ಶನಿವಾರ, ನವೆಂಬರ್ 28, 2020
18 °C
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ವಾಗ್ದಾಳಿ

ಚುನಾವಣೆಯಲ್ಲಿ ನೆಲಕಚ್ಚಿದರೂ ಬುದ್ಧಿ ಕಲಿಯದ ಕಾಂಗ್ರೆಸ್‌: ಈಶ್ವರಪ್ಪ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಲೋಕಸಭೆ, ವಿಧಾನಸಭೆ ಹಾಗೂ ಉಪಚುನಾವಣೆ ಈ ಮೂರು ಚುನಾವಣೆಗಳಲ್ಲಿ ಜನರು ಕಾಂಗ್ರೆಸ್‌ ಅನ್ನು ತಿರಸ್ಕಾರ ಮಾಡಿದರೂ ಮುಖಂಡರು ಬುದ್ಧಿ ಕಲಿತಿಲ್ಲ. ಮುಖ್ಯಮಂತ್ರಿ ಕುರ್ಚಿಗೋಸ್ಕರ ಬಹಿರಂಗವಾಗಿ ಸಂಘರ್ಷಕ್ಕೆ ಇಳಿದಿದ್ದಾರೆ. ಇನ್ಯಾವ ಅಧೋಗತಿಗೆ ಕಾಂಗ್ರೆಸ್‌ ಹೋಗಬೇಕು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಟೀಕಿಸಿದರು. 

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಾದಾಮಿಯಲ್ಲಿ ಶಾಸಕ ಸಿದ್ದರಾಮಯ್ಯ ‘ನಾನೇ ಮುಂದಿನ ಮುಖ್ಯಮಂತ್ರಿ’ ಅಂತ ಘೋಷಣೆ ಮಾಡುತ್ತಾರೆ. ಅವರ ‘ಚೇಲಾ’ ಜಮೀರ್‌ ಅಹಮದ್,‌ ‘ಸಿದ್ದರಾಮಯ್ಯ ಅವರೇ ಮುಂದಿನ ಸಿ.ಎಂ’ ಅಂತಾರೆ. ಸೌಮ್ಯಾರೆಡ್ಡಿ ಅವರು ‘ಡಿ.ಕೆ.ಶಿವಕುಮಾರ್‌ ಮುಂದಿನ ಸಿ.ಎಂ.’ ಅಂತಾರೆ. ಮೂರನೇ ಬಣವಾದ ಎಚ್‌.ಕೆ.ಪಾಟೀಲ್‌ ಅವರು, ‘ಮೊದಲು ಚುನಾವಣೆ ಆಗಲಿ, ಕೇಂದ್ರದ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುತ್ತೆ’ ಅಂತಾರೆ. ಸಿ.ಎಂ. ಕುರ್ಚಿಗಾಗಿ ಎಲ್ಲರೂ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. 

‘ಜನರು ನಿಮ್ಮನ್ನು (ಕಾಂಗ್ರೆಸ್‌) ಅಧಿಕಾರಕ್ಕೆ ಅಯೋಗ್ಯರು ಎಂದು ತೀರ್ಮಾನಿಸಿ, ಚುನಾವಣೆಗಳಲ್ಲಿ ಸೋಲಿಸಿದ್ದಾರೆ. ಮುಂದಿನ ಮುಖ್ಯಮಂತ್ರಿ ನಾನೇ ಎಂದು ಬೀಗುತ್ತಿದ್ದ ಸಿದ್ದರಾಮಯ್ಯ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲೇ ಸೋತು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿತು. ಈ ಬಾರಿಯ ಚುನಾವಣೆಗಳಲ್ಲೂ ಕಾಂಗ್ರೆಸ್‌ ನೆಲಕಚ್ಚಲಿದೆ’ ಎಂದು ಹೇಳಿದರು. 

ಸವಾಲು ಸ್ವೀಕರಿಸುವೆ: ಈಗ ನಡೆಯುತ್ತಿರುವ ವಿಧಾನಸಭೆ ಉಪಚುನಾವಣೆ ಮತ್ತು ವಿಧಾನ ಪರಿಷತ್‌ ಚುನಾವಣೆ ಮುಂದಿನ ವಿಧಾನಸಭೆಯ ದಿಕ್ಸೂಚಿ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಇದನ್ನು ನಾವೂ ಒಪ್ಪುತ್ತೇವೆ. ಈ ಸವಾಲನ್ನು ಸ್ವೀಕರಿಸುತ್ತೇವೆ. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು. 

ಸಿ.ಎಂ. ಬದಲಾವಣೆಯಿಲ್ಲ: ನಿಮ್ಮ ಪಕ್ಷದಲ್ಲೂ ಸಿ.ಎಂ. ಕುರ್ಚಿಗಾಗಿ ಕಿತ್ತಾಟ ಆರಂಭವಾಗಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ಬಸನಗೌಡ ಯತ್ನಾಳ ಅವರ ಹೇಳಿಕೆಯನ್ನು ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸಿ, ಶಿಸ್ತುಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದೇವೆ. ನಳೀನ್‌ಕುಮಾರ್‌ ಕಟೀಲ್‌ ಕ್ರಮ ತೆಗೆದುಕೊಳ್ಳಲಿದ್ದಾರೆ. ನಮ್ಮಲ್ಲಿ ಯಾರೇ ತಪ್ಪು ಮಾಡಿದರೂ ಕ್ರಮ ನಿಶ್ಚಿತ. ಆದರೆ, ಮುಂದಿನ ಸಿ.ಎಂ. ಬಗ್ಗೆ ಹೇಳಿಕೆ ನೀಡುತ್ತಿರುವ ಜಮೀರ್‌ ಮತ್ತು ಸೌಮ್ಯಾರೆಡ್ಡಿ ಮೇಲೆ ಯಾರಾದರೂ ಕ್ರಮ ತೆಗೆದುಕೊಂಡಿದ್ದಾರೆಯೇ? ಮುಂದಿನ 3 ವರ್ಷಕ್ಕೂ ಬಿ.ಎಸ್‌.ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು