ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಶಿಡೇನೂರಿನಲ್ಲಿ ಮುಕ್ತೇಶ್ವರ ದೇಗುಲ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

Last Updated 1 ಫೆಬ್ರುವರಿ 2023, 14:38 IST
ಅಕ್ಷರ ಗಾತ್ರ

ಶಿಡೇನೂರು (ಹಾವೇರಿ): ‘ಧಾರ್ಮಿಕ ಕಾರ್ಯಗಳನ್ನು ಭೇದ-ಭಾವವಿಲ್ಲದೇ, ಮೇಲು-ಕೀಳು ಎನ್ನದೇ ಎಲ್ಲೂರು ಒಂದಾಗಿ ಮಾಡಬೇಕು ಎನ್ನುವ ಕಾರಣಕ್ಕೆ ನಮ್ಮ ಹಿರಿಯರು ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ. ದೇವಸ್ಥಾನಕ್ಕೆ ಹೋಗಿ ನಾನು ಎನ್ನುವ ಅಹಂ ಅನ್ನು ಬಿಟ್ಡು ದೇವರಿಗೆ ಶ್ರದ್ಧಾಭಕ್ತಿಯಿಂದ ತಲೆ ಬಾಗಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬ್ಯಾಡಗಿ ತಾಲ್ಲೂಕಿನ ಶಿಡೇನೂರು ಗ್ರಾಮದಲ್ಲಿ ಮುಕ್ತೇಶ್ವರ ದೇವಸ್ಥಾನ ಉದ್ಘಾಟನೆ ಮಾಡಿದ ಬಳಿಕ ಅವರು ಮಾತನಾಡಿದರು.

ದೇವರ ಬಳಿ ಬೇಡಿಕೆ ಪಟ್ಟಿ ಇಟ್ಟು ಈಡೇರಿಸಲು ಕೇಳಿಕೊಳ್ಳುವುದು ವ್ಯವಹಾರವಾಗುತ್ತದೆ. ಭಕ್ತಿಯಿಂದ ದೇವರ ಬಳಿ ಬೇಡಿಕೊಂಡಾಗ ದೇವರು ವರ ನೀಡುತ್ತಾನೆ. ಭಕ್ತಿಯ ಸಮರ್ಪಣೆಯಾದರೆ, ದೇವರು ಬೇಡಿಕೊಳ್ಳದಿದ್ದರೂ ನೀಡುತ್ತಾನೆ. ನೆಹರು ಓಲೇಕಾರ ಅವರು ಹುಟ್ಟೂರಿನಲ್ಲಿ ಭವ್ಯವಾದ ದೇವಸ್ಥಾನ ನಿರ್ಮಿಸಿ ಒಳ್ಳೆಯ ಕಾರ್ಯ ಮಾಡಿದ್ದಾರೆ. ಮುಕ್ತೇಶ್ವರ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದರು.

ಶಾಸಕ ನೆಹರು ಓಲೇಕಾರ ಮಾತನಾಡಿ, ‘2012ರಲ್ಲಿ ಆರಂಭವಾದ ದೇಗುಲ ನಿರ್ಮಾಣ 2023ರಲ್ಲಿ ಪೂರ್ಣಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಲೋಕಾರ್ಪಣೆಗೊಂಡಿರುವುದು ನಮಗೆಲ್ಲ ಸಂತಸ ತಂದಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ, ಬೊಮ್ಮಾಯಿ ಅವರು ಮತ್ತೊಮ್ಮೆ ಸಿಎಂ ಆಗಲಿದ್ದಾರೆ’ ಎಂದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಬಸವಣ್ಣನ ವಾಣಿಯಂತೆ ದೇಗುಲವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಇದರಿಂದ ಭಕ್ತನ ಮನಸ್ಸಿಗೆ ಶಾಂತಿ ಸಿಗುತ್ತದೆ. ಜೂಜಾಟದ ಕೇಂದ್ರವಾಗದಂತೆ ಎಚ್ಚರವಹಿಸಬೇಕು. ದೇಗುಲದ ಪಾವಿತ್ರ್ಯತೆ ಕಾಪಾಡಬೇಕು ಎಂದು ಸಲಹೆ ನೀಡಿದರು.

ಪುಸ್ತಕ ಬಿಡುಗಡೆ: ಶಿವಾನಂದ ಬೆನ್ನೂರ ವಿರಚಿತ ‘ಮುಕ್ತಿಧಾತ ಮುಕ್ತೇಶ್ವರ’ ಕೃತಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಬಿಡುಗಡೆ ಮಾಡಿದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಸಿ.ಆರ್.ಬಳ್ಳಾರಿ, ಶಿವಕುಮಾರ ಸಂಗೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT