ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

ಬಿಜೆಪಿಯಿಂದ ಉಪಚುನಾಣೆ ಪ್ರಣಾಳಿಕೆ ಬಿಡುಗಡೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ
Last Updated 23 ಅಕ್ಟೋಬರ್ 2021, 15:49 IST
ಅಕ್ಷರ ಗಾತ್ರ

ಹಾವೇರಿ: ‘ಚುನಾವಣೆ ಬಂದಾಗ ಅಲ್ಪಸಂಖ್ಯಾತರ ಮೇಲೆ ಕಾಂಗ್ರೆಸ್‌ ಅತಿ ಪ್ರೀತಿ ತೋರಿಸುತ್ತದೆ. ಕಾಂಗ್ರೆಸ್‌ ಮಾತ್ರ ನಿಮ್ಮ ರಕ್ಷಣೆ ಮಾಡುತ್ತದೆ ಎಂದು ನಂಬಿಸುತ್ತದೆ. ಅಲ್ಪಸಂಖ್ಯಾತರಿಗೆ ದೊಡ್ಡ ಅನ್ಯಾಯ ಮಾಡಿದ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಹಾನಗಲ್‌ ಕ್ಷೇತ್ರದ ಚಿಕ್ಕಾಂಶಿ ಹೊಸೂರ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ಅಲ್ಪಸಂಖ್ಯಾತರನ್ನು ಕಾಂಗ್ರೆಸ್‌ನವರು ಐದು ವರ್ಷ ಬಾವಿಯಲ್ಲಿ ಇಟ್ಟಿರುತ್ತಾರೆ. ಚುನಾವಣೆ ಬಂದಾಗ ಹಗ್ಗ ಕೊಟ್ಟು ಮೇಲೆತ್ತುತ್ತಾರೆ. ಮತಗಳನ್ನು ಹಾಕಿಸಿಕೊಂಡ ನಂತರ ಮತ್ತೆ ಬಾವಿಯಲ್ಲಿ ಇಳಿಸಿ ಕೈಬಿಡುತ್ತಾರೆ ಎಂದು ಆರೋಪಿಸಿದರು.

ಸುಳ್ಳಿನ ರಾಜಕಾರಣವನ್ನು ಕಾಂಗ್ರೆಸ್‌ ಎಷ್ಟು ದಿನ ನಡೆಸುತ್ತದೆ. ಹಾನಗಲ್‌ ಕ್ಷೇತ್ರಕ್ಕೆ ಅಲ್ಪಸಂಖ್ಯಾತರ ವಿವಿಧ ಯೋಜನೆಗಳಿಗೆ ಸಂಸದ ಶಿವಕುಮಾರ ಉದಾಸಿ ₹20 ಕೋಟಿ ಮಂಜೂರು ಮಾಡಿಸಿದ್ದಾರೆ.ಏಕವಚನದಲ್ಲಿ ಮಾತನಾಡಿದರೆ ಯಾರೂ ದೊಡ್ಡವರಾಗುವುದಿಲ್ಲ‌. ಅವರ ಟೀಕೆಗಳನ್ನು ಮೆಟ್ಟಿಲು ಮಾಡಿಕೊಂಡು ಜನರ ಸೇವೆ ಮಾಡುತ್ತೇನೆ. ದೀನ ದಲಿತರು, ರೈತರು ಸೇರಿದಂತೆ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರನ್ನು ‘ಆಪತ್ಬಾಂಧವ’ ಎನ್ನುತ್ತಾರೆ. ಕೋವಿಡ್‌ ಕಾಲದಲ್ಲಿ ನಾವು ಕೂಡ ನೆರವು ನೀಡಿದ್ದೇವೆ. ಆದರೆ, ಮಾನವೀಯತೆ ಕಾರ್ಯವನ್ನು ಚುನಾವಣೆಗೆ ಬಂಡವಾಳ ಮಾಡಿಕೊಂಡು, ರಾಜಕೀಯ ಲಾಭ ಗಳಿಸುತ್ತಿರುವ ಕಾಂಗ್ರೆಸ್‌ ನಿಲುವು ಸರಿಯೇ? ಎಂದು ಪ್ರಶ್ನಿಸಿದರು.

ದೇಶದಲ್ಲಿ ಕಾಂಗ್ರೆಸ್ ‘ಮುಳುಗುತ್ತಿರುವ ಹಡಗು’ ಎನ್ನಲಾಗುತ್ತಿದೆ. ಅದು ‘ಮುಳುಗಿರುವ ಹಡಗು’. ರಾಜ್ಯದಲ್ಲಿ ಸ್ವಲ್ಪ ಇನ್ನೂ ಅಲುಗಾಡುತ್ತಿದೆ. ಅ.30ರಂದು ಪೂರ್ಣ ಮುಳುಗಲಿದೆ ಎಂದು ವ್ಯಂಗ್ಯವಾಡಿದರು.

ಅಂಬೇಡ್ಕರ್‌ಗೆ ಕಾಂಗ್ರೆಸ್‌ನಿಂದ ಅನ್ಯಾಯ: ಬಿಎಸ್‌ವೈ

‘ಕಾಂಗ್ರೆಸ್‌ನವರು ಡಾ.ಅಂಬೇಡ್ಕರ್‌ ಅವರನ್ನು ಎರಡು ಬಾರಿ ಸೋಲಿಸಿದರು. ಭಾರತ ರತ್ನವನ್ನೂ ಕೊಡದೆ ಅವಮಾನಿಸಿದರು. ಇಂಥ ಕಾಂಗ್ರೆಸ್ ಅನ್ನು ದೇಶದ ಜನರು ಮರೆತಿದ್ದಾರೆ. 26 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಅಧಿಕಾರ ಶಾಶ್ವತವಲ್ಲ, ಎಲ್ಲರಿಗೂ ಸಿಗಬೇಕು ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಿಸಾಕಿ ಬಂದೆ. ನನಗೆ ಯಾರೂ ಒತ್ತಡ ಹಾಕಿರಲಿಲ್ಲ ಎಂದು ಭಾವುಕರಾಗಿ ನುಡಿದರು. ಅಧಿಕಾರವಿಲ್ಲದಿದ್ದರೂ ರಾಜ್ಯದ ಯಾವುದೇ ಮೂಲೆಗೋದರೂ ನಮ್ಮ ಯಡಿಯೂರಪ್ಪ ಜನರು ಪ್ರೀತಿಯಿಂದ ಕಾಣುತ್ತಾರೆ. ನ.15ರ ನಂತರ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಕ್ಕೂ ಬಂದು ಪಕ್ಷ ಸಂಘಟಿಸುತ್ತೇನೆ. ಸಾರ್ವತ್ರಿಕ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲಲು ಶ್ರಮಿಸುತ್ತೇನೆ ಎಂದರು.

ಹಣ, ಹೆಂಡ, ತೋಳ್ಬಲದಿಂದ ಮತ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್ ಬುಡುಬುಡಿಕೆ ಮಾತಿಗೆ ಜನರು ಮಾನ್ಯತೆ ನೀಡುವುದಿಲ್ಲ. ರಾಜಕೀಯ ದೊಂಬರಾಟದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ.ಜನರು ಬುದ್ಧಿವಂತರಾಗಿದ್ದಾರೆ ಎಂದು ಹೇಳಿದರು.

ಕ್ರಿಕೆಟ್‌ನಲ್ಲಿ ಪಾಕಿಸ್ತಾನವನ್ನು ಭಾರತ ತಂಡ ಸೋಲಿಸುವಂತೆ, ನೀವು ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹೀನಾಯವಾಗಿ ಸೋಲಿಸಿ
– ರಾಜುಗೌಡ, ಸುರಪುರ ಶಾಸಕ

ಕಾಂಗ್ರೆಸ್‌ನವರು ಮತದಾರರಿಗೆ ಸೀರೆ ಹಂಚುತ್ತಿದ್ದಾರೆ. ಆದರೆ, ನಾವು ಗೋಣಿಚೀಲದಲ್ಲಿ ದುಡ್ಡು ಹಂಚುತ್ತಿದ್ದೇವೆ ಎಂದು ಸುಳ್ಳು ಆರೋಪಿಸುತ್ತಾರೆ.
– ಬಿ.ಸಿ.ಪಾಟೀಲ, ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT