ಹಾವೇರಿ: ಹೊಲದಲ್ಲಿ ಕಳೆನಾಶಕ ಸಿಂಪಡಿಸಿದ ಬಳಿಕ ಊಟ ಮಾಡಿ ಅಸ್ವಸ್ಥಗೊಂಡಿದ್ದ ರೈತ ಶಿವಾಜಿ ಸೋಮಪ್ಪ ಸಾಲಿ (48) ಎಂಬುವವರು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಬುಧವಾರ ಮೃತಪಟ್ಟಿದ್ದು, ಈ ಬಗ್ಗೆ ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ತಾಲ್ಲೂಕಿನ ಗಣಜೂರು ಗ್ರಾಮದ ಶಿವಾಜಿ ಅವರು ಆಗಸ್ಟ್ 3ರಂದು ಗೋವಿನ ಜೋಳದ ಹೊಲದಲ್ಲಿ ಕಳೆನಾಶಕ ಸಿಂಪಡಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ಸ್ಥಳಾಂತರಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.
‘ತೀವ್ರ ಅಸ್ವಸ್ಥಗೊಂಡಿದ್ದ ಶಿವಾಜಿ, ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಅವರ ಸಾವಿನ ಸಂಬಂಧ ಸಹೋದರ ಕೃಷ್ಣಪ್ಪ ಸಾಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ. ಶಿವಾಜಿ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ’ ಎಂದು ತಿಳಿಸಿದರು.
ಕಳೆನಾಶಕ ಸಿಂಪಡಿಸಿದ್ದ ಕೈಯಿಂದ ಊಟ: ‘ಗೋವಿನ ಜೋಳದ ಹೊಲದಲ್ಲಿ ಕಳೆ ಹೆಚ್ಚಾಗಿತ್ತು. ಅದನ್ನು ನಾಶಪಡಿಸಲು ಕಳೆನಾಶಕ ತರಲಾಗಿತ್ತು. ಅದೇ ಕಳೆನಾಶಕವನ್ನು ಕಳೆಗೆ ಸಿಂಪಡಿಸಲು ಶಿವಾಜಿ ಅವರು ಪತ್ನಿ ಹಾಗೂ ಇತರರ ಸಮೇತ ಹೊಲಕ್ಕೆ ಹೋಗಿದ್ದರು’ ಎಂದು ಕೋಳೂರು ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ಸಹೋದರ ಕೃಷ್ಣಪ್ಪ ಸಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ನೀರಿನ ಜೊತೆಯಲ್ಲಿ ಕಳೆನಾಶಕ ಮಿಶ್ರಣ ಮಾಡಿದ್ದ ಶಿವಾಜಿ, ಪಂಪ್ ಮೂಲಕ ಹೊಲದಲ್ಲಿದ್ದ ಕಳೆಗೆ ಸಿಂಪಡಿಸಿದ್ದರು. ಕಳೆನಾಶಕದ ಅಂಶ ಅವರ ಕೈಗೆ ಅಂಟಿಕೊಂಡಿತ್ತು. ಮಧ್ಯಾಹ್ನ 3 ಗಂಟೆಗೆ ಪತ್ನಿ ಹಾಗೂ ಇತರರ ಜೊತೆ ಶಿವಾಜಿ ಅವರು ಊಟ ಮಾಡಲು ಮುಂದಾಗಿದ್ದರು.’
‘ಕಳೆನಾಶಕ ಸಿಂಪಡಿಸಿದ್ದ ಕೈಯಿಂದಲೇ ಶಿವಾಜಿ ಅವರು ಊಟ ಮಾಡಿದ್ದರು. ಕೆಲ ನಿಮಿಷಗಳ ನಂತರ, ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಅಸ್ವಸ್ಥಗೊಂಡು ಹೊಲದಲ್ಲಿಯೇ ಅವರು ಕುಸಿದು ಬಿದ್ದಿದ್ದರು. ಪತ್ನಿ ಹಾಗೂ ಇತರರು, ಶಿವಾಜಿ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿತ್ತು’ ಎಂದು ಅವರು ಹೇಳಿದರು.
‘ಆಸ್ಪತ್ರೆಯಲ್ಲಿದ್ದ ಶಿವಾಜಿ ಅವರಿಗೆ ಪ್ರಜ್ಞೆಯೇ ಬರಲಿಲ್ಲ. ಬುಧವಾರ ಅವರು ತೀರಿಕೊಂಡರು. ಕಳೆನಾಶಕದಿಂದ ಅವರ ಪ್ರಾಣವೇ ಹೋಗಿದೆ. ರೈತರು ಕಳೆನಾಶಕ ಸಿಂಪಡಣೆ ಮಾಡುವ ಸಂದರ್ಭದಲ್ಲಿ ಸಾಕಷ್ಟು ಮುಂಜಾಗ್ರತೆಗಳನ್ನು ವಹಿಸಬೇಕು. ಸ್ವಚ್ಛವಾಗಿ ಕೈ ತೊಳೆದುಕೊಂಡು ಆಹಾರ ಸೇವಿಸಬೇಕು. ನನ್ನ ಅಣ್ಣನಿಗಾದ ರೀತಿಯಲ್ಲಿ ಬೇರೆ ಯಾರಿಗೂ ಆಗಬಾರದು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.