ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ನೋವಿಗೆ ಮಿಡಿದ ‘ಆಯೋಗ’

ಸ್ಥಳದಲ್ಲೇ ಸ್ಪಂದನೆ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಅಧಿಕಾರಿಗಳು
Last Updated 14 ಡಿಸೆಂಬರ್ 2018, 13:09 IST
ಅಕ್ಷರ ಗಾತ್ರ

ಹಾವೇರಿ:‘ನನಗೆ ಐದು ಜನ ಮಕ್ಕಳು. ನಾಲ್ಕು ಹೆಣ್ಣು. ಐದನೇ ಮಗುವಿಗೆ ಎರಡೂ ಜನನೇಂದ್ರಿಗಳಿವೆ. ಗಂಡೋ, ಹೆಣ್ಣೋ ಗೊತ್ತಿಲ್ಲ. ಮೂತ್ರವಿಸರ್ಜನೆ ಮಗು ಜೀವ ಹೋದಷ್ಟು ಸಂಕಟ ಪಡುತ್ತದೆ. ಆಸುಪಾಸಿನ ವೈದ್ಯರು– ಅಧಿಕಾರಿಗಳು ಮಾತ್ರವಲ್ಲ, ಬೆಂಗಳೂರು ತನಕವೂ ಹೋಗಿಬಂದಿದ್ದೇವೆ. ಪರಿಹಾರ ಸಿಕ್ಕಿಲ್ಲ...’ ಎಂದು ಶಿಗ್ಗಾವಿಯ ದುಷ್ಯಂತ ಭರಮಣ್ಣ ನೋವು ತೋಡಿಕೊಂಡಾಗ, ಮಗು ಹನುಮವ್ವ ಮೌನವಾಗಿ ಕುಳಿತ್ತಿತ್ತು.

‘ಮಗುವಿನ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು’ ಎಂದು ಆಯೋಗದ ಸದಸ್ಯ ಕೆ.ಬಿ. ರೂಪನಾಯ್ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರಸ್ವಾಮಿ ಎಚ್.ಎಸ್. ಅವರನ್ನು ಪ್ರಶ್ನಿಸಿದರು. ‘ಈ ಸಮಸ್ಯೆಯ ಬಗ್ಗೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ, ಸುಮಾರು ₹5 ಲಕ್ಷ ತನಕ ಸರ್ಕಾರಿ ವೆಚ್ಚದಲ್ಲೇ ಚಿಕಿತ್ಸೆ ನೀಡುತ್ತೇವೆ’ ಎಂದು ಭರವಸೆ ನೀಡಿದರು.

–ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ನಗರದ ಗುರು ಭವನದಲ್ಲಿ ಶುಕ್ರವಾರ ಹಮ್ಮಿಕೊಂಡ ‘ಮಕ್ಕಳ ಹಕ್ಕುಗಳು ಮತ್ತು ಅಹವಾಲು’ ಕಾರ್ಯಕ್ರಮದಲ್ಲಿ ಮುಗ್ಧ ಮಕ್ಕಳ ನೋವುಗಳು ಹಾಗೂ ಮಾನವೀಯತೆ ಸ್ಪಂದನೆಯು ಕಠಿಣ ಮನಸ್ಸುಗಳೂ ಕರಗುವಂತಿತ್ತು.

ರಾಣೆಬೆನ್ನೂರಿನ ಮರಿಯಪ್ಪ, ‘ನನ್ನ ಮಗ ತಲಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದಾನೆ. ಚಿಕಿತ್ಸೆಗೆ ಹೋದರೆ, ಕೂಲಿ ಇಲ್ಲ. ಕೂಲಿಗೆ ಹೋಗದಿದ್ದರೆ, ಊಟಕ್ಕಿಲ್ಲ. ಏನು ಮಾಡಲಿ’ ಎಂದು ಕೇಳಿದರು. ದಾವಣಗೆರೆಯ ತಜ್ಞ ವೈದ್ಯ ಮಂಜುನಾಥ ಅವರಿಗೆ ತಕ್ಷಣವೇ ಕರೆ ಮಾಡಿದ ಡಿಎಚ್ಒ, ಭೇಟಿಗಾಗಿ ಸಮಯ ನಿಗದಿ ಪಡಿಸಿದರು. ಅವರ ಸಲಹೆಯಂತೆ ಸರ್ಕಾರಿ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದರು.

ಕೆಲವು ನಿರ್ವಾಹಕರು ಇಬ್ಬರಿಗಿಂತ ಹೆಚ್ಚು ಅಂಧಮಕ್ಕಳನ್ನು ಬಸ್‌ಗೆ ಹತ್ತಲು ಬಿಡುವುದಿಲ್ಲ ಎಂದು ರಾಣೆಬೆನ್ನೂರಿನ ಶಿವರಂಜಿನಿ ಮತ್ತಿತರು ನೋವು ತೋಡಿಕೊಂಡರು. ಪರಿಶೀಲನೆ ನಡೆಸಿ, ಸೂಚನೆ ನೀಡಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿನೋದ ಹೆಗ್ಗಳಗಿ ತಿಳಿಸಿದರು. ಆಯೋಗದಿಂದ ರಾಜ್ಯದ ಎಲ್ಲ ಸಾರಿಗೆ ಸಂಸ್ಥೆಗಳಿಗೆ ನೋಟಿಸ್ ನೀಡಲಾಗುವುದು ಎಂದ ರೂಪನಾಯ್ಕ, ವಿಆರ್‌ಡಬ್ಲ್ಯೂ ಮತ್ತು ಎಂಆರ್‌ಡಬ್ಲ್ಹೂಗಳು ಮಕ್ಕಳ ಸಮಸ್ಯೆಯನ್ನು ಯಾಕೆ ಗುರುತಿಸುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮಕ್ಕಳ ರಕ್ಷಣಾಧಿಕಾರಿಗೆ ಸೂಚನೆ ನೀಡಿದರು.

240 ಮಕ್ಕಳಿರುವ ಕಂಚಿನೆಗಳೂರು ಶಾಲೆಯಲ್ಲಿ ಶೌಚಾಲಯ ಇಲ್ಲದಿರುವ ಕುರಿತು ಬಾಲಕ ಪ್ರವೀಣ, ಗ್ರಾಮ ಸಭೆ ನಡೆಯದ ಬಗ್ಗೆ ಬಾಲಕ ಬಸವರಾಜ, ಅಂಗವಿಕಲರ ಸಲಕರಣೆಗಳ ಬಗ್ಗೆ ಮಾರನಬೀಡದ ಬಸಪ್ಪ ಗಮನಸೆಳೆದರು. ಗ್ರಾಮ ಸಭೆ ನಡೆಸುವ ಬಗ್ಗೆ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಾಫರ್ ಸುತಾರ ಭರವಸೆ ನೀಡಿದರು.

ಜಿಲ್ಲಾಡಳಿತಕ್ಕೆ ಸೂಚನೆ:ಪ್ರತಿ ಸರ್ಕಾರಿ ಕಟ್ಟಡಕ್ಕೂ ರ್‍ಯಾಂಪ್ ಕಡ್ಡಾಯ.ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಮಕ್ಕಳ ಗ್ರಾಮ ಸಭೆ ನಡೆಸಬೇಕು. ಪ್ರತಿ ಶಾಲೆಯಲ್ಲೂ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು (1098) ಕಡ್ಡಾಯವಾಗಿ ಹಾಕಬೇಕು. ಪ್ರತಿ ತಾಲ್ಲೂಕಿನಲ್ಲೂ ಮಕ್ಕಳ ಸಮಸ್ಯೆಗಳಿಗೆ ಸಂಬಂಧಿಸಿದ ಸಭೆಯನ್ನು ನಡೆಸಬೇಕು. ಸಂಬಂಧಿತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಅಹವಾಲು ಸ್ವೀಕಾರ ಸಭೆ ನಡೆಸಿ, ಸಮಸ್ಯೆಗಳ ತ್ವರಿತ ಇತ್ಯರ್ಥಕ್ಕೆ ಪ್ರಯತ್ನಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಜಿಲ್ಲಾಡಳಿತಕ್ಕೆ ಸೂಚನೆ ನೀಡಿತು.

ಮಕ್ಕಳ ಹಕ್ಕುಗಳ ರಕ್ಷಣೆಯೂ ಪ್ರತಿ ವ್ಯಕ್ತಿಯ ಕರ್ತವ್ಯ. ತಮ್ಮ ಮಕ್ಕಳಂತೆ ಇತರ ಮಕ್ಕಳನ್ನು ಕಾಣಿ ಎಂದು ಆಯೋಗದ ಅಧ್ಯಕ್ಷ ಮರಿಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT