ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಶಿವರಾಮ್ ಹೆಬ್ಬಾರ

73ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ
Last Updated 26 ಜನವರಿ 2022, 12:54 IST
ಅಕ್ಷರ ಗಾತ್ರ

ಹಾವೇರಿ: ‘ಸಮಾನತೆ, ಸೋದರತೆ, ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಮತ್ತು ರಾಜಕೀಯ ನ್ಯಾಯವನ್ನು ದೊರಕಿಸಿಕೊಡುವುದು ನಮ್ಮ ಸಂವಿಧಾನದ ಮುಖ್ಯ ಗುರಿಯಾಗಿದೆ. ನಮ್ಮ ಸಂವಿಧಾನದ ಆಶಯದಂತೆ ಹಾವೇರಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುವೆ’ ಎಂದು ಕಾರ್ಮಿಕ ಹಾಗೂ ನೂತನ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲು ಶಿವರಾಮ ಹೆಬ್ಬಾರ್‌ ಹೇಳಿದರು.

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ 73ನೇ ಗಣರಾಜ್ಯೋತ್ಸವದ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಜನವರಿ 26 ಗಣರಾಜ್ಯವಾಗಿ ಭಾರತ ದೇಶ ಉದಯವಾದ ದಿನ. ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡ ಸುದಿನ. ವಿಶ್ವ ಮಾನ್ಯತೆಯನ್ನು ಪಡೆದ ನಮ್ಮ ಸಂವಿಧಾನ ರಚನೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಾತ್ರ ಅವಿಸ್ಮರಣೀಯವಾಗಿದೆ ಎಂದು ಹೇಳಿದರು.

ನಮ್ಮ ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಶಿಕ್ಷಣ-ಉದ್ಯೋಗ-ಸಬಲೀಕರಣ ನೆಲೆಯಲ್ಲಿ ರಾಜ್ಯದ ಅಭಿವೃದ್ಧಿ ಜೊತೆಗೆ ಹಾವೇರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ಕೈಗೊಂಡಿದ್ದಾರೆ ಎಂದು ಹೇಳಿದರು.

ಜಲಜೀವನ ಮಿಷನ್‌:

ಜಲಜೀವನ ಮಿಷನ್‌ ಯೋಜನೆಯಡಿ ಮೊದಲ ಹಂತದಲ್ಲಿ 351 ಗ್ರಾಮಗಳ ಪೈಕಿ 152 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ 213 ಗ್ರಾಮಗಳ ಪೈಕಿ 60 ಕಾಮಗಾರಿಗಳು ಪೂರ್ಣಗೊಂಡಿವೆ. ಈವರೆಗೆ ₹95.02 ಕೋಟಿ ವೆಚ್ಚ ಮಾಡಲಾಗಿದೆ.ರೈತ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 15,155 ವಿದ್ಯಾರ್ಥಿಗಳಿಗೆ ₹3.75 ಕೋಟಿ ಮಂಜೂರಾಗಿದೆ. ಬೆಳೆ ವಿಮೆ ಯೋಜನೆಯಡಿ ಕಳೆದ ವರ್ಷ ₹34.18 ಕೋಟಿ ಪರಿಹಾರ ಹಣವನ್ನು ಜಿಲ್ಲೆಯ 30,243 ರೈತರಿಗೆ ನೇರ ಜಮೆ ಮಾಡಲಾಗಿದೆ. ಈ ವರ್ಷ ಬೆಳೆ ವಿಮೆಗೆ 2,03,871 ಲಕ್ಷ ರೈತರು ನೋಂದಾಯಿಸಿಕೊಂಡಿರುವುದಾಗಿ ಹೇಳಿದರು.

ಆಕರ್ಷಕ ಪಥಸಂಚಲನ: ಸಶಸ್ತ್ರ ಮೀಸಲುಪಡೆ ಸೇರಿದಂತೆ ವಿವಿಧ ವಲಯದ ನಾಲ್ಕು ಪೊಲೀಸ್ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಸಚಿವರು ಗೌರವ ವಂದನೆ ಸ್ವೀಕರಿಸಿದರು.

ಕೋವಿಡ್‌ ನೆರವು:

ಕೋವಿಡ್‍ನಿಂದ ಮೃತರಾದ ಬಿಪಿಎಲ್ ಕುಟುಂಬದ 450 ಜನರಿಗೆ ರಾಜ್ಯ ಸರ್ಕಾರದಿಂದ ತಲಾ ₹1 ಲಕ್ಷ ಹಾಗೂ ಕೇಂದ್ರದಿಂದ ತಲಾ ₹50 ಸಾವಿರ ಹಾಗೂ ಬಿಪಿಎಲ್ ಹೊರತಾದ ಇತರ 245 ಮೃತರ ಕುಟುಂಬಕ್ಕೆ ಕೇಂದ್ರದಿಂದ ತಲಾ ₹50 ಸಾವಿರ ಪಾವತಿಸಲಾಗಿದೆ ಎಂದು ಸಚಿವ ಶಿವರಾಮ ಹೆಬ್ಬಾರ್‌ ತಿಳಿಸಿದರು.

ಅತಿವೃಷ್ಟಿಯಿಂದ ಹಾನಿಯಾದ ‘ಎ’ ವರ್ಗದ 189 ಮನೆಗಳಿಗೆ ತಲಾ ₹95,100 ರಂತೆ ಒಟ್ಟಾರೆ ₹1.80 ಕೋಟಿ, ಬಿ1 ಮತ್ತು ಬಿ2 ವರ್ಗದ 5024 ಮನೆಗಳಿಗೆ ತಲಾ ₹95,100ನಂತೆ ₹47.78 ಕೋಟಿ ಹಾಗೂ ಸಿ ವರ್ಗದ 1917 ಮನೆಗಳಿಗೆ ತಲಾ ₹50 ಸಾವಿರದಂತೆ ₹9.59 ಕೋಟಿ ಪರಿಹಾರವಾಗಿ ಸಂತ್ರಸ್ತರ ಖಾತೆಗೆ ಪಾವತಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT