ಭಾನುವಾರ, ಸೆಪ್ಟೆಂಬರ್ 26, 2021
27 °C
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ಸ್ನೇಹಾ ಹಾವೇರಿ ಮನದಾಳದ ಮಾತು

ಗುರಿ ಸಾಧನೆಗೆ ಆತ್ಮವಿಶ್ವಾಸವೇ ಮೆಟ್ಟಿಲು

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಕಠಿಣ ಪರಿಶ್ರಮ ಮತ್ತು ಅಚಲವಾದ ಆತ್ಮವಿಶ್ವಾಸಗಳಿದ್ದರೆ, ಎಂತಹ ಗುರಿಯನ್ನಾದರೂ ಸಾಧಿಸಬಹುದು ಎಂಬುದಕ್ಕೆ ನಾನೇ ಸ್ಪಷ್ಟ ಉದಾಹರಣೆ ಎನ್ನುತ್ತಾರೆ’ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿನಿ ಸ್ನೇಹಾ ಹಾವೇರಿ. 

ರಾಜ್ಯದಲ್ಲಿ 625ಕ್ಕೆ 625 ಅಂಕ ಪಡೆದಿರುವ 157 ವಿದ್ಯಾರ್ಥಿಗಳಲ್ಲಿ ಸ್ನೇಹಾ ಹಾವೇರಿ ಕೂಡ ಒಬ್ಬರು. ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಹಾವೇರಿ ಜಿಲ್ಲೆಯ ಕೀರ್ತಿಯನ್ನು ಬೆಳಗಿಸಿದ್ದಾರೆ. 

ತಾಲ್ಲೂಕಿನ ಕರ್ಜಗಿ ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿನಿಯಾದ ಸ್ನೇಹಾ ಅವರು, ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಅಭೂತಪೂರ್ವ ಸಾಧನೆ ಮಾಡಿರುವುದಕ್ಕೆ ಜಿಲ್ಲೆಯ ಜನತೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. 

ರೈತನ ಮಗಳು:

ಸ್ನೇಹಾ ಅವರು ಕರ್ಜಗಿ ಗ್ರಾಮದ ರೈತ ಸಿದ್ದಪ್ಪ ಹಾವೇರಿ ಮತ್ತು ಜ್ಯೋತಿ ದಂಪತಿಯ ಸುಪುತ್ರಿಯಾಗಿ 2005ರ ಮಾರ್ಚ್‌ 31ರಂದು ಜನಿಸಿದರು. ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲೇ ವ್ಯಾಸಂಗ ಮಾಡಿದ್ದಾರೆ. 7ನೇ ತರಗತಿಯಲ್ಲಿ ಶೇ 92 ಅಂಕ ಪಡೆದು ಪ್ರತಿಭಾವಂತ ವಿದ್ಯಾರ್ಥಿನಿ ಎಂಬುದನ್ನು ಸಾಬೀತುಪಡಿಸಿದ್ದರು. 

‘ಅಪ್ಪ–ಅಮ್ಮ ಇಬ್ಬರೂ ಕೃಷಿ ಕೆಲಸಕ್ಕಾಗಿ ಹೊಲಕ್ಕೆ ಹೋಗುತ್ತಿದ್ದರು. ಹೀಗಾಗಿ ಮನೆಯಲ್ಲಿ ಪಾತ್ರೆ ತೊಳೆಯುವುದು, ಕಸ ಗುಡಿಸುವುದು ಮುಂತಾದ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ಅಮ್ಮನಿಗೆ ನೆರವಾಗುತ್ತಿದ್ದೆ. ಇಡೀ ದಿನ ಹೊಲದಲ್ಲಿ ದುಡಿದು ಬರುತ್ತಿದ್ದ ಅಪ್ಪ–ಅಮ್ಮ ಎಷ್ಟೇ ದಣಿವಾಗಿದ್ದರೂ, ನಾನು ಓದಲು ಅಗತ್ಯವಾದ ಎಲ್ಲ ಅನುಕೂಲ ಮಾಡಿಕೊಡುತ್ತಿದ್ದರು. ಅವರ ಸಹಕಾರವೇ ನನ್ನ ಸಾಧನೆಗೆ ಶ್ರೀರಕ್ಷೆ’ ಎನ್ನುತ್ತಾರೆ ಸ್ನೇಹಾ. 

ದಿನಚರಿ:

ಬೆಳಿಗ್ಗೆ 8ರಿಂದ 10ರವರೆಗೆ ಮತ್ತು ಸಂಜೆ 5ರಿಂದ 8ರವರೆಗೆ ಆನ್‌ಲೈನ್‌ ತರಗತಿ ನಡೆಯುತ್ತಿದ್ದವು. ಶಿಕ್ಷಕರು ಹೇಳಿದ ಪಾಠವನ್ನು ಶ್ರದ್ಧೆಯಿಂದ ಕೇಳುತ್ತಿದ್ದೆ. ಹೋಂ ವರ್ಕ್‌ಗಳನ್ನು ಚಾಚೂ ತಪ್ಪದೆ ಮಾಡುತ್ತಿದ್ದೆ. ಸಂದೇಹಗಳನ್ನು ಶಿಕ್ಷಕರಿಂದ ಪರಿಹರಿಸಿಕೊಳ್ಳುತ್ತಿದ್ದೆ. ಎಷ್ಟೋ ಬಾರಿ ನಿದ್ದೆಗೆಟ್ಟು ರಾತ್ರಿ 2 ಗಂಟೆಯವರೆಗೂ ಓದುತ್ತಿದ್ದೆ. ಅಮ್ಮ ಊಟ, ಹಣ್ಣು ಕೊಡುತ್ತಾ ಉಪಚರಿಸುತ್ತಿದ್ದರು. ಕಠಿಣ ಪರಿಶ್ರಮದಿಂದಲೇ ಕನಸು ನನಸಾಯಿತು ಎಂಬುದು ಸ್ನೇಹಾ ಅವರ ನುಡಿ. 

ಸರ್ಕಾರಿ ಶಾಲೆ ಕಮ್ಮಿಯಿಲ್ಲ!

‘ಕೋವಿಡ್‌ನಂತಹ ಸಂಕಷ್ಟ ಸಂದರ್ಭದಲ್ಲಿ ಹಾವೇರಿ ತಾಲ್ಲೂಕಿನ ಶಿಕ್ಷಣ ಇಲಾಖೆ ಅಧಿಕಾರಿಗಳು ‘ವರದಾ ಜ್ಞಾನವಾಹಿನಿ’ ಯೂಟ್ಯೂಬ್ ಚಾನಲ್ ಮೂಲಕ ಪಾಠಗಳನ್ನು ಪ್ರಸ್ತುತಪಡಿಸಿದ್ದು, ನನಗೆ ತುಂಬಾ ಅನುಕೂಲವಾಯಿತು. ಶಾಲಾ ಶಿಕ್ಷಕರು ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ಪಠ್ಯಕ್ಕೆ ಸಂಬಂಧಿಸಿದ ಆಡಿಯೊ, ವಿಡಿಯೊ ಶೇರ್‌ ಮಾಡುತ್ತಿದ್ದರು. ಸರ್ಕಾರಿ ಶಾಲೆಯಲ್ಲೂ ಗುಣಮಟ್ಟದ ಬೋಧನೆ ಸಿಗುತ್ತಿದೆ. ಸರ್ಕಾರಿ ಶಾಲೆ ಖಾಸಗಿ ಶಾಲೆಗಿಂತ ಕಡಿಮೆಯಿಲ್ಲ ಎಂಬುದು ನನ್ನ ಭಾವನೆ ಎನ್ನುತ್ತಾರೆ ಸ್ನೇಹಾ. 

ಟೆಲಿಗ್ರಾಂನಲ್ಲಿ ಪರಿಚಿತಳಾದ ಅಮೂಲ್ಯ ನನ್ನ ಆತ್ಮೀಯ ಗೆಳತಿಯಾಗಿದ್ದಾಳೆ. ನನ್ನಿಂದ ಇದು ಸಾಧ್ಯವಿಲ್ಲ ಎಂದು ಹಿಂಜರಿದಾಗ, ನನ್ನಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬುತ್ತಿದ್ದಳು. ನನ್ನ ಸಾಧನೆಯಲ್ಲಿ ಅವಳ ಪಾಲೂ ಇದೆ. ಆಕೆ ಕೂಡ 623 ಅಂಕ ಪಡೆದಿದ್ದಾಳೆ ಎಂದು ಗೆಳತಿಯ ಬಗ್ಗೆ ಸ್ನೇಹಾ ಅವರು ಮೆಚ್ಚುಗೆಯ ಮಾತನ್ನಾಡಿದರು.

ಐಪಿಎಸ್‌ ಅಧಿಕಾರಿಯಾಗುವ ಬಯಕೆ

ನಾನು ಮೆಡಿಕಲ್‌ ಓದಿ, ನಂತರ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿ, ದಕ್ಷ ಐಪಿಎಸ್‌ ಅಧಿಕಾರಿಯಾಗಬೇಕು ಎಂಬುದು ನನ್ನ ಕನಸು. ಜನಸ್ನೇಹಿ ಪೊಲೀಸ್‌ ಮತ್ತು ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ನನ್ನ ಗುರಿಯಾಗಿದೆ ಎನ್ನುತ್ತಾರೆ ಸ್ನೇಹಾ ಹಾವೇರಿ. 

‘ಹೊಸ ಪರೀಕ್ಷಾ ವಿಧಾನದಲ್ಲಿ ಒಂದು ತಪ್ಪು ಉತ್ತರಕ್ಕೆ 2 ಅಂಕ ಹೋಗುತ್ತದೆ ಎಂದು ತುಂಬಾ ಹೆದರಿದ್ದೆ. ಪರೀಕ್ಷೆ ನಂತರ ಖುಷಿಯಾಯಿತು. ‘ಕೀ ಆನ್ಸರ್‌’ ನೋಡಿದಾಗ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ಗುರುತು ಮಾಡಿದ್ದೇನೆ ಎಂಬುದು ಖಚಿತವಾಯಿತು. ಹೊಸ ಪರೀಕ್ಷಾ ವಿಧಾನ ಮುಂದಿನ ಎಲ್ಲ ತರಹದ ಪ್ರವೇಶ ಪರೀಕ್ಷೆಗೆ ಅಡಿಗಲ್ಲಾಗಿದೆ’ ಎಂಬುದು ಅವರ ಅನಿಸಿಕೆ. 

ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗಿಂತ ಕನ್ನಡ ಮಾಧ್ಯಮದಲ್ಲೇ ಉತ್ತಮ ಅಂಕ ಪಡೆಯುತ್ತೇನೆ ಎಂದು ಅಕ್ಕನ ಬಳಿ ಚಾಲೆಂಜ್‌ ಮಾಡಿ ಗೆದ್ದಿದ್ದೇನೆ
– ಸ್ನೇಹಾ ಹಾವೇರಿ, ಎಸ್ಸೆಸ್ಸೆಲ್ಸಿ ಟಾಪರ್‌

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು