ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿಗೆ ಸಿಜಿಕೆ ಕೊಡುಗೆ ಅಪಾರ

ಜಿಲ್ಲೆಯ ನಾಲ್ವರಿಗೆ ಸಿ.ಜಿ.ಕೆ ರಂಗಭೂಮಿ ಪ್ರಶಸ್ತಿ ಪ್ರದಾನ: ಡಾ.ಎಂ.ಎನ್ ಸಾಲಿ ಹೇಳಿಕೆ
Last Updated 28 ಜೂನ್ 2022, 12:27 IST
ಅಕ್ಷರ ಗಾತ್ರ

ಹಾವೇರಿ: ‘ಕಲಾವಿದನ ಕಲೆಯನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಕಲೆ ಬೆಳೆಯಲು ಸಾಧ್ಯ. ಬೀದಿ ನಾಟಕಗಳು ರಂಗಭೂಮಿಯ ಅತ್ಯಂತ ಪ್ರಭಾವ ಶಾಲಿ ಮಾಧ್ಯಮ. ರಂಗಕರ್ಮಿ ದಿ.ಸಿ.ಜಿ. ಕೃಷ್ಣಮೂರ್ತಿ ಅವರು ರಂಗಕಲೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಬೆಳೆಸಿದರು’ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಎಂ.ಎನ್ ಸಾಲಿ ಹೇಳಿದರು.

ಕರ್ನಾಟಕ ಬೀದಿ ನಾಟಕ ಅಕಾಡೆಮಿ ಬೆಂಗಳೂರು, ಗೆಳೆಯರ ಬಳಗ, ಜಿಲ್ಲಾ ಕಲಾ ಬಳಗ ಹಾಗೂ ಸಖಿ ಸಾಂಗತ್ಯ ವೇದಿಕೆ ಹಾವೇರಿ ಸಂಸ್ಥೆಗಳು ಸಂಯುಕ್ತವಾಗಿ ನಗರದ ಗೆಳೆಯರ ಬಳಗದ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ 2020–21 ಮತ್ತು 2021–22ನೇ ಸಾಲಿನ ಸಿ.ಜಿ.ಕೆ ರಂಗಭೂಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜನಸಾಮಾನ್ಯರ ಪ್ರೀತಿಯ ಕಲೆ:

ಅಧ್ಯಕ್ಷತೆ ವಹಿಸಿದ್ದ ಜ್ಞಾನಗಂಗಾ ಶಿಕ್ಷಣ ಸಮಿತಿಯ ಛೇರಮನ್‌ ಸಿ.ಎಂ. ಪಟ್ಟಣಶೆಟ್ಟಿ, ‘ರಂಗಭೂಮಿ ಎಲ್ಲ ಕಾಲಕ್ಕೂ ಜನಸಾಮಾನ್ಯರ ಪ್ರೀತಿಯ ಕಲೆ. ನಮ್ಮ ಗೆಳೆಯರ ಬಳಗ ಸಂಸ್ಥೆ ಆರಂಭದಲ್ಲಿ ಖ್ಯಾತ ನಾಟಕಕಾರರಾದ ಆರ್.ಡಿ ಕಾಮತರ ‘ಹಿಮಾಚಲದ ಆಚೆ’ ನಾಟಕ ಪ್ರದರ್ಶನದ ಮೂಲಕವೇ ಧನ ಸಂಗ್ರಹಿಸಿ ಬೆಳೆದದ್ದು, ಸಂಸ್ಥೆ ಸದಾ ಕಲೆಗೆ ಪ್ರೋತ್ಸಾಹಿಸುತ್ತದೆ’ ಎಂದೂ ಹೇಳಿದರು.

ದೊಡ್ಡಾಟ ಕಲಾವಿದೆ ಪರಿಮಳಾ ಜೈನ್ ಮಾತನಾಡಿ, ‘ರಂಗಭೂಮಿ ಎಂದರೆ ವ್ಯವಸ್ಥೆಯ ಬಗ್ಗೆ ಎಲ್ಲವನ್ನೂ ವ್ಯಾಖ್ಯಾನಿಸುವ ಮುಕ್ತ ಅನುಭವ ಮಂಟಪ. ದೊಡ್ಡಾಟ ಕಲೆ ಶ್ರಮಜೀವಿಗಳದ್ದು, ಆದ್ದರಿಂದಲೇ ಅದು ರಾಜ್ಯದ 24 ಜಿಲ್ಲೆಗಳಲ್ಲಿ ಈಗಲೂ ಉಳಿದಿದೆ’ ಎಂದರು.

ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಚಂದ್ರಪ್ಪ ಸೊಬಟಿ, ‘ಮೂರು ದಶಕಗಳ ಕಾಲ ಹಳ್ಳಿ ಹಳ್ಳಿ ಸುತ್ತಾಡಿ ಬೀದಿ ನಾಟಕಗಳನ್ನು ಪ್ರಯೋಗ ಮಾಡಿ, ‘ಸಿ.ಜಿ.ಕೆ’ ಅವರು ಅವರದೇಯಾದ ಮಾದರಿಯನ್ನು ಸೃಷ್ಟಿಸಿದರು. ಆರಂಭದಲ್ಲಿ ಅಂಗವೈಕಲ್ಯದ ಕಾರಣದಿಂದಾಗಿ ಅವಮಾನಿತಾರದರೂ ಕೊನೆಗೆ ಅವಮಾನಿಸಿದವರೇ ಆರಾಧನೆ ಮಾಡುವ ಮಟ್ಟಕ್ಕೆ ಬೆಳೆದರು’ ಎಂದರು.

ಪ್ರಶಸ್ತಿ ಪ್ರದಾನ:

ಜಿಲ್ಲೆಯ ನಾಲ್ವರು ಕಲಾವಿದರಾದಜಿಲ್ಲೆಯ ನಾಲ್ವರು ಕಲಾವಿದರಾದ ಶೇಷಗಿರಿಯ ಜಮೀರ ಪಠಾಣ (ರಂಗಕರ್ಮಿ) ಗೊಟಗೋಡಿ ಜಾನಪದ ವಿವಿಯ ಡಾ.ಗೀತಾ ಸಿದ್ಧಿ (ನಿರ್ದೇಶಕಿ) ಹಾವೇರಿಯ ಶಂಕರ ಮಡಿವಾಳರ (ನಾಟಕಕಾರ) ಹಾಗೂ ಹಾನಗಲ್‌ನ ಬಾಲಚಂದ್ರ ಅಂಬಿಗೇರ (ನಟ/ಗಾಯಕ ) ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಸಿ.ಜಿ.ಕೆ ಮತ್ತು ರಂಗಭೂಮಿ’ ಎಂಬ ವಿಷಯ ಕುರಿತು ಮೊದಲು ಇಲ್ಲಿಯ ಜಿ.ಎಚ್. ಕಾಲೇಜಿನ ಪ್ರಾಧ್ಯಾಪಕ ಶಮಂತಕುಮಾರ ಕೆ.ಎಸ್. ಮಾತನಾಡಿದರು.

ಎಸ್. ಆರ್. ಹಿರೇಮಠ ಸ್ವಾಗತಿಸಿದರು. ಸಖಿ ಸಾಂಗತ್ಯ ವೇದಿಕೆಯ ಅಧ್ಯಕ್ಷೆ ಡಾ.ಮಹಾದೇವಿ ಕಣವಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ‘ಸಿ.ಜಿ.ಕೆ’ ರಂಗಭೂಮಿ ಪ್ರಶಸ್ತಿ ನಡೆದು ಬಂದ ಹಾದಿಯನ್ನು ಪರಿಚಯಿಸಿದರು. ನಾಗರಾಜ ನಡುವಿನಮಠ ಮತ್ತು ಆರ್.ಸಿ. ನಂದೀಹಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು. ಮಲ್ಲಿಕಾರ್ಜುನ ಹಿಂಚಿಗೇರಿ ವಂದಿಸಿದರು.

ಶೇಷಗಿರಿ ಕಲಾ ತಂಡದವರಿಂದ ಸ್ವಾತಂತ್ರ್ಯ ಸೇನಾನಿ ಮೆಣಸಿನಾಳ ತಿಮ್ಮನಗೌಡರ ಜೀವನ ಆಧಾರಿತ ‘ಮರಳಿ ಬಾರದವರು’ ಎಂಬ ಕಿರುನಾಟಕ ಪ್ರದರ್ಶನ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT