ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಮೆಡಿಕಲ್‌ ಕೋರ್ಸ್‌ ಆರಂಭ: ಶಾಸಕ ನೆಹರು ಓಲೇಕಾರ ಹೇಳಿಕೆ

100 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ
Last Updated 17 ಫೆಬ್ರುವರಿ 2021, 12:07 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಹೊಸದಾಗಿ5 ಪ್ಯಾರಾ ಮೆಡಿಕಲ್ ಕೋರ್ಸ್‍ಗಳನ್ನು ಆರಂಭಿಸಲಾಗುತ್ತಿದೆ’ ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು.

ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ, ಡಿಪ್ಲೊಮಾ ಇನ್ ಎಕ್ಸ್‌ರೇ ಟೆಕ್ನಾಲಜಿ, ಡಿಪ್ಲೊಮಾ ಇನ್ ಹೆಲ್ತ್ ಇನ್‌ಸ್ಪೆಕ್ಟರ್‌, ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಮತ್ತು ಅನಸ್ತೇಶಿಯಾ ಟೆಕ್ನಾಲಜಿ ಹಾಗೂ ಡಿಪ್ಲೊಮಾ ಇನ್‌ ಆಪ್ತಾಮಿಕ್‌‌ ಟೆಕ್ನಾಲಜಿ ಕೋರ್ಸ್‌ಗಳು ಆರಂಭವಾಗಲಿವೆ ಎಂದು ತಿಳಿಸಿದರು.

ಪ್ರತಿ ಕೋರ್ಸ್‍ಗೆ 20 ಜನರಿಗೆ ಪ್ರವೇಶಾವಕಾಶವಿದೆ. ಆನ್‍ಲೈನ್ ಮೂಲಕ ಈಗಾಗಲೇ ಅರ್ಜಿ ಕರೆಯಲಾಗಿದೆ. ಬೆಂಗಳೂರಿನಿಂದ ಪ್ಯಾರಾ ಮೆಡಿಕಲ್ ಬೋರ್ಡ್‍ನಿಂದ ಫೆಬ್ರುವರಿ 3ನೇ ವಾರದಲ್ಲಿ ಪ್ರವೇಶ ಕೌನ್ಸೆಲಿಂಗ್‌ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರವೇಶಕ್ಕೆ ಹಾವೇರಿ ಪ್ಯಾರಾ ಮೆಡಿಕಲ್ ಕಾಲೇಜಿಗೆ ಕಳುಹಿಸಿ ಕೊಡಲಿದ್ದಾರೆ ಎಂದು ಹೇಳಿದರು.

ವಿದ್ಯಾರ್ಹತೆ

ಈ ಕೋರ್ಸ್‍ಗಳ ಪ್ರವೇಶಕ್ಕೆ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. ಒಂದು ವೇಳೆ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿದ್ಯಾರ್ಥಿಗಳು ಲಭ್ಯವಾಗದಿದ್ದರೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ 2 ವರ್ಷ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ 3 ವರ್ಷ ಅವಧಿಯ ತರಬೇತಿ ಇದಾಗಿದೆ ಎಂದು ಮಾಹಿತಿ ನೀಡಿದರು.

ವಯೋಮಿತಿ

ಮೆರಿಟ್‌ ಮತ್ತು ರೋಸ್ಟರ್ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 15 ರಿಂದ 35 ವರ್ಷ ಹಾಗೂ ಎಸ್.ಸಿ./ ಎಸ್.ಟಿ. ವಿದ್ಯಾರ್ಥಿಗಳು 15 ರಿಂದ 45 ವರ್ಷದೊಳಗಿರಬೇಕು. ಪ್ರತಿ ವರ್ಷಕ್ಕೆ ಪ್ರತಿ ವಿದ್ಯಾರ್ಥಿಗೆ ₹4 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. ಪ್ಯಾರಾ ಮೆಡಿಕಲ್ ಕೋರ್ಸ್ ಮಂಜೂರು ಮಾಡಿರುವುದರಿಂದ ಮೆಡಿಕಲ್ ಕಾಲೇಜು ಆರಂಭಕ್ಕೆ ಅನುಕೂಲವಾಗಲಿದೆ. ನೂತನ ಪ್ಯಾರಾ ಮೆಡಿಕಲ್ ಕಾಲೇಜಿಗೆ ಹಂತ–ಹಂತವಾಗಿ ಅವಶ್ಯವಿರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಮೆಡಿಕಲ್ ಕಾಲೇಜು ತರಗತಿ ಆರಂಭ

ಹಾವೇರಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಥಮ ವರ್ಷದ ತರಗತಿಗಳು ಈ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿವೆ. ತಾತ್ಕಾಲಿಕವಾಗಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತರಗತಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಯನ್ನು ₹25 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಮಂಜೂರು ಶೀಘ್ರದಲ್ಲೇ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನರ್ಸಿಂಗ್ ಕಾಲೇಜ್

ನರ್ಸಿಂಗ್ ಕಾಲೇಜಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ. ಹೊಸದಾಗಿ ಸರ್ಕಾರಿ ಟೂಲ್ ರೂಂ ಮತ್ತು ತರಬೇತಿ ಕೇಂದ್ರ (ಜಿ.ಟಿ.ಡಿ.ಸಿ) ಕಾಲೇಜ್ ಆರಂಭಿಸಲಾಗುವುದು. ‘ನವೋದಯ ಶಾಲೆ’ ಆರಂಭಕ್ಕೆ ಹೊಸರಿತ್ತಿಯಲ್ಲಿ ಜಾಗ ಗುರುತಿಸಲಾಗಿದೆ. ಸರ್ಕಾರಿ ಕಾನೂನು ಕಾಲೇಜಿಗೆ ₹5 ಕೋಟಿ ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಶೀಘ್ರವೇ ಟೆಂಡರ್ ಕರೆಯಲಾಗುವುದು, ಟ್ರಾಮಾ ಸೆಂಟರ್‌ಗೆ ಜಾಗ ಗುರುತಿಸಲಾಗಿದೆ ಹಾಗೂ ‘ಒನ್ ಸ್ಟಾಪ್‌ ಸೆಂಟರ್’ ಸೇರಿದಂತೆ ಹಲವು ಶೈಕ್ಷಣಿಕ ಸರ್ಕಾರಿ ಕೋರ್ಸ್‍ಗಳು, ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್‌. ಹಾವನೂರ, ಸಂಚಾಲಕ ವಿನಾಯಕ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT