಿಸಿದ್ದಾರೆ. ಬಜೆಟ್‌ ಅನ್ನು ಎಂದಿನಂತೆ ಆಡಳಿತ ಪಕ್ಷದವರು ಹೊಗಳಿ, ವಿರೋಧ ಪಕ್ಷಗಳವರು ತೆಗಳಿದ್ದಾರೆ. ತೆರಿಗೆ ತಜ್ಞರು ವಿಶ್ಲೇಷಿಸುತ್ತಿದ್ದರೆ, ‘ತಮಗೇನು ಲಾಭ?’ ಎಂಬ ಹುಡುಕಾಟದಲ್ಲಿ ಜನರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT