ಶುಕ್ರವಾರ, ಡಿಸೆಂಬರ್ 4, 2020
22 °C
ಜಾನುವಾರು ಮತ್ತು ವಾಹನ ಅಲಂಕಾರಕ್ಕೆ ರಾಜಸ್ತಾನದ ಸಾಮಗ್ರಿಗಳಿಗೆ ಬಹು ಬೇಡಿಕೆ

ದೀಪಾವಳಿ ಹಬ್ಬಕ್ಕೆ ಸಡಗರದ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೋವಿಡ್‌ ಆತಂಕದ ನಡುವೆಯೂ ದೀಪಾವಳಿ ಆಚರಣೆಗಾಗಿ ಜನರು ಬಟ್ಟೆ, ಬಾಳೆಕಂದು, ಬೂದುಗುಂಬಳ, ಹೂವು–ಹಣ್ಣುಗಳನ್ನು ಸಡಗರದಿಂದ ಖರೀದಿಸುತ್ತಿದ್ದ ದೃಶ್ಯ ನಗರದಲ್ಲಿ ಶನಿವಾರ ಕಂಡು ಬಂತು. 

ನಗರದ ಎಂ.ಜಿ.ರಸ್ತೆ, ಹಳೇ ಪಿ.ಬಿ.ರಸ್ತೆ, ಗಾಂಧಿ ವೃತ್ತ, ಮೈಲಾರ ಮಹದೇವಪ್ಪ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ ಮುಂತಾದ ಕಡೆ ದೀಪಾವಳಿ ವ್ಯಾಪಾರದ ವಹಿವಾಟು ಗರಿಗೆದರಿತ್ತು. 

ಪ್ರತಿ ವರ್ಷ ದೀಪಾವಳಿ ಸಂದರ್ಭ ರಾಜಸ್ತಾನದಿಂದ ಹಾವೇರಿ ನಗರಕ್ಕೆ ಬರುವ ಮೂರ್ನಾಲ್ಕು ಕುಟುಂಬಗಳು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಾನುವಾರು ಮತ್ತು ವಾಹನಕ್ಕೆ ಬಳಸುವ ಆಲಂಕಾರಿಕ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ. ಅದೇ ರೀತಿ ಈ ವರ್ಷವೂ ಹಬ್ಬಕ್ಕೂ ಒಂದು ವಾರ ಮುಂಚೆ ಸಲೀಂ ರೆಹಮಾನ್‌ ಮತ್ತು ಇತರ ಕುಟುಂಬಗಳು ಆಗಮಿಸಿವೆ.

ರಂಗು ರಂಗಿನ ಸಾಮಗ್ರಿ: ಪ್ಲಾಸ್ಟಿಕ್‌ ತೋರಣ, ಪ್ಲಾಸ್ಟಿಕ್‌ ಹೂವು–ಹಣ್ಣುಗಳ ಗುಚ್ಛ, ರೇಷ್ಮೆ ನೂಲು, ಮಿಂಚು, ರಿಬ್ಬನ್‌, ಗೊಂಡ, ಕಪ್ಪುದಾರ (ದೃಷ್ಟಿದಾರ), ಸುನಾರಿ, ಉಣ್ಣೆದಾರ ಮುಂತಾದ ಆಲಂಕಾರಿಕ ಸಾಮಗ್ರಿಗಳನ್ನು ತಯಾರಿ ಮಾಡಿಕೊಂಡು ಲಾರಿಗಳಲ್ಲಿ ಹಾವೇರಿ ನಗರಕ್ಕೆ ಬಂದಿಳಿದಿದ್ದಾರೆ. ಸಿದ್ದಪ್ಪ ವೃತ್ತದ ರಸ್ತೆ ಬದಿಯ ‘ಫುಟ್‌ಪಾತ್‌’ನಲ್ಲಿ ದಾರ ಕಟ್ಟಿ ಸಾಮಗ್ರಿಗಳನ್ನು ನೇತು ಹಾಕಿದ್ದು, ದಾರಿಹೋಕರನ್ನು ಆಕರ್ಷಿಸುತ್ತಿದೆ. 

‘ಪ್ರತಿ ವರ್ಷ ₹2 ಲಕ್ಷ ಮೌಲ್ಯದ ಸಾಮಗ್ರಿ ತರುತ್ತೇವೆ. ಸುಮಾರು ₹4 ಲಕ್ಷ ವ್ಯಾಪಾರವಾಗುತ್ತಿತ್ತು. ಅದರಲ್ಲಿ ಸಾಗಣೆ ವೆಚ್ಚ, ಊಟ, ವಸತಿ, ಕೂಲಿ ಕಾರ್ಮಿಕರ ವೆಚ್ಚವನ್ನು ಕಳೆದು ಸುಮಾರು ₹1 ಲಕ್ಷ ಲಾಭ ಸಿಗುತ್ತಿತ್ತು. ಆದರೆ ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ವ್ಯಾಪಾರ ಶೇ 20ರಷ್ಟು ಕಡಿಮೆಯಾಗಿದೆ. ಕಾರಣ ಜಾತ್ರೆ, ಉತ್ಸವ, ಕೊಬ್ಬರಿ ಓರಿ ಸ್ಪರ್ಧೆಗಳು ಹೆಚ್ಚಾಗಿ ನಡೆಯುತ್ತಿಲ್ಲ. ಹೀಗಾಗಿ ಬೇಡಿಕೆ ಕಡಿಮೆಯಿದೆ’ ಎಂದು ವ್ಯಾಪಾರಿ ಸಲೀಂ ರೆಹಮಾನ್‌ ಹೇಳಿದರು.

ಹೋರಿಗಳಿಗೆ ತರಹೇವಾರಿ ಹಗ್ಗ: ನಾಗರ ಎಡೆ, ಹಿಡಿಮಕ್ಕಡ, ಮೂಗುದಾರ, ಉಣ್ಣೆದಾರ, ಕೊಬ್ಬರಿ ದಾರ, ರೇಷ್ಮೆ ದಾರ, ಲಾರಿ ಹಗ್ಗ, ಎತ್ತಿನ ಹಗ್ಗ ಸೇರಿದಂತೆ ನೂರಕ್ಕೂ ಹೆಚ್ಚು ವಿಧದ ಹಗ್ಗಗಳು ನಗರದ ಎಂ.ಜಿ.ರಸ್ತೆಯ ದ್ಯಾಮವ್ವನ ಪಾದಗಟ್ಟಿ ಬಳಿ ವರ್ಷಪೂರ್ತಿ ಸಿಗುತ್ತವೆ. ತರಹೇವಾರಿ ಸಾಮಗ್ರಿ ಖರೀದಿಸಲು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಅಷ್ಟೇ ಅಲ್ಲದೆ, ಶಿವಮೊಗ್ಗ, ಗದಗ, ದಾವಣಗೆರೆಯಿಂದಲೂ ರೈತರು ಬರುತ್ತಾರೆ. ₹10 ರಿಂದ ₹1000 ದವರೆಗೆ ಹಗ್ಗಗಳು ಸಿಗುತ್ತವೆ.

ದೀಪಾವಳಿಗೆ ಭರ್ಜರಿ ವ್ಯಾಪಾರ
‘ತಿಂಗಳಿಗೆ ಸುಮಾರು ₹25ರಿಂದ 30 ಸಾವಿರ ವ್ಯಾಪಾರವಾಗುತ್ತದೆ. ಆದರೆ, ದೀಪಾವಳಿ ಸಂದರ್ಭದಲ್ಲಿ ಒಂದು ವಾರದಲ್ಲಿ ಬರೋಬ್ಬರಿ ₹3ರಿಂದ ₹4 ಲಕ್ಷ ವ್ಯಾಪಾರವಾಗುತ್ತದೆ. ಸೂಲಮಟ್ಟಿಯ ಮೂರು ಕುಟುಂಬಗಳು ಈ ವ್ಯಾಪಾರವನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಈ ವರ್ಷವೂ ವ್ಯಾಪಾರ ಉತ್ತಮವಾಗಿದೆ’ ಎಂದು ವ್ಯಾಪಾರಿಗಳಾದ ಮಂಜುನಾಥ ಬೋಸ್ಲೆ ಮತ್ತು ಚಂದ್ರಕಾಂತ ಶಿಂಧೆ ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು