ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂಪುಟ ಪುನರ್‌ ರಚನೆ: ಆಟೊ ನಿಲ್ಲಲಿಲ್ಲ, ಕೈಗೆ ಸಿಗಲಿಲ್ಲ

ಕಾಂಗ್ರೆಸ್‌ ಶಾಸಕ ಬಿ.ಸಿ.ಪಾಟೀಲರಿಗೆ ಸಿಗಲಿಲ್ಲ ಸಚಿವ ಸ್ಥಾನ, ಶಂಕರ್‌ ಕಳೆದುಕೊಂಡರು ‘ಅರಣ್ಯ’
Last Updated 22 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

ಹಾವೇರಿ:ರಾಜ್ಯದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಪುನರ್‌ ರಚನೆಯಿಂದ ಜಿಲ್ಲೆಗೆ ಮತ್ತೊಮ್ಮೆ ನಿರಾಶೆಯಾಗಿದೆ.

ರಾಣೆಬೆನ್ನೂರು ಕ್ಷೇತ್ರದಲ್ಲಿ ಕೆಪಿಜೆಪಿಯಿಂದ ಗೆದ್ದು ಅರಣ್ಯ ಸಚಿವರಾಗಿದ್ದ ಆರ್. ಶಂಕರ್ ಅವರಿಗೆ ಕೊಕ್ ನೀಡಿದರೆ,ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲರಿಗೆ ಸಚಿವ ಸ್ಥಾನ ಕೈ ತಪ್ಪಿದೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ ಶಾಸಕರಿದ್ದರೆ, ಹಿರೇಕೆರೂರಿನಲ್ಲಿ ಮಾತ್ರ ಕಾಂಗ್ರೆಸ್ ಇದೆ. ರಾಣೆಬೆನ್ನೂರಿನಲ್ಲಿ ಕೆಪಿಜೆಪಿಯಿಂದ ಆಯ್ಕೆಯಾಗಿದ್ದ ಆರ್. ಶಂಕರ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಸರ್ಕಾರದ ಪರವಾಗಿದ್ದ ಇಬ್ಬರಿಗೂ ನಿರಾಶೆಯಾಗಿದೆ.

ಸಚಿವ ಸ್ಥಾನ ನೀಡದಿರುವ ಬಗ್ಗೆ ಬಿ.ಸಿ.ಪಾಟೀಲರು ಬೇಸರ ವ್ಯಕ್ತಪಡಿಸಿದ್ದರೆ, ‘ಕ್ಷೇತ್ರ ಹಾಗೂ ಬಿ.ಸಿ. ಪಾಟೀಲರಿಗೆ ಅನ್ಯಾಯವಾಗಿದೆ’ ಎಂದು ಅವರ ಪುತ್ರಿ ಸಾಕ್ಷಿ ಪಾಟೀಲ ಟ್ವಿಟ್ ಮಾಡಿದ್ದಾರೆ. ಬೆಂಬಲಿಗರು ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳು ನೋವು ತೋಡಿಕೊಂಡಿದ್ದಾರೆ.ಬೆಂಗಳೂರಿನಲ್ಲಿರುವ ಆರ್. ಶಂಕರ್ ಎಂದಿನಂತೆಯೇ ಸಂಪರ್ಕಕ್ಕೆ ಸಿಗಲಿಲ್ಲ.

ನಿಲ್ಲದ ‘ಆಟೊ’:ವಿಧಾನಸಭಾ ಚುನಾವಣೆಯಲ್ಲಿ ಮಾಜಿ ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರನ್ನು ಸೋಲಿಸಿ, ಸ್ವಂತ ಬಲದಿಂದ ವಿಧಾನಸಭೆ ಪ್ರವೇಶಿಸಿದ ಆರ್. ಶಂಕರ್ ಸರ್ಕಾರ ರಚನೆಯ ‘ಶಕ್ತಿ ಕೇಂದ್ರ’ದಲ್ಲಿ ಗುರುತಿಸಿಕೊಂಡಿದ್ದರು. ರಾಣೆಬೆನ್ನೂರಿನ ಮರಳು ಮಾಫಿಯಾದಿಂದ ಬೇಸತ್ತ ಜನತೆ ಶಂಕರ್‌ ‘ಆಟೊ’ ಏರಿದ್ದರು. ಆದರೆ, ಸಚಿವರಾದ ಬಳಿಕ ಅವರು ಜನತೆಗೆ ಸಿಗುತ್ತಿಲ್ಲ ಹಾಗೂ ಕುಟುಂಬದ ಹಸ್ತಕ್ಷೇಪ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬಂತು. ಜನ ಮಾತ್ರವಲ್ಲ, ಮಾಧ್ಯಮಗಳ ಸಂಪರ್ಕಕ್ಕೂ ಸಿಲುಕದಾದರು. ಹೀಗಾಗಿ, ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿತ್ತು.

‘ಕೈ’ ತಪ್ಪಿದ ಅವಕಾಶ:ಶಂಕರ್ ರಿಂದ ತೆರವಾದ ಜಿಲ್ಲಾ ಪ್ರಾತಿನಿಧ್ಯವನ್ನು ಬಿ.ಸಿ.ಪಾಟೀಲರಿಗೆ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಸಮುದಾಯ ಪ್ರಾತಿನಿಧ್ಯದ ಲೆಕ್ಕಾಚಾರದಲ್ಲಿ ಅದೂ ಕೈ ತಪ್ಪಿ ಹೋಗಿದೆ ಎನ್ನಲಾಗಿದೆ.

ಏಳು–ಬೀಳು:1997ರ ಆಗಸ್ಟ್ 24ರಂದು ಜಿಲ್ಲೆ ರಚನೆಯಾಗಿದ್ದು, ಸಿ.ಎಂ. ಉದಾಸಿ ಮೊದಲ ಸಚಿವರಾಗಿದ್ದರು. 1999ರ ಎಸ್.ಎಂ. ಕೃಷ್ಣ ಸರ್ಕಾರದ ಆರಂಭದಲ್ಲೂ ಜಿಲ್ಲೆಗೆ ಅವಕಾಶ ಸಿಕ್ಕಿರಲಿಲ್ಲ. ಬಳಿಕ ಕೆ.ಬಿ.ಕೋಳಿವಾಡ ಸಚಿವರಾದರು.

2004ರ ಧರ್ಮಸಿಂಗ್ ಸರ್ಕಾರದಲ್ಲಿ ಬಸವರಾಜ ಹೊರಟ್ಟಿ ಉಸ್ತುವಾರಿ ಸಚಿವರಾಗಿದ್ದರು. 2006ರಲ್ಲಿ ಅಸ್ತಿತ್ವಕ್ಕೆ ಬಂದ ಜೆಡಿಎಸ್– ಬಿಜೆಪಿ ಸರ್ಕಾರದಲ್ಲಿ ಸಿ.ಎಂ. ಉದಾಸಿ ಹಾಗೂ 2008ರ ಬಿಜೆಪಿ ಸರ್ಕಾರದಲ್ಲಿ ಸಿ.ಎಂ. ಉದಾಸಿ ಮತ್ತು ಬಸವರಾಜ ಬೊಮ್ಮಾಯಿ ಸಚಿವರಾಗಿದ್ದು, ಪ್ರಭಾವಿ ಖಾತೆಗಳನ್ನು ಹೊಂದಿದ್ದರು. ನಿಗಮ–ಮಂಡಳಿಗಳಲ್ಲೂ ಹೆಚ್ಚಿನ ಪ್ರಾತಿನಿಧ್ಯ ದೊರೆತಿತ್ತು.

2013ರಲ್ಲಿ ಜಿಲ್ಲೆಯಿಂದ ನಾಲ್ಕು ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿದ್ದರು. ಆದರೆ, ಸಚಿವ ಸ್ಥಾನ ದೊರೆತಿರಲಿಲ್ಲ. 2015ರ ಅಕ್ಟೋಬರ್‌ನಲ್ಲಿ ಮನೋಹರ್ ತಹಸೀಲ್ದಾರ್‌ಗೆ ಅವಕಾಶ ದೊರೆಯಿತು. ಅವರನ್ನು ಕೈ ಬಿಟ್ಟ ಬಳಿಕ ರುದ್ರಪ್ಪ ಲಮಾಣಿ ಸಚಿವರಾಗಿದ್ದರು. ಕೆ.ಬಿ. ಕೋಳಿವಾಡ ವಿಧಾನಸಭಾಧ್ಯಕ್ಷರಾಗಿದ್ದರು.

ಜಿಲ್ಲೆಯು ಸಚಿವ ಸ್ಥಾನದಿಂದ ಆಗಾಗ್ಗೆ ವಂಚಿತವಾಗುತ್ತಿದೆ. ಅಲ್ಲದೇ, ವಿಧಾನಸಭಾ ಚುನಾವಣೆಯಲ್ಲಿ ಬ್ಯಾಡಗಿಯ ಅಂದಿನ ಶಾಸಕರ ಟಿಕೆಟ್ ತಪ್ಪಿಸಿ, ಜಿಲ್ಲೆಯಲ್ಲೇ ಕಾಂಗ್ರೆಸ್‌ ‘ಕೈ’ ಸುಟ್ಟುಕೊಂಡಿತ್ತು. ಈಗ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮತ್ತೆ ಹಿನ್ನಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT