ಗುರುವಾರ , ಡಿಸೆಂಬರ್ 8, 2022
18 °C
ಸರ್ಕಾರಿ ಕಚೇರಿಗಳಿಗೆ ಪೋಷಕರ ಅಲೆದಾಟ

ಹಾವೇರಿ: ಶಿಕ್ಷಣದಿಂದ ವಂಚಿತರಾದ ಹೆಳವ ಮಕ್ಕಳು, ಸೌಲಭ್ಯ ಕಲ್ಪಿಸಲು ಮೀನಮೇಷ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಒಂದೂವರೆ ವರ್ಷದ ಹಿಂದೆ ಗಂಡ ತೀರಿ ಹೋದ. ಊರೂರು ತಿರುಗಿ ಭಿಕ್ಷೆ ಬೇಡಿ ಐವರು ಹೆಣ್ಣುಮಕ್ಕಳನ್ನು ಸಾಕ್ತಾ ಇದ್ದೇನೆ. ಯಾರಾದರೂ ಏನಾದರೂ ಕೊಟ್ಟರೆ ನಮ್ಮ ಜೀವನ ನಡಿತೈತೆ. ತಂದೆ ಇಲ್ಲದ ಮಕ್ಕಳನ್ನು ಶಾಲೆಗೆ ಸೇರಿಸಿ ಪುಣ್ಯ ಕಟ್ಟಿಕೊಳ್ಳಿ...’ ಎಂದು ಹೆಳವ ಸಮುದಾಯದ ಫಕ್ಕೀರವ್ವ ಜಡೆಣ್ಣವರ ಕಣ್ಣೀರು ಸುರಿಸಿದರು. 

ತಾಲ್ಲೂಕಿನ ದೇವಗಿರಿ ಸಮೀಪದ ಖಾಲಿ ನಿವೇಶನದಲ್ಲಿ ಕಳೆದ ಎರಡೂವರೆ ತಿಂಗಳಿಂದ ಹೆಳವ ಸಮುದಾಯದ ಸುಮಾರು 57 ಕುಟುಂಬಗಳ 250 ಮಂದಿ ಬೀಡುಬಿಟ್ಟಿದ್ದಾರೆ. 15ಕ್ಕೂ ಹೆಚ್ಚು ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿ, ಪರಿತಪಿಸುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಸೇರಿಸಲು ಸಾಧ್ಯವಾಗದೆ ಪೋಷಕರು ಅಸಹಾಯಕರಾಗಿದ್ದಾರೆ. 

‘ಜಿಲ್ಲಾಡಳಿತ ಭವನದ ಕೂಗಳತೆ ದೂರದಲ್ಲಿ ನೆಲೆಸಿದ್ದರೂ, ನಮ್ಮ ನೋವು, ಸಂಕಟ ಅಧಿಕಾರಿಗಳಿಗೆ ಕೇಳುತ್ತಿಲ್ಲ. ಅವರಿವರ ಸಹಾಯ ಪಡೆದು ಸರ್ಕಾರಿ ಕಚೇರಿ, ಶಾಲೆ, ಹಾಸ್ಟೆಲ್‌ಗಳನ್ನು ಎಡತಾಕಿದರೂ, ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ಅಧಿಕಾರಿಗಳು ಕುಂಟು ನೆಪ ಹೇಳುತ್ತಿದ್ದಾರೆ’ ಎಂದು ಮಕ್ಕಳ ತಾಯಂದಿರು ನೋವು ತೋಡಿಕೊಂಡರು. 

ಎಲ್ಲಿಂದ ದಾಖಲೆ ತರೋಣ: ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆ ಮೂಲದವರಾದ ಈ ಅಲೆಮಾರಿ ಜನಾಂಗದ ಬಹುತೇಕ ಕುಟುಂಬಸ್ಥರಿಗೆ ಆಧಾರ್ ಕಾರ್ಡ್‌, ರೇಷನ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಇಲ್ಲ. ಮಕ್ಕಳನ್ನು ಶಾಲೆಗೆ ಸೇರಿಸಲು ‘ಜನನ ಪ್ರಮಾಣ ಪತ್ರ’ವೂ ಇವರ ಬಳಿಯಿಲ್ಲ. ಹೀಗಾಗಿ ದಾಖಲೆಗಳಿಲ್ಲದ ಮಕ್ಕಳಿಗೆ ವಸತಿ ಶಾಲೆ ಸೌಲಭ್ಯ ಕಲ್ಪಿಸುವುದು ಕಷ್ಟ ಎಂದು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

‘ನಾವು ಶಾಲೆಯ ಮುಖವನ್ನೇ ನೋಡಿಲ್ಲ. ನಮ್ಮ ಮಕ್ಕಳಾದರೂ ಎರಡಕ್ಷರ ಕಲಿತು ಉದ್ಧಾರ ಆಗಲಿ ಎಂದು ಆಸೆಪಡುತ್ತಿದ್ದೇವೆ.  ಊರೂರು ಅಲೆಯುವ ನಾವು ಎಲ್ಲಿಂದ ದಾಖಲೆ ತರೋಣ ಸ್ವಾಮಿ’ ಎಂದು ಯಲ್ಲಮ್ಮ, ದ್ಯಾಮವ್ವ ಮುಂತಾದ ಮಹಿಳೆಯರು ಅಸಹಾಯಕತೆ ವ್ಯಕ್ತಪಡಿಸಿದರು. 

ಅಧಿಕಾರಿಗಳ ನಿರಾಸಕ್ತಿ: ‘10ರಿಂದ 15 ವರ್ಷದೊಳಗಿನ 8 ಗಂಡು ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿ, ಅನುಮತಿ ಪಡೆದ ನಂತರ ಹಾವೇರಿ ನಗರದಲ್ಲಿರುವ ‘ಶ್ರೀ ಶಕ್ತಿ ಮಕ್ಕಳ ತೆರೆದ ತಂಗುದಾಣ’ಕ್ಕೆ ಸೇರಿಸಲಾಗಿದೆ. ಇಬ್ಬರು ಹೆಣ್ಣುಮಕ್ಕಳಿಗೆ ಬಿಸಿಎಂ ಹಾಸ್ಟೆಲ್‌ ಸೌಲಭ್ಯ ಕಲ್ಪಿಸಲಾಗಿದೆ. 6ರಿಂದ 14 ವರ್ಷದೊಳಗಿನ ಇನ್ನೂ 13 ಮಕ್ಕಳಿಗೆ ವಸತಿ ಶಾಲೆಯ ಸೌಲಭ್ಯ ಕಲ್ಪಿಸಲು ತೀವ್ರ ಪ್ರಯತ್ನ ನಡೆಸಿದರೂ, ಅಧಿಕಾರಿಗಳ ನಿರಾಸಕ್ತಿಯಿಂದ ಸಾಧ್ಯವಾಗಿಲ್ಲ’ ಎಂದು ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಅಸಮಾಧಾನ ವ್ಯಕ್ತಪಡಿಸಿದರು. 

‘ವಿಶೇಷ ಪ್ರಕರಣ ಎಂದು ಪರಿಗಣಿಸಿ’
ಹೆಳವರು ಅಲೆಮಾರಿ ಜನಾಂಗದವರಾಗಿದ್ದು, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ತುಂಬಾ ಹಿಂದುಳಿದಿದ್ದಾರೆ. ಒಂದು ಕಡೆ ನೆಲೆ ನಿಲ್ಲದ ಕಾರಣ, ಮಕ್ಕಳಿಗೆ ಶಿಕ್ಷಣ ಕೊಡಿಸಲು ಇವರಿಗೆ ಸಾಧ್ಯವಾಗುತ್ತಿಲ್ಲ. ಕೆಲವು ಮಕ್ಕಳು ಶಾಲೆಯನ್ನು ಅರ್ಧಕ್ಕೆ ಬಿಟ್ಟವರಾಗಿದ್ದು, ಇನ್ನೂ ಕೆಲವರು ಶಾಲೆಯ ಮುಖವನ್ನೇ ನೋಡದವರಾಗಿದ್ದಾರೆ ಎಂದು ಸಾಮಾಜಿಕ ಪರಿವರ್ತನಾ ಜನಾಂದೋಲನದ ಜಿಲ್ಲಾ ಸಂಚಾಲಕಿ ಹಸೀನಾ ಹೆಡಿಯಾಲ ತಿಳಿಸಿದರು.

ಬಡತನ, ಅನಕ್ಷರತೆಯಿಂದ ಬಾಲ್ಯವಿವಾಹ ಪ್ರಕರಣಗಳು ಅಲೆಮಾರಿ ಸಮುದಾಯಗಳಲ್ಲಿ ಹೆಚ್ಚಾಗಿ ನಡೆಯುತ್ತವೆ. ಹೀಗಾಗಿ ಈ ಮಕ್ಕಳನ್ನು ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿ, ಯಾವುದೇ ದಾಖಲೆಗಳಿಲ್ಲದಿದ್ದರೂ ವಸತಿ ಶಾಲೆಗೆ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. 

***

ನಾಲ್ಕೈದು ಹಾಸ್ಟೆಲ್‌ ಅಡ್ಡಾಡಿದರೂ ಸೀಟುಗಳು ಭರ್ತಿಯಾಗಿವೆ ಎಂದು ಹೆಳವ ಮಕ್ಕಳಿಗೆ ಪ್ರವೇಶ ನೀಡಿಲ್ಲ. ದಾಖಲಾತಿ ಕೊರತೆಯಿಂದ ಶಾಲೆಗೂ ಸೇರಿಸಿಕೊಂಡಿಲ್ಲ.
– ಬಸವರಾಜ ಭೋವಿ, ಜಿಲ್ಲಾ ಸಹ ಕಾರ್ಯದರ್ಶಿ, ಎಸ್‌ಎಫ್‌ಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು