ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಬಿಟ್ಟು ಮೇಲೇಳದ ಎತ್ತುಗಳು

ಚರ್ಮಗಂಟು ರೋಗದಿಂದ ಬಳಲುತ್ತಿರುವ ಜಾನುವಾರು: ಆತಂಕದಲ್ಲಿ ರೈತರು
Last Updated 31 ಜುಲೈ 2022, 5:16 IST
ಅಕ್ಷರ ಗಾತ್ರ

ಗುತ್ತಲ: ಹಾವೇರಿ ನಗರ ಸೇರಿದಂತೆ ಯತ್ನಳ್ಳಿ, ಕರ್ಜಿಗಿ, ಅಗಡಿ, ದೇವಿಹೊಸೂರ, ದೇವಗಿರಿ ಮತ್ತು ಹಾವೇರಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಎತ್ತುಗಳಿಗೆ ಚರ್ಮಗಂಟು ರೋಗ ಕಂಡುಬಂದಿದ್ದು, ಈ ಕಾಯಿಲೆಯಿಂದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹಲವು ಎತ್ತುಗಳು ಮೃತಪಟ್ಟಿವೆ.

‘15 ದಿನಗಳಿಂದ ಎತ್ತು ಮಲಗಿದ್ದ ಜಾಗದಲ್ಲಿ ಮಲಗಿದೆ. ಎತ್ತು ರೋಗಕ್ಕೆ ತುತ್ತಾಗಿದ್ದು, ನಮ್ಮ ಜಮೀನು ಉಳುಮೆ ಮಾಡಲಾಗದೆ ಹುಲ್ಲು ಬೆಳೆದು ಹಾಳಾಗುತ್ತಿವೆ. ರೋಗಕ್ಕೆ ತುತ್ತಾಗಿರುವ ಎತ್ತಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ’ ಎಂದು ಯತ್ನಳ್ಳಿ ಗ್ರಾಮದ ರೈತ ಮಹಿಳೆ ಪಾರ್ವತೆವ್ವ ಜಲ್ಲಿ ಅಳಲು ತೋಡಿಕೊಂಡಿದ್ದಾರೆ.

‘ಮೈತುಂಬಾ ಗಡ್ಡೆ, ಕಾಲುಬಾವು, ಚಿಮ್ಮುತ್ತಿರುವ ರಕ್ತ, ವಿಲವಿಲ ಒದ್ದಾಡುತ್ತಿರುವ ಮೂಕ ಪ್ರಾಣಿಗಳು ಈ ವಿಚಿತ್ರ ಕಾಯಿಲೆಗೆ ನೆಲ ಬಿಟ್ಟು ಮೇಲೇಳುತ್ತಿಲ್ಲ. ಪ್ರತಿದಿನ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ನೀಡಿದರೂ ಪ್ರಯೋಜನ ಆಗುತ್ತಿಲ್ಲ’ ಎಂದು ರೈತರು ಹೇಳುತ್ತಾರೆ.

‘ಎತ್ತುಗಳು ಇಲ್ಲದೆ ರೈತರು ಉಳುಮೆ ನಿಲ್ಲಿಸಿದ್ದಾರೆ. ಉಳುಮೆ ಮಾಡದೇ ದಿಕ್ಕು ತೋಚದೆ ರೈತರು ಕಂಗಾಲಾಗಿದ್ದಾರೆ. ಗ್ರಾಮದಲ್ಲಿ ಒಂದು ಕ್ಯಾಂಪ್ ಮಾಡಿ ಎಲ್ಲ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು’ ಎಂಬುದು ಗ್ರಾಮಸ್ಥರ ಒತ್ತಾಯ.

‘ಇದು ಚರ್ಮಗಂಟು ರೋಗ. ಕೆಲವೇ ದಿನಗಳಲ್ಲಿ ಈ ರೋಗದಿಂದ ಬಳಲುತ್ತಿರುವ ಎತ್ತುಗಳಿಗೆ ಚಿಕಿತ್ಸೆ ನೀಡಲಾಗುವುದು’ ಎಂದು ಹಾವೇರಿಯ ಜಾನುವಾರು ಅಧಿಕಾರಿ ಬಿ.ಐ.ಆಡೂರ ತಿಳಿಸಿದರು.

***

ರೋಗದಿಂದ ಬಳಲುತ್ತಿರುವ ಎತ್ತುಗಳ ರಕ್ತವನ್ನು ಸಂಗ್ರಹ ಮಾಡಿ ದಾವಣಗೆರೆ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬಂದ ಮೇಲೆ ಸೂಕ್ತ ಚಿಕಿತ್ಸೆ ನೀಡಲಾಗುವುದು
– ಬಸವರಾಜಪ್ಪ ಡಿ.ಸಿ., ಸಹಾಯಕ ನಿರ್ದೇಶಕ, ಪಶುಸಂಗೋಪನಾ ಇಲಾಖೆ ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT