ಭಾನುವಾರ, ಜೂಲೈ 5, 2020
28 °C

ಬಸ್ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ: ಕೆಎಸ್‌‌ಆರ್‌ಟಿಸಿ ಅಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ದೇಹದ ಉಷ್ಣಾಂಶ ತಪಾಸಣೆ ಮಾಡಿ, ಸ್ಯಾನಿಟೈಸರ್ ಹಾಕಿದ ನಂತರ, ಸಾರಿಗೆ ಸಿಬ್ಬಂದಿ ಪ್ರಯಾಣಿಕರನ್ನು ಬರಮಾಡಿಕೊಳ್ಳುತ್ತಿದ್ದಾರೆ. 

‘ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಅಂತರ ಕಾಪಾಡಿಕೊಳ್ಳುವಂತೆ ಪ್ರಯಾಣಿಕರಿಗೆ ಸೂಚನೆ ನೀಡಬೇಕು. ಬಸ್‌ ಕಿಟಕಿಯಿಂದ ಯಾರೂ ಉಗುಳದಂತೆ ಎಚ್ಚರಿಕೆ ನೀಡಬೇಕು ಎಂದು ನಮ್ಮ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ’ ಎಂದು ಸಂಚಾರ ನಿಯಂತ್ರಕ ಲೋಕೇಶ ಮಿನಗಲವರ ತಿಳಿಸಿದರು. 

‘ತಲಾ ಬಸ್‌ನಲ್ಲಿ ಗರಿಷ್ಠ 30 ಪ್ರಯಾಣಿಕರು ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. 2 ಸೀಟು ಇರುವ ಕಡೆ ಒಬ್ಬರು ಮತ್ತು ಮೂರು ಸೀಟು ಇರುವ ಕಡೆ ಇಬ್ಬರು ಪ್ರಯಾಣಿಕರು ಅಂತರ ಕಾಯ್ದುಕೊಂಡು ಕುಳಿತುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು. ಕೊರೊನಾ ಸೋಂಕು ನಿಯಂತ್ರಿಸಲು ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಪಾಲಿಸಲಾಗುತ್ತಿದೆ’ ಎಂದು ಸಂಚಾರ ನಿಯಂತ್ರಕರಾದ ಎಂ.ಎಸ್‌.ಒಗ್ಗಣ್ಣನವರ ಮತ್ತು ಎಸ್‌.ಡಿ.ಬಂಡಿವಡ್ಡರ ಮಾಹಿತಿ ನೀಡಿದರು. 

ಭಾನುವಾರ ಲಾಕ್‌ಡೌನ್‌ ಇದ್ದ ಕಾರಣ ಬಸ್‌ ಸೇವೆ ಸಂಪೂರ್ಣ ಸ್ಥಗಿತಗೊಂಡಿತ್ತು. ಸೋಮವಾರ ಬೆಂಗಳೂರಿಗೆ 8, ಹುಬ್ಬಳ್ಳಿಗೆ 16, ದಾವಣಗೆರೆಗೆ 6, ಶಿರಸಿಗೆ 5, ಗದಗಕ್ಕೆ 8 ಅಂತರ ಜಿಲ್ಲಾ ಬಸ್‌ಗಳು ಕಾರ್ಯಾಚರಣೆ ಮಾಡಿದವು. ಜತೆಗೆ, ಜಿಲ್ಲೆಯ ಒಳಗೆ ರಾಣೆಬೆನ್ನೂರಿಗೆ 12, ಹಾನಗಲ್‌ಗೆ 20, ಬ್ಯಾಡಗಿಗೆ 15, ಹಿರೇಕೆರೂರಿಗೆ 12, ಶಿಗ್ಗಾವಿ ಮತ್ತು ಸವಣೂರಿಗೆ ತಲಾ 5 ಟ್ರಿಪ್‌ಗಳನ್ನು ಮಾಡಲಾಗಿದೆ ಎಂದು ಸಂಚಾರ ನಿಯಂತ್ರಕರು ಮಾಹಿತಿ ನೀಡಿದರು. 

ಕೊರೊನಾ ಸೋಂಕಿನ ಭೀತಿ ಇನ್ನೂ ಪ್ರಯಾಣಿಕರನ್ನು ಕಾಡುತ್ತಿದೆ. ಜತೆಗೆ ಲಾಕ್‌ಡೌನ್‌ ಸಂಪೂರ್ಣ ತೆರವಾಗದ ಕಾರಣ ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ. ಪ್ರವಾಸ, ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯದ ಕಾರಣ ಜನರು ಹೆಚ್ಚಾಗಿ ಪ್ರಯಾಣ ಮಾಡುತ್ತಿಲ್ಲ ಎಂದು ಚಾಲಕ ಮತ್ತು ನಿರ್ವಾಹಕರು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು