ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆ ಎಸೆತ; ಕಾಂಗ್ರೆಸ್‌ ಕಿಡಿ

ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ: ಮೂವರನ್ನು ವಶಕ್ಕೆ ಪಡೆದ ಪೊಲೀಸರು
Last Updated 19 ಆಗಸ್ಟ್ 2022, 13:52 IST
ಅಕ್ಷರ ಗಾತ್ರ

ಹಾವೇರಿ: ಅತಿವೃಷ್ಟಿಯಿಂದ ಆಗಿರುವ ಹಾನಿ ಪರಿಶೀಲನೆಗೆ ಕೊಡಗಿಗೆ ತೆರಳಿದ್ದ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಯನ್ನು ಖಂಡಿಸಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ನಗರದ ಮೈಲಾರ ಮಹದೇವಪ್ಪ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜೆ.ಪಿ. ವೃತ್ತದ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿತು. ನಂತರ ಕೆಲಹೊತ್ತು ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ಕೊಡಗಿನಲ್ಲಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಘಟನೆ ಖಂಡನೀಯ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಸರ್ವಾಧಿಕಾರಿ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಪಡಿಸಲಾಗುತ್ತಿದೆ. ಬಿಜೆಪಿ ಸರ್ಕಾರದ ಕುಮ್ಮಕ್ಕಿನಿಂದ ಇಂತಹ ಘಟನೆಗಳು ನಡೆಯುತ್ತಿದ್ದು, ಇದು ಉತ್ತಮ ಬೆಳವಣಿಗೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕರಿಗೆ ಸರ್ಕಾರದ ವೈಫಲ್ಯವನ್ನು ಜನರ ಮುಂದೆ ಇಡುವ ಅಧಿಕಾರವಿದೆ. ವಿರೋಧ ಪಕ್ಷದ ನಾಯಕರಿಗೆ ಭದ್ರತೆ ಇಲ್ಲದಿರುವುದು ಈ ರಾಜ್ಯದ ಕಾನೂನು ಸುವ್ಯವಸ್ಥೆಯ ಕರಾಳ ಮುಖಕ್ಕೆ ಸಾಕ್ಷಿಯಾಗಿದೆ. ರಾಜ್ಯ ಬಿಜೆಪಿ ಸರ್ಕಾರ ಅಭದ್ರತೆಯಲ್ಲಿ ಆಡಳಿತ ನಡೆಸುತ್ತಿದ್ದು, ತಪ್ಪಿಸತ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಪೊಲೀಸರೊಂದಿಗೆ ವಾಗ್ದಾದ:

ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಟೈರಿಗೆ ಬೆಂಕಿ ಹಚ್ಚಲು ಮುಂದಾದರು. ಆಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದಕ್ಕೆ ಮುಂದಾದರು. ಕೆಲ ಪ್ರತಿಭಟನಾಕಾರರು ಪೊಲೀಸರು ಕಣ್ಣು ತಪ್ಪಿಸಿ ಟೈರುಗಳಿಗೆ ಬೆಂಕಿ ಇಟ್ಟು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಇದೇ ಸಂದರ್ಭ ಬಸ್ಸಿಗೆ ಕಲ್ಲು ತೂರಲು ಮುಂದಾದ ವ್ಯಕ್ತಿಯನ್ನು ಪೊಲೀಸರು ತಡೆದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಅವರು ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು, ಮೂವರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಸೂಚಿಸಿ, ವಾತಾವರಣ ತಿಳಿಗೊಳಿಸಿದರು. ಪ್ರತಿಭಟನೆ ನಂತರ ವಶಕ್ಕೆ ಪಡೆದವರನ್ನು ಬಿಡುಗಡೆಗೊಳಿಸಿದರು.

ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿ.ಪಂ. ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಮೈದೂರ, ಎಸ್‍ಎಫ್‍ಎನ್ ಗಾಜೀಗೌಡ್ರ, ಪ್ರಭು ಭಿಷ್ಟನಗೌಡ್ರ, ಪ್ರಸನ್ನಕುಮಾರ ಹಿರೇಮಠ, ರಾಜು ಶಿವಣ್ಣನವರ, ಶರತ್ ಕಾಶಂಬಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT