ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರು ನಗರದ ಸ್ವಚ್ಛತಾ ಸೈನಿಕರು: ಸಂಜೀವಕುಮಾರ ನೀರಲಗಿ

Last Updated 23 ಸೆಪ್ಟೆಂಬರ್ 2022, 15:38 IST
ಅಕ್ಷರ ಗಾತ್ರ

ಹಾವೇರಿ: ‘ದೇಶದ ಗಡಿ ಕಾಯಲು ಸೈನಿಕರಿದ್ದಂತೆ ನಗರದ ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರಿದ್ದಾರೆ. ಪೌರಕಾರ್ಮಿಕರು ಆರೋಗ್ಯವಾಗಿದ್ದರೆ ನಗರ ಆರೋಗ್ಯವಾಗಿದ್ದಂತೆ. ಪೌರಕಾರ್ಮಿಕರ ಆರೋಗ್ಯವೇ ಸಾರ್ವಜನಿಕರ ಭಾಗ್ಯ’ ಎಂದು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ನಗರದ ಗುರುಭವನದಲ್ಲಿ ಶುಕ್ರವಾರ ಪೌರಾಡಳಿತ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಜರುಗಿದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎರಡು ವರ್ಷಗಳಿಂದ ನಗರಸಭೆಯಿಂದ ಸ್ವಚ್ಛತೆಯಲ್ಲಿ ಸುಧಾರಣೆ ಕಂಡಿದೆ. ಮತ್ತಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ನಗರದ ಪ್ರತಿ ಮನೆಗೂ ಹಸಿ ಕಸ ಹಾಗೂ ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸಲು 32 ಸಾವಿರ ಡಸ್ಟ್ ಬಿನ್‍ಗಳನ್ನು ಗುಜರಾತ್ ಮೂಲದಿಂದ ಆಮದು ಮಾಡಿಕೊಳ್ಳಲು ₹58 ಲಕ್ಷದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ ಕೆಲವೇ ದಿನಗಳಲ್ಲಿ ಮನೆಗಳಿಗೆ ತಲುಪಿಸುವ ಕಾರ್ಯವಾಗಲಿದೆ ಎಂದರು.

ಸಾರ್ವಜನಿಕರಿಂದ ಸಂಗ್ರಹಿಸಿದ ಕಸವನ್ನು ಮಷಿನ್‌ ಸಹಾಯದಿಂದ ಗೊಬ್ಬರವನ್ನಾಗಿ ಪರಿವರ್ತಿಸಿ ಮಾರಾಟ ಮಾಡಲಾಗುವುದು. ₹60 ಲಕ್ಷ ವೆಚ್ಚದಲ್ಲಿ ಸ್ವೀಪಿಂಗ್‌ ಮಷಿನ್ ಹಾಗೂ ₹23 ಲಕ್ಷ ವೆಚ್ಚದಲ್ಲಿ ಕಸ ಕ್ಲೀನಿಂಗ್‌ ಮಷಿನ್ ತಂದು ನಗರದಲ್ಲಿ ಎರಡು ಒಣ ಕಸ ಘಟಕ ಸ್ಥಾಪಿಸಲಾಗುತ್ತದೆ ಎಂದರು.

ಸಚಿವ ಸಂಪುಟದಲ್ಲಿ 11,133 ಪೌರಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ನೇಮಿಸಿಕೊಳ್ಳಲಾಗಿದೆ. ನಗರೋತ್ಥಾನ ಯೋಜನೆಯಲ್ಲಿ ಪೌರಕಾರ್ಮಿಕ ಹಾಗೂ ಗುತ್ತಿಗೆ ಕಾರ್ಮಿಕರಿಗಾಗಿ ಜೀವ ವಿಮೆಗೆ ₹14 ಲಕ್ಷ, ಗೃಹ ಭಾಗ್ಯಕ್ಕಾಗಿ ₹50 ಲಕ್ಷ, ಪರಿಶಿಷ್ಟ ಜಾತಿ ಪೌರಕಾರ್ಮಿಕರಿಗೆ ಸ್ವಯಂ ಉದ್ಯೋಗಕ್ಕಾಗಿ ₹10 ಲಕ್ಷ, ಸುರಕ್ಷೆ ಮತ್ತು ವೈದ್ಯಕೀಯ ನೆರವಿಗೆ ₹29 ಲಕ್ಷ, ಪ್ರತಿ ವರ್ಷದಂತೆ ನಿನ್ನೆಯೂ ಕೂಡ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ. ನಿವೇಶನಕ್ಕಾಗಿ ₹48 ಲಕ್ಷ, ಪೌರಕಾರ್ಮಿಕ ಮಕ್ಕಳ ಕೆ.ಎ.ಎಸ್, ಐ.ಎ.ಎಸ್ ಹಾಗೂ ಇತರ ತರಬೇತಿಗಾಗಿ ₹16 ಲಕ್ಷ ಹಾಗೂ ಪ್ರತಿ ವರ್ಷ ಆಯ್ದ ಎರಡು ಪೌರಕಾರ್ಮಿಕರನ್ನು ಸಿಂಗಾಪುರ ವಿದೇಶ ಪ್ರಯಾಣಕ್ಕಾಗಿ ಹಣ ಮೀಸಲಿಡಲಾಗಿದೆ ಎಂದರು.

ನಗರದಲ್ಲಿ ನವೆಂಬರ್‌ ತಿಂಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದರಿಂದ ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆಯಿದೆ. ನಗರದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಿ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಹಾವೇರಿ ನಗರದ ಹೆಸರು ಬರುವಂತೆ ಮಾಡಿ ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೆ ಶ್ರಮಿಸಬೇಕು ಎಂದರು.

ನಗರಸಭೆ ಪೌರಾಯುಕ್ತ ಶಿವಾನಂದ ಉಳ್ಳೆಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದಿಂದ ಪೌರಕಾರ್ಮಿಕರಿಗೆ ವಸತಿ ಭಾಗ್ಯ, ಆರೋಗ್ಯ ಭಾಗ್ಯ, ವಿಮೆ ಹಾಗೂ ಮಕ್ಕಳ ಶಿಕ್ಷಣಕ್ಕೆ ವಿವಿಧ ಸೌಲಭ್ಯ ಕಲ್ಪಿಸಿದ್ದು ಪೌರಕಾರ್ಮಿಕರು ಇದರ ಸದುಪಯೋಗ ಪಡೆದುಕೊಂಡು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಉತ್ತಮ ಭವಿಷ್ಯವನ್ನು ರೂಪಿಸಬೇಕು ಎಂದರು.

ನಗರಸಭೆಯಿಂದ ನಗರದ ಸ್ವಚ್ಛತೆಗೆ ಶ್ರಮಿಸಿದ ಆಯ್ದ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಗರಸಭೆ ಉಪಾಧ್ಯಕ್ಷೆ ಜಹೀರಾಬಾನು ಜಮಾದಾರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ ಡಂಬಳ, ನಗರಸಭೆ ಯೋಜನಾ ನಿರ್ದೇಶಕಿ ಗೀತಾ, ನಗರಸಭೆ ಸದಸ್ಯರಾದ ವಿಶಾಲಾಕ್ಷಿ ಆನವಟ್ಟಿ, ರೇಣುಕಾ, ರಜಿಯಾಬೇಗಂ ಹುಸೇನ್‍ಸಾಬ್, ಚೈತ್ರಾ, ಮಂಜುನಾಥ ನಾಮನಿರ್ದೇಶಿತ ಸದಸ್ಯರಾದ ಶಿವರಾಜ ಮತ್ತಿಹಳ್ಳಿ, ರತ್ನಾ ಭೀಮಕ್ಕನವರ, ಉಮೇಶ ಹಾಗೂ ಪೌರಕಾರ್ಮಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT