ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಯ ಚಕ್ರವರ್ತಿ, ಆದರ್ಶ ರಾಜಕಾರಣಿಯ ನೆನಪಿನ ಮಾಲೆ

ಗಮನ ಸೆಳೆದ ಪರ್ಯಾಯ ವೇದಿಕೆಯ ‘ಶತಮಾನ ಪುರುಷರು’ ಗೋಷ್ಠಿ
Last Updated 7 ಜನವರಿ 2023, 20:08 IST
ಅಕ್ಷರ ಗಾತ್ರ

ಹಾವೇರಿ (ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆ): ‘ಇಪ್ಪತ್ತೆಂಟನೇ ವಯಸ್ಸಿಗೆ ತಿಪಟೂರು ಬಿಟ್ಟ ಅ‍ಪ್ಪ, ಮತ್ತೆ ಮರಳಿದ್ದು ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿಯಾಗಿ’ ಎಂದು ನೀರು ತುಂಬಿದ ಕಣ್ಣುಗಳಿಂದ ತನ್ನ ತಂದೆ ಖ್ಯಾತ ಹಾಸ್ಯ ನಟ ನರಸಿಂಹರಾಜು ಅವರ ನೆನಪುಗಳನ್ನು ಪುತ್ರಿ ಸುಧಾ ನರಸಿಂಹರಾಜು ಮೆಲುಕು ಹಾಕುತ್ತಿದ್ದಾಗ ಪ್ರೇಕ್ಷಕರು ಸಹ ಆ ಭಾವೋದ್ವೇಗದಲ್ಲಿ ಭಾಗಿಯಾದಂತೆ ಭಾಸವಾಯಿತು.

‘ತಲೆಮಾರುಗಳನ್ನು ಪ್ರಭಾವಿಸುತ್ತಲೇ ಚಿಂತನೆಗೆ ಹಚ್ಚಿ, ಮೌಲ್ಯಯುತ ರಾಜಕಾರಣಕ್ಕೆ ಮಾದರಿಯಾಗಿದ್ದವರು ಶಾಂತವೇರಿ ಗೋಪಾಲಗೌಡರು. ನಾಡು ಕಂಡ ನಿಜವಾದ ಚೆಗೊವೆರಾ. ಆತನ ಹೋರಾಟ ಮತ್ತು ವಿಚಾರಗಳ ಚಹರೆ ಗೌಡರಲ್ಲೂ ಇತ್ತು’ ಎಂದು ಗೋಪಾಲಗೌಡರ ಕುರಿತು ನೆಂಪೆ ದೇವರಾಜ ಅವರು ಹೇಳುತ್ತಿದ್ದರೆ, ಸಭಾಂಗಣದಲ್ಲಿ ಮೌನ ಆವರಿಸಿತ್ತು.

ಊಟದ ಹೊತ್ತು ಮುಗಿಯುತ್ತಿದ್ದಂತೆ ಆರಂಭವಾದ ವಿವಿಧ ಕ್ಷೇತ್ರಗಳ ಆಯ್ದ ಸಾಧಕರ ‘ಶತಮಾನ ಪುರುಷರು’ ಗೋಷ್ಠಿ ಇಂತಹದ್ದೊಂದು ಕ್ಷಣಕ್ಕೆ ಸಾಕ್ಷಿಯಾಯಿತು. ಇಬ್ಬರ ಮಾತುಗಳೂ ಸಭಿಕರು ಖುರ್ಚಿ ಬಿಟ್ಟು ಕದಲದಂತೆ ಮಾಡಿತು.

‘ತಮ್ಮ ಜೀವನವೇ ಒಂದು ಸಂದೇಶವಾಗುವಂತೆ ಬದುಕಿದವರು ಜಿ. ನಾರಾಯಣ. ಬೆಳಗಾವಿಯಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗಿಯಾಗಿದ್ದ ನಾರಾಯಣ ಜೈಲು ಸೇರಿದ್ದರು. ಜೈಲು ಭರ್ತಿಯಾಗಿದ್ದರಿಂದ, ಕೋರ್ಟ್ ಇವರಿಗೆ ಕೇವಲ ಎರಡು ತಿಂಗಳ ಶಿಕ್ಷೆ ವಿಧಿಸಿತ್ತು. ಆಗ ಅವರು, ತಮ್ಮ ಸ್ನೇಹಿತರಿಗೆ ಕೊಟ್ಟಂತೆ ನನಗೂ ಎರಡು ವರ್ಷ ಶಿಕ್ಷೆ ಕೊಡಿ ಎಂದು ಕೋರ್ಟ್‌ನಲ್ಲಿ ವಾದಿಸಿದ್ದರು’ ಎಂಬ ನೆನಪಿನ ಸುರುಳಿಯನ್ನು ಕೆ.ಟಿ.‌ ಶ್ರೀಕಂಠೇಗೌಡ ಬಿಚ್ಚಿಟ್ಟರು. ಅವರ ಬದುಕಿನ ಹೋರಾಟ ಹಾಗೂ ಬಹುಮುಖ ಸಾಧನೆಯ ಮೈಲಿಗಲ್ಲುಗಳನ್ನು ಎಳೆಎಳೆಯಾಗಿ ವಿವರಿಸಿದರು.

ಸಾಹಿತಿ ಸು.ರಂ.ಎಕ್ಕುಂಡಿ ಬಗ್ಗೆ ಮಾತನಾಡಿದ ಜೆ.ಎಂ. ರಾಜಶೇಖರ, ‘ಯಾವ ಪಂಥದಲ್ಲೂ ಗುರುತಿಸಿಕೊಳ್ಳದ ಅವರು, ಪ್ರಕೃತಿಯ ವರಕವಿ ಎಕ್ಕುಂಡಿ. ಅವರ ಸಮಗ್ರ ಬರಹವನ್ನು ಸಾಹಿತ್ಯ ಪರಿಷತ್ ಪ್ರಕಟಿಸಬೇಕಿದೆ. ಅವರ ಹೆಸರನ್ನು ರಾಣೆಬೆನ್ನೂರಿನ ಸಾಹಿತ್ಯ ಭವನಕ್ಕೆ ನಾಮಕರಣ ಮಾಡಿ, ಅವರ ಹೆಸರನ್ನು ಉಳಿಸುವ ಕೆಲಸವಾಗಬೇಕು. ಸಾಹಿತ್ಯವನ್ನು ವಿಮರ್ಶೆಗೆ ಒಳಪಡಿಸಬೇಕು‌’ ಎಂದು ಒತ್ತಾಯಿಸಿದರು.

‘ಕನ್ನಡವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದವರಲ್ಲಿ‌ ಡಾ. ಹಿರೇಮಲ್ಲೂರು‌ ಈಶ್ವರನ್ ಕೂಡ ಒಬ್ಬರು. ಶೈಕ್ಷಣಿಕ ಕ್ಷೇತ್ರದಲ್ಲಿ ಅವರ ಸಾಧನೆ ಹಾಗೂ ಸಂಶೋಧನೆ ಅವರಲ್ಲಿದ್ದ ಜ್ಞಾನಕ್ಕೆ ಕನ್ನಡಿ ಹಿಡಿಯುತ್ತದೆ. ಅವರ ಕೃತಿಗಳು ಆಳವಾದ ಚಿಂತನೆಗೆ ಹಚ್ಚುತ್ತವೆ’ ಎಂದು ಪ್ರೊ. ಶಶಿಧರ ತೋಡ್ಕರ್ ಅಭಿಪ್ರಾಯಪಟ್ಟರು.

ಗೋಷ್ಠಿಯ ಅಧ್ಯಕ್ಷತೆ ವಹಿಸಬೇಕಿದ್ದ ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಅನಾರೋಗ್ಯದಿಂದಾಗಿ ಗೈರಾಗಿದ್ದರು. ಲೇಖಕ ಬಾಬು ಕೃಷ್ಣಮೂರ್ತಿ ಅವರೇ ಅಧ್ಯಕ್ಷೀಯ ನುಡಿಗಳನ್ನಾಡಿದರು. ಮಧ್ಯಾಹ್ನ 2ಕ್ಕೆ ಆರಂಭವಾಗಬೇಕಿದ್ದ ಗೋಷ್ಠಿ 2.45ಕ್ಕೆ ಶುರುವಾಗಿ, ಸಂಜೆ 4.45ಕ್ಕೆ ಮುಗಿಯಿತು. ವಿಧಿ ಇಲ್ಲದೆ ಇತರ ಗೋಷ್ಠಿಗಳ ಸಂಪನ್ಮೂಲ ವ್ಯಕ್ತಿಗಳು ಪ್ರೇಕ್ಷಕರೊಂದಿಗೆ ಕುಳಿತು ಮಾತುಗಳನ್ನು ಆಲಿಸಿದರು.

ಸಾಮಾನ್ಯರ ಸಾಲಿನಲ್ಲಿ ದತ್ತಣ್ಣ

ಹಿರಿಯ ನಟ ದತ್ತಣ್ಣ ಅವರು, ಸಾಮಾನ್ಯರಂತೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಗೋಷ್ಠಿಯನ್ನು ಆಲಿಸಿ ಗಮನ ಸೆಳೆದರು. ವೇದಿಕೆಯ ಹಿಂಭಾಗದಿಂದ ಬಂದ ಅವರು, ಮುಂಭಾಗದ ಆಸನಗಳನ್ನು ಬಿಟ್ಟು, ಹಿಂಭಾಗಕ್ಕೆ ಹೋಗಿ ಕುಳಿತರು.

ದತ್ತಣ್ಣ ಅವರನ್ನು ಕಂಡ ಸಾಹಿತ್ಯಾಭಿಮಾನಿಗಳು, ಅವರೊಂದಿಗೆ ಫೋಟೊ ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಹಿರಿಯ ನಟನನ್ನು ಮಾತನಾಡಿಸಿ ಖುಷಿಪಟ್ಟರು. ಸ್ಥಳದಲ್ಲಿದ್ದ ಸಮ್ಮೇಳನ ಆಯೋಜಕರು ವೇದಿಕೆ ಮುಂಭಾಗಕ್ಕೆ ಬರುವಂತೆ ಆಹ್ವಾನಿಸಿದರೂ ಬರಲಿಲ್ಲ.

ದತ್ತಣ್ಣ ಅವರು, ಸಂಜೆ 5.15ಕ್ಕೆ ನಿಗದಿಯಾಗಿದ್ದ ‘ಬೆಳ್ಳಿತೆರೆ - ಕಿರುತೆರೆ’ ಗೋಷ್ಠಿಯ ಅಧ್ಯಕ್ಷರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT