ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಸೋಲು

ರಾಣೆಬೆನ್ನೂರು ನಗರಸಭೆ: ಸ್ವಪಕ್ಷೀಯರ ‘ಅವಿಶ್ವಾಸ’ ಮಣಿಸಿದ ರೂಪಾ, ಶಾಸಕ ಅರುಣಕುಮಾರಗೆ ಮುಖಭಂಗ
Last Updated 14 ಮೇ 2022, 2:40 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನಗರಸಭೆ ಅಧ್ಯಕ್ಷೆ ರೂಪಾ ರಾಘವೇಂದ್ರ ಚಿನ್ನಿಕಟ್ಟಿ ರಾಜಕೀಯ ತಂತ್ರಗಾರಿಕೆ ಪ್ರದರ್ಶಿಸಿ ಅವಿಶ್ವಾಸ ಗೊತ್ತುವಳಿ ಮಣಿಸಿದರು. ತಮಗೆ ಬಹುಮತ ಇದೆ ಎಂದು ಸಾಬೀತುಪಡಿಸುವ ಮೂಲಕ ವಿರೋಧಿಗಳಿಗೆ ತಿರುಗೇಟು ನೀಡಿದರು. ಪಕ್ಷದ ಹೈಕಮಾಂಡ್ ಸಲಹೆಯನ್ನು ಮೀರಿ ಸ್ವಪಕ್ಷದ ಅಧ್ಯಕ್ಷೆಯ ಪದಚ್ಯುತಿಗೆ ಮುಂದಾಗಿದ್ದ ಶಾಸಕ ಅರುಣಕುಮಾರ ಗುತ್ತೂರು ಭಾರಿ ಮುಖಭಂಗ ಅನುಭವಿಸಿದರು.

ರೆಸಾರ್ಟ್‌ನಲ್ಲಿದ್ದ ಬಿಜೆಪಿ ಸದಸ್ಯರ ಪೈಕಿ ಇಬ್ಬರು ರೂಪಾ ಅವರ ಪರವಾಗಿ ನಿಲ್ಲುವ ಮೂಲಕ ಆಶ್ಚರ್ಯಮೂಡಿಸಿದರು. ಕಾಂಗ್ರೆಸ್‌ ಹಾಗೂ ಕೆಪಿಜೆಪಿ ಸದಸ್ಯರು ಸಹ ಹಾಲಿ ಅಧ್ಯಕ್ಷರ ಪರವಾಗಿ ನಿಂತಿದ್ದು, ಕಮಲ ಕಳವಳಕ್ಕೆ ಕಾರಣವಾಯಿತು. ಭಾರೀ ಕುತೂಹಲ ಕೆರಳಿಸಿದ್ದ ಅವಿಶ್ವಾಸ ಗೊತ್ತುವಳಿ ಸಭೆ ಅಷ್ಟೇ ರೋಚಕ ಅಂತ್ಯಕಂಡಿತು.

ಸ್ವಪಕ್ಷೀಯರೇ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದ ಕಾರಣ ವಿಶೇಷ ಸಾಮಾನ್ಯ ಸಭೆಯನ್ನು ಶುಕ್ರವಾರ ಕರೆಯಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಸಭೆ ಹಾಜರಾಗುತ್ತಿದ್ದಂತೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ತೆರವಾಗಿದ್ದರಿಂದ ಇರುವ ಸದಸ್ಯರಲ್ಲಿ ಹಿರಿಯ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ ಅವರನ್ನು ಸರ್ವ ಸದಸ್ಯರು ಹಂಗಾಮಿ ಅಧ್ಯಕ್ಷರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಿದರು. ನಂತರ ಅವರ ಅಧ್ಯಕ್ಷತೆಯಲ್ಲಿ ಅವಿಶ್ವಾಸ ಮಂಡನೆ ಸಭೆ ನಡೆಯಿತು.

ಸಭೆಯಲ್ಲಿ ಬಿಜೆಪಿ 15, ಕೆಪಿಜೆಪಿ 09, ಕಾಂಗ್ರೆಸ್‌ ಪಕ್ಷದ 09, ಪಕ್ಷೇತರ 2 ಸದಸ್ಯರು ಹಾಗೂ ಶಾಸಕ ಸೇರಿ 36 ಸದಸ್ಯರು ಸಭೆಗೆ ಹಾಜರಿದ್ದರು. ಸಂಸದ ಶಿವಕುಮಾರ ಉದಾಸಿ ಸಭೆಗೆ ಗೈರಾಗಿದ್ದರು. ಅವಿಶ್ವಾಸಕ್ಕೆ ಒಟ್ಟು 24 ಸದಸ್ಯರ ಬಹುಮತ ಬೇಕಾಗಿತ್ತು. ಅಧ್ಯಕ್ಷರ ಅವಿಶ್ವಾಸಕ್ಕೆ ಶಾಸಕ ಸೇರಿ 18 ಜನ ಸದಸ್ಯರು ಮಾತ್ರ ಕೈ ಎತ್ತಿದರು. ಅಧ್ಯಕ್ಷರ ವಿಶ್ವಾಸದ ಪರವಾಗಿ ಕೂಡ 18 ಸದಸ್ಯರು ಕೈ ಎತ್ತಿದ ಕಾರಣ ಅವಿಶ್ವಾಸ ಗೊತ್ತುವಳಿ ಬಿದ್ದುಹೋಯಿತು.

ಅಸಮಾಧಾನ: ಪಕ್ಷದ ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡದ ರೂಪಾ ವಿರುದ್ಧ ನಡೆದ ಅವಿಶ್ವಾಸ ಮಂಡನೆ ಗೊತ್ತುವಳಿಯಲ್ಲಿ ಸ್ವ ಪಕ್ಷ ಬಿಜೆಪಿಯ ಸದಸ್ಯರೆ ಕೈ ಜೋಡಿಸದೇ ಇರುವುದು ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಯಿತು. ಮಾಜಿ ಶಾಸಕ ಜಿ. ಶಿವಣ್ಣ ಅವರ ಪುತ್ರ ಗುರುರಾಜ ತಿಳವಳ್ಳಿ ಹಾಗೂ ಪ್ರಭಾವತಿ ತಿಳವಳ್ಳಿ ಕೂಡ ಅವಿಶ್ವಾಸ ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದು, ಕಾರ್ಯಕರ್ತರ ಆಕ್ರೋಶ ಹೆಚ್ಚಿಸಿತು.

ಬಿಜೆಪಿ ಪಕ್ಷದಿಂದ ಮಾಜಿ ಶಾಸಕರ ಪುತ್ರನಿಗೆ ನಗರಸಭೆ ಟಿಕೆಟ್ ನೀಡಿ ಗೆಲ್ಲಿಸಲಾಗಿದೆ. ಅವರೇ ಪಕ್ಷದ ವಿರುದ್ಧ ನಡೆದುಕೊಂಡಿದ್ದು ಸೂಕ್ತವಲ್ಲ. ಪಕ್ಷದಿಂದ ಲಾಭ ಪಡೆದದವರಿಂದಲೇ ಪಕ್ಷಕ್ಕೆ ಮೋಸವಾಗಿದೆ. ಆದ್ದರಿಂದ ಹೈಕಮಾಂಡ್ ಕೂಡಲೆ ಸೂಕ್ತ ಕ್ರಮ ಕೈಗೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಗುರುರಾಜ ತಿಳವಳ್ಳಿ ಹಾಗೂ ಪ್ರಭಾವತಿ ತಿಳವಳ್ಳಿ ವಿರುದ್ಧ ಘೋಷಣೆ ಕೂಗಿ ಅವರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ 24 ಮತಗಳು ಬೇಕಿತ್ತು. ಬಿಜೆಪಿಯ ಎಲ್ಲ ಸದಸ್ಯರು, ಸಂಸದರು ಕೈ ಜೋಡಿಸಿದ್ದರೆ ಇದು ಸರಳವೂ ಆಗುತ್ತಿತ್ತು. ಆದರೆ, ಸಂಸದ ಶಿವಕುಮಾರ ಉದಾಸಿಯವರಿಗೆ ಸಭೆ ಕುರಿತು ಮಾಹಿತಿ ನೀಡಿದ್ದರೂ ಅವರು ಹಾಜರಾಗದೇ ದೂರ ಉಳಿದಿದ್ದಾರೆ ಕಾರ್ಯಕರ್ತರು ದೂರಿದರು.

ವಿಜಯೋತ್ಸವ: ರೂಪಾ ಅವರ ಬೆಂಬಲಿಗರು ಸಂಗಮ ವೃತ್ತದಲ್ಲಿ ಬಾರಿ ಸಿಡಿಮದ್ದುಗಳನ್ನು ಸಿಡಿಸಿ, ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT