ರಫೇಲ್: ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ

7
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಶಾಸಕ ಸಿ.ಎಂ. ಉದಾಸಿ

ರಫೇಲ್: ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ

Published:
Updated:
Deccan Herald

ಹಾವೇರಿ: ಈ ಹಿಂದಿನ ಕಾಂಗ್ರೆಸ್‌ ನೇತೃತ್ವದ ಯಪಿಎ ಸರ್ಕಾರದ ಅವಧಿಯಲ್ಲಿ ‘ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ’ ನಡೆದಿದ್ದು,  ಅದೊಂದು ‘ಹಗರಣ’ ಎಂದು ಕಾಂಗ್ರೆಸ್‌ ಈಗ ಆರೋಪಿಸುತ್ತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಲೋಕಸಭಾ ಚುನಾವಣೆಗಾಗಿ ಈ ರೀತಿ ಆರೋಪ ಮಾಡುತ್ತಿದೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು. 

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಪ್ಪಂದವು ದೇಶದ ಭದ್ರತೆಗೆ ಸಂಬಂಧಿಸಿದ್ದು, ಬಹಿರಂಗಪಡಿಸಲು ಸಾಧ್ಯವಿಲ್ಲ ಎಂಬುದನ್ನು ಕೇಂದ್ರ ಸ್ಪಷ್ಟಪಡಿಸಿದೆ. ಆದರೆ, ಭಾರತ ಬಂದ್‌ ಮಾಡಿ ಬೆಂಬಲ ಸಿಗದ ಕಾಂಗ್ರೆಸ್ ಮತ್ತೊಂದು ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಛೇಡಿಸಿದರು. 

ಇಂಧನ ಬೆಲೆಯೇರಿಕೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವ್ಯತ್ಯಯವೇ ಕಾರಣವಾಗಿದ್ದು, ಹಲವಾರು ದೇಶಗಳು ಈ ಸಮಸ್ಯೆ ಎದುರಿಸುತ್ತಿವೆ ಎಂದರು. 

ಕಾಂಗ್ರೆಸ್‌, ಬಡವರ ಹೆಸರಿನಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿತ್ತು. ಆದರೆ, ನಾಲ್ಕು ದಶಕಗಳ ಬಳಿಕವೂ ಬ್ಯಾಂಕ್‌ಗಳ ಬಾಗಿಲು ಬಡವರಿಗೆ ತೆರೆದಿರಲಿಲ್ಲ. ಮೋದಿ ಅವರು  30ಕೋಟಿಗೂ ಅಧಿಕ ಜನರಿಗೆ ಖಾತೆ ಮಾಡಿಸಿಕೊಟ್ಟರು ಎಂದರು.

ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ನೀಡಬೇಕು ಎಂದು ಕೆಲವರು ಬೇಡಿಕೆ ಮಂಡಿಸಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ನನಗೇನೂ ಗೊತ್ತಿಲ್ಲ, ಆದರೆ, ಶಿವಕುಮಾರ ಉದಾಸಿ ಸ್ಥಳೀಯವಾಗಿ ಲಭ್ಯವಾಗುತ್ತಿಲ್ಲ ಎಂದು ಈ ಹಿಂದೆಯೂ ಕೆಲವರು ಆರೋಪ ಮಾಡಿದ್ದರು. ಆ ಸಂದರ್ಭದಲ್ಲಿ, ಇಂದಿನ ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಹಲವು ನಾಯಕರು ‘ಉತ್ತಮವಾಗಿ ಕೆಲಸ ಮಾಡುವ ಹಾಗೂ ಜನಸಂಪರ್ಕ ಹೊಂದಿದ ಸಂಸದ ಶಿವಕುಮಾರ’ ಎಂದು ತಿಳಿಸಿದ್ದರು. ಚುನಾವಣೆಯಲ್ಲಿ ಜನತೆ ಆಯ್ಕೆಯೂ ಮಾಡಿದ್ದಾರೆ. ಚುನಾವಣೆ ಸಮೀಪಿಸಿದಾಗ ವಿವಿಧ ಬೇಡಿಕೆಗಳು ಸಹಜ. ಆದರೆ, ಶಿವಕುಮಾರ ಅವರು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿ ಇರುತ್ತಾರೆ’ ಎಂದರು.

‘ಈಗ ಯಾವುದೂ ಸರಿಯಿಲ್ಲ’
ಈಗ ಯಾವುದೂ ಸರಿಯಿಲ್ಲ. ಎಲ್ಲವನ್ನೂ ಕಾಲವೇ ತೀರ್ಮಾನಿಸುತ್ತದೆ. ಯಾರ ಬಳಿಯೂ ಇತರ ಪಕ್ಷಗಳ ಶಾಸಕರು ಸಂಪರ್ಕದಲ್ಲಿ ಇದ್ದಂತೆ ಕಾಣುವುದಿಲ್ಲ ಎಂದು ಶಾಸಕ ಸಿ.ಎಂ. ಉದಾಸಿ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್–ಜೆಡಿಎಸ್‌ನ ಕೆಲವು ಶಾಸಕರು ಬಿಜೆಪಿ ಜೊತೆ ಹಾಗೂ ಬಿಜೆಪಿಯ ಶಾಸಕರು ಕಾಂಗ್ರೆಸ್–ಜೆಡಿಎಸ್ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿಗಳ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !