ಶುಕ್ರವಾರ, ಆಗಸ್ಟ್ 23, 2019
22 °C
ಮೈದುಂಬಿ ಹರಿದ ವರದೆ: ನಾಗನೂರಿನ ತುಂಬೆಲ್ಲ ನೀರೋ ನೀರು...

ದೇವರೇ ಮುಳುಗಿರುವಾಗ ಪ್ರಾರ್ಥನೆ ಯಾರಿಗೆ?

Published:
Updated:
Prajavani

ಹಾವೇರಿ: ಇಷ್ಟು ದಿನ ಒಡಲಲ್ಲಿ ಹನಿ ನೀರೂ ಇಲ್ಲದೆ ಕಣ್ಣೀರುಡುತ್ತಿದ್ದ ವರದೆ, ಈಗ ಮೈದುಂಬಿ ಹರಿಯುತ್ತ ನಮ್ಮನ್ನು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದ್ದಾಳೆ. ಮಳೆರಾಯನಿಗೆ ನಮ್ಮ ಮೇಲೆ ಇಷ್ಟೊಂದು ಕೋಪವಿದೆ ಎಂದು ಗೊತ್ತಿರಲಿಲ್ಲ. ಮಕ್ಕಳು, ವಯಸ್ಸಾದವರು, ಬಾಣಂತಿಯರು ಗ್ರಾಮದಲ್ಲಿದ್ದಾರೆ. ಅವರಿಗಾಗಿಯಾದರೂ ಮುನಿಸು ಬಿಟ್ಟು ಬಿಡೋ ಓ ವರುಣದೇವ...‌

‌ನಾಗನೂರು ಗ್ರಾಮಸ್ಥರು ಶುಕ್ರವಾರ ಆಕಾಶ ನೋಡುತ್ತ ದೇವರನ್ನು ಪ್ರಾರ್ಥಿಸಿದ ಪರಿ ಇದು. ವರದಾ ನದಿ ತುಂಬಿ ಹರಿಯುತ್ತಿರುವ ಕಾರಣ ಇಡೀ ಗ್ರಾಮ ಜಲಾವೃತವಾಗಿದೆ. ಒಂದೊಂದೇ ಮನೆ ಕುಸಿದು ಬೀಳುತ್ತಿರುವುದು, ಗ್ರಾಮಸ್ಥರ ಎದೆಗೆ ಬರಸಿಡಿಲು ಬಡಿದಂತಾಗಿದೆ. ಮಹಿಳೆಯರು ಮಕ್ಕಳನ್ನು ತೊಡೆ ಮೇಲೆ ಮಲಗಿಸಿಕೊಂಡೇ, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ರಾತ್ರಿಗಳನ್ನು ಕಾಯುತ್ತಿದ್ದಾರೆ. 

‘ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಎಲ್ಲರೂ ಈಗ ದೇವರನ್ನು ಕರೆಯುತ್ತಿದ್ದಾರೆ. ಆದರೆ, ಮುಸ್ಲಿಂ ಪ್ರಾರ್ಥನಾ ಮಂದಿರದಿಂದ ಹಿಡಿದು ಎಲ್ಲ ಗುಡಿಗಳೂ ಮುಳುಗಿ ಹೋಗಿವೆ. ದೇವರಿಗೇ ಇಂತಹ ಪರಿಸ್ಥಿತಿ ಬಂದಿರುವಾಗ ನಮ್ಮನ್ನು ಯಾರು ಕಾಯುತ್ತಾರೆ. ಅದಕ್ಕೇ ಆಕಾಶ ನೋಡಿಕೊಂಡು ಪ್ರಾರ್ಥನೆ ಮಾಡುತ್ತಿದ್ದೇವೆ’ ಎಂದು ಗ್ರಾಮದ ಹಿರಿಯರಾದ ಮಹದೇವಪ್ಪ ಬೇಸರದಿಂದ ಹೇಳಿದರು.

‘ನಾಲ್ಕು ದಿನಗಳಿಂದ ಗ್ರಾಮದ ಒಬ್ರೂ ಸರಿಯಾಗಿ ನಿದ್ದೆ ಮಾಡಿಲ್ಲ. ಸ್ವಲ್ಪ ಕಣ್ಣು ಮುಚ್ಚಿದರೂ, ‘ನೀರು ಬಂತು ಎದ್ದೇಳ್ರೋ’ ಎಂದು ಯಾರಾದರೂ ಹೊಯ್ಕೊತಾರೆ. ರಾತ್ರೋರಾತ್ರಿ ಎತ್ತಿನ ಬಂಡಿಗಳಿಗೆ ಸಾಮಾನುಗಳನ್ನು ತುಂಬಿ, ಆಲದಮ್ಮ ಪ್ರೌಢಶಾಲೆಯ ಪರಿಹಾರ ಕೇಂದ್ರಕ್ಕೆ ತೆರಳುತ್ತಿದ್ದೇವೆ’ ಎನ್ನುತ್ತಾರೆ ಗ್ರಾಮಸ್ಥರು.

ಮನೆ ನೆನೆದು ಕಣ್ಣೀರು: ಮನೆ ಸಾಮಾನುಗಳನ್ನು ಟ್ರ್ಯಾಕ್ಟರ್‌ಗೆ ಏರಿಕೊಂಡು ಕಣ್ಣೀರು ಸುರಿಸುತ್ತ ಹಿಂಬದಿ ಕೂತಿದ್ದ ಆ ತಾಯಿಯ ಹೆಸರು ನೀಲವ್ವ. ‘ಬುಧವಾರ ರಾತ್ರಿ ಇದ್ದಕ್ಕಿದ್ದಂತೆ ಮನೆಯೊಳಗೆ ನೀರು ನುಗ್ಗಿತು. ಕೂಡಲೇ ಪತಿ–ಮಕ್ಕಳನ್ನು ಕರೆದುಕೊಂಡು ಹೊರಗೆ ಓಡಿ ಬಂದರೆ ನೀರು ಊರಿಗೇ ನುಗ್ಗುತ್ತಿತ್ತು. ನಮ್ಮ ಚೀರಾಟ ಕೇಳಿ ಅಕ್ಕ–ಪಕ್ಕದ ಮನೆಯವರೂ ಎದ್ದು ಹೊರಗೆ ಓಡಿಬಂದರು. ಮನೆ ಸಾಮಾನುಗಳನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಿದ್ದೆವು. ಆದರೆ, ಶುಕ್ರವಾರ ಬೆಳಿಗ್ಗೆ 9ರ ಸುಮಾರಿಗೆ ಆ ಮನೆ ಕುಸಿದು ಬಿದ್ದಿತು’ ಎನ್ನುತ್ತ ದುಃಖತಪ್ತರಾದರು.

‘ನನ್ನ ಗಂಡನ ಮನೆ ಹಾನಗಲ್‌ ತಾಲ್ಲೂಕಿನ ಬೈಚುವಳ್ಳಿ. ಈಗ ಎಲ್ಲರೂ ಅಲ್ಲಿಗೆ ಹೊರಟಿದ್ದೇವೆ. ಕೂಲಿ–ನಾಲಿ ಮಾಡಿ ಉಳಿಸಿದ್ದ ಹಣದಲ್ಲಿ ಈ ಪುಟ್ಟ ಮನೆ ಕಟ್ಟಿದ್ದೆವು. ಏನು ಮಾಡಬೇಕು ತಿಳಿಯುತ್ತಿಲ್ಲ. ಪರಿಹಾರ ಕೇಂದ್ರಗಳಲ್ಲೂ ಸಂತ್ರಸ್ತರ ಸಂಖ್ಯೆ ಹೆಚ್ಚಿರುವ ಕಾರಣ, ಗಂಡನ ಮನೆಗೆ ಹೋಗುತ್ತಿದ್ದೇನೆ’ ಎಂದರು.

ಇದಿಷ್ಟೂ ನನ್ನ ಜಾಗ: ‘ಗಂಜಿ ಕೇಂದ್ರದಲ್ಲಿ ಜಾಗದ ಸಮಸ್ಯೆ ಇದೆ. ಒಂದೊಂದು ಕೊಠಡಿಯಲ್ಲಿ ಏಳೆಂಟು ಕುಟುಂಬಗಳಿವೆ. ಹೀಗಾಗಿ, ನಾನು ಕಟ್ಟೆ ಮೇಲೆ ಸುತ್ತಲೂ ಸೀರೆ ಕಟ್ಟಿಕೊಂಡಿದ್ದೇನೆ. ಅದಷ್ಟೂ ನನ್ನ ಜಾಗ. ಮೂರು ದಿನಗಳಿಂದ ಇಲ್ಲೇ ಮಲಗುತ್ತಿದ್ದೇನೆ. ಇಷ್ಟು ಬಿಟ್ಟು ನನ್ನಿಂದ ಇನ್ನೇನು ಮಾಡಲು ಸಾಧ್ಯ ನೀವೇ ಹೇಳಿ’ ಎಂದು 76 ವರ್ಷದ ಹುಸೇನ್ ಸಾಬ್ ಅಸಹಾಯಕತೆ ವ್ಯಕ್ತಪಡಿಸಿದರು.

ಅಬ್ಬರಿಸುತ್ತಿವೆ ದನ–ಕರುಗಳು

‘ಆಕಳು–ಕರುಗಳನ್ನೆಲ್ಲ ಟ್ರ್ಯಾಕ್ಟರ್‌ಗಳಲ್ಲೇ ತುಂಬಿ ಸಾಗಿಸಿದ್ದೇವೆ. ಬಣಿವೆಗಳೂ ಮುಳುಗಿ ಹೋಗಿರುವುದರಿಂದ ಅವುಗಳಿಗೆ ಮೇವೂ ಇಲ್ಲದಂತಾಗಿದೆ. ಹಸಿವಿನಿಂದ ಅವು ಅಬ್ಬರಿಸುವಾಗ ಕರುಳು ಕಿತ್ತು ಬರುತ್ತದೆ. ನಮಗೆ ಹೇಗೋ ಗಂಜಿ ಕೇಂದ್ರದಲ್ಲಿ ಊಟ ಕೊಡುತ್ತಿದ್ದಾರೆ. ಅವುಗಳ ಪಾಡೇನು? ಸದ್ಯ ಇರುವ ಮೇವನ್ನೇ ಹಂಚಿಕೊಳ್ಳಲಾಗುತ್ತಿದೆ. ಅದೂ ಖಾಲಿಯಾದರೆ ಮುಂದೇನು ಯಾರಿಗೂ ಗೊತ್ತಿಲ್ಲ. ದಯವಿಟ್ಟು ದಾನಿಗಳು ಮೇವನ್ನೂ ಕಳುಹಿಸಿ’ ಎಂದು ಮನವಿ ಮಾಡುತ್ತಾರೆ ನಾಗನೂರಿನ ಸುರೇಶ್.

ಗಂಜಿಕೇಂದ್ರಗಳೂ ಫುಲ್

‘ಈ ಊರಿನಲ್ಲಿ ಮೂರು ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಗ್ರಾಮದ 70 ಕುಟುಂಬಗಳು ಸ್ಥಳಾಂತರ ಆಗಿರುವುದರಿಂದ ಆ ಕೇಂದ್ರಗಳಲ್ಲೂ ಜಾಗ ಸಾಲುತ್ತಿಲ್ಲ. ಕೆಲವರು ದನ–ಕಾರುಗಳನ್ನು ಹೆದ್ದಾರಿಯ ಅಂಡರ್‌ಪಾಸ್‌ನಲ್ಲಿ ಕಟ್ಟಿ, ಟ್ರ್ಯಾಕ್ಟರ್‌ಗಳಲ್ಲೇ ಉಳಿದುಕೊಂಡಿದ್ದಾರೆ’ ಎಂದು ಮಹದೇವಪ್ಪ ವಿವರಿಸಿದರು.

Post Comments (+)