ಗುರುವಾರ , ಆಗಸ್ಟ್ 11, 2022
21 °C
ಗ್ರಾ.ಪಂ. ಚುನಾವಣೆ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ

ಪ್ರಚಾರ ನಡೆಸಿ, ನೋಂದಣಿ ಮಾಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ವಿಧಾನಸಭಾ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತಂತೆ ಸೇರ್ಪಡೆ, ಮಾರ್ಪಾಡು, ತಿದ್ದುಪಡಿ ಒಳಗೊಂಡಂತೆ ಮತಗಟ್ಟೆವಾರು ವೈಯಕ್ತಿಕ ಗಮನಹರಿಸಿ ಪರಿಶೀಲನೆ ನಡೆಸುವಂತೆ ತಹಶೀಲ್ದಾರ್‌ಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕರಾದ ಮನೋಜ್ ಜೈನ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮತದಾರ ಪಟ್ಟಿ ಪರಿಷ್ಕರಣೆ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿದ ಅವರು, ಈಗಾಗಲೇ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಮತಗಟ್ಟೆವಾರು ವ್ಯಾಪಕ ಪ್ರಚಾರ ಮಾಡಬೇಕು. ಕಡಿಮೆ ನೋಂದಣಿ ಇರುವ ಕಡೆ ಮನೆ– ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು.

ಕೆಲವು ಮತಗಟ್ಟೆಗಳಲ್ಲಿ ಪುರುಷ ಮತದಾರರ ಅನುಪಾತದಂತೆ ಮಹಿಳಾ ಮತದಾರರ ನೋಂದಣಿಯಾಗಿಲ್ಲ. ಕೆಲ ತಾಲ್ಲೂಕುಗಳಲ್ಲಿ 80 ವರ್ಷದಿಂದ 100 ವರ್ಷ ಮೇಲ್ಪಟ್ಟವರ ಸಂಖ್ಯೆ ಹೆಚ್ಚಾಗಿದೆ. ಈ ಕುರಿತಂತೆ ಪರಿಶೀಲನೆ ನಡೆಸಿ ಮತದಾರರ ಪಟ್ಟಿ ಪರಿಷ್ಕರಣೆಗೊಳಪಡಿಸಿ. ಜೀವಂತವಿಲ್ಲದ ಮತದಾರರು ಪಟ್ಟಿಯಲ್ಲಿ ಉಳಿದಿದ್ದರೆ ಕೈಬಿಡಬೇಕು. ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳದ ಮತದಾರರ ನೋಂದಣಿಗೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ‘ಮತದಾರರ ಪರಿಷ್ಕರಣೆ ಕುರಿತಂತೆ ಎಲ್ಲ ತಹಶೀಲ್ದಾರ್‌ಗಳು ವೈಯಕ್ತಿಕವಾಗಿ ಗಮನಹರಿಸಬೇಕು ಎಂದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಮಾಹಿತಿ ನೀಡಿ, ‘ಜಿಲ್ಲೆಯಲ್ಲಿ 1470 ಮತಗಟ್ಟೆಗಳಿವೆ. ಈ ಪೈಕಿ 254 ನಗರ ಪ್ರದೇಶಗಳಲ್ಲಿ ಹಾಗೂ 1216 ಗ್ರಾಮೀಣ ಪ್ರದೇಶಗಳಲ್ಲಿವೆ. ಎಲ್ಲ ಮತಗಟ್ಟೆಗಳಿಗೂ ರ‍್ಯಾಂಪ್‌ ವ್ಯವಸ್ಥೆ, ಕುಡಿಯುವ ನೀರು, ಅಗತ್ಯ ಪೀಠೋಪಕರಣಗಳು, ವಿದ್ಯುತ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳು ಒಳಗೊಂಡಿವೆ ಎಂದರು. 

‘2019ರ ಯೋಜಿತ ಜಿಲ್ಲೆಯ ಜನಸಂಖ್ಯೆ 17,44,036 ಒಳಗೊಂಡಿದೆ. ಮತದಾರರ 18-11-2020ರ ಮತದಾರರ ನೋಂದಣಿಯಂತೆ 12,66,772 ಮತದಾರರಿದ್ದಾರೆ. ಜಿಲ್ಲೆಯ ಜನಸಂಖ್ಯೆಯ ಪ್ರತಿಶತ 71.06 ಮತದಾರರ ಪ್ರಮಾಣವಿದೆ ಎಂದು ಮಾಹಿತಿ ನೀಡಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ, ಅನ್ನಪೂರ್ಣ ಮುದಕಮ್ಮನವರ, ಚುನಾವಣಾ ತಹಶೀಲ್ದಾರ್‌ ಪ್ರಶಾಂತ ನಾಲವಾರ, ಹಾವೇರಿ ತಹಶೀಲ್ದಾರ್‌ ಜಿ.ಎಸ್.ಶಂಕರ್, ಹಾನಗಲ್ ತಹಶೀಲ್ದಾರ್‌ ಪಿ.ಎಸ್.ಯರಿಸ್ವಾಮಿ, ಶಿಗ್ಗಾವಿ ತಹಶೀಲ್ದಾರ್‌ ಪ್ರಕಾಶ ಕುದರಿ, ಸವಣೂರ ತಹಶೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗಣ್ಣನವರ, ಹಿರೇಕೆರೂರ ತಹಶೀಲ್ದಾರ್‌ ಆರ್.ಎಚ್. ಭಾಗವಾನ್, ರಾಣೆಬೆನ್ನೂರು ತಹಶೀಲ್ದಾರ್‌ ಬಸವನಗೌಡ ಕೋಟೂರ, ಬ್ಯಾಡಗಿ ತಹಶೀಲ್ದಾರ್‌ ರವಿ ಕೊರವರ ಇದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು