ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ದಿನಗಳಲ್ಲಿ 223 ಪ್ರಕರಣ ದಾಖಲು!

ಲಾಕ್‌ಡೌನ್‌ ಘೋಷಣೆ: ವಾಹನ ಸವಾರರಿಂದ ₹1.16 ಲಕ್ಷ ದಂಡ ವಸೂಲಿ
Last Updated 28 ಮಾರ್ಚ್ 2020, 16:11 IST
ಅಕ್ಷರ ಗಾತ್ರ

ಹಾವೇರಿ: ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆಯಾಗಿದ್ದರೂ, ಜಿಲ್ಲೆಯಲ್ಲಿ ಪೊಲೀಸರ ಕಣ್ತಪ್ಪಿಸಿ ಅನಗತ್ಯವಾಗಿ ಕೆಲವು ವಾಹನ ಸವಾರರು ತಿರುಗುತ್ತಿದ್ದಾರೆ. ಇಂಥ ವಾಹನ ಸವಾರರ ವಿರುದ್ಧ ಪೊಲೀಸರು ಎರಡು ದಿನಗಳಲ್ಲಿ 223 ಪ್ರಕರಣಗಳನ್ನು ದಾಖಲಿಸಿ, ಬರೋಬ್ಬರಿ ₹ 1,18,300 ದಂಡವನ್ನು ವಿಧಿಸಿದ್ದಾರೆ.

ಲಾಕ್‌ಡೌನ್‌ ಘೋಷಣೆ ಇದ್ದರೂ ಅತ್ಯಗತ್ಯ ವಸ್ತುಗಳಾದ ತರಕಾರಿ, ದಿನಸಿ, ಹಾಲು, ಔಷಧ ಖರೀದಿಸಲು ಸಾರ್ವಜನಿಕರು ನಿಗದಿತ ವೇಳೆಯಲ್ಲಿ ಹೊರಬರಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಕೆಲವರು ಅನಗತ್ಯವಾಗಿ ನಗರದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾರೆ. ಇಂಥವರನ್ನು ಪೊಲೀಸರು ತಡೆದು ಲಾಠಿ ರುಚಿ ತೋರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ದಂಡ ವಸೂಲಿ ಮಾಡುತ್ತಿದ್ದಾರೆ.

ಹಾವೇರಿ ತಾಲ್ಲೂಕಿನಲ್ಲಿ 125 ಮತ್ತು ರಾಣೆಬೆನ್ನೂರು ತಾಲ್ಲೂಕಿನಲ್ಲಿ 79 ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ತಾಲ್ಲೂಕುಗಳಾಗಿವೆ. ವಿಶೇಷವೆಂದರೆ, ರಟ್ಟೀಹಳ್ಳಿ ಮತ್ತು ಹಾನಗಲ್ಲ್ ತಾಲ್ಲೂಕಿನಲ್ಲಿ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ. ಉಳಿದಂತೆ, ಸವಣೂರು (9), ಬ್ಯಾಡಗಿ (6), ಹಿರೇಕೆರೂರು (2), ಶಿಗ್ಗಾವಿ (2) ಪ್ರಕರಣಗಳು ದಾಖಲಾಗಿವೆ.

ದಂಡ ವಸೂಲಿ

ಹಾವೇರಿ ಮತ್ತು ರಾಣೆಬೆನ್ನೂರು ತಾಲ್ಲೂಕುಗಳಲ್ಲಿ ಕ್ರಮವಾಗಿ ₹65,500 ಮತ್ತು ₹39,100 ದಂಡ ವಸೂಲು ಮಾಡಲಾಗಿದೆ. ಸವಣೂರು ತಾಲ್ಲೂಕು (₹3,900), ಹಿರೇಕೆರೂರು ತಾಲ್ಲೂಕು (₹3,000), ಬ್ಯಾಡಗಿ ತಾಲ್ಲೂಕು (₹2,500), ಶಿಗ್ಗಾವಿ ತಾಲ್ಲೂಕು (₹2,000) ದಂಡ ಸೇರಿದಂತೆ ಒಟ್ಟು ₹1.16 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ಹೆಲ್ಮೆಟ್‌ ಮತ್ತು ಸೀಟ್‌ ಬೆಲ್ಟ್‌ ಧರಿಸದೇ ಇರುವುದು, ಡಿ.ಎಲ್‌, ಆರ್.ಸಿ. ದಾಖಲೆಗಳು ಇಲ್ಲದಿರುವುದು, ನಿರ್ಲಕ್ಷ್ಯದಿಂದ ವಾಹನ ಚಾಲನೆ, ಅತಿವೇಗ, ತ್ರಿಬಲ್‌ ರೈಡಿಂಗ್‌ ಸೇರಿದಂತೆ ವಿವಿಧ ರೀತಿಯಲ್ಲಿ ಕಾನೂನು ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಜತೆಗೆ ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ಅನಗತ್ಯವಾಗಿ ಹೊರಗಡೆ ಬರದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ ಎನ್ನುತ್ತಾರೆ ಪೊಲೀಸ್‌ ಸಿಬ್ಬಂದಿ.

ತರಕಾರಿ ಸಾಗಣೆಗೆ ಅವಕಾಶ ನೀಡಿ:

ಗ್ರಾಮಗಳಿಂದ ತರಕಾರಿ ತರುವ ರೈತರ ವಾಹನಗಳಿಗೆ ಪೊಲೀಸರು ಅನಗತ್ಯವಾಗಿ ಕಿರಿಕಿರಿ ಮಾಡುತ್ತಿದ್ದಾರೆ. ಇದರಿಂದ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ನಗರಕ್ಕೆ ತರುವುದೇ ದೊಡ್ಡ ಸವಾಲಾಗಿದೆ. ತಹಶೀಲ್ದಾರ್‌ ಅವರು ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಪಾಸ್‌ ವಿತರಿಸಿ, ಅತ್ಯಗತ್ಯ ಸೇವೆಯಲ್ಲಿ ಬರುವ ತರಕಾರಿ ವಾಹನಗಳಿಗೆ ಸ್ಥಳೀಯ ಮಟ್ಟದಲ್ಲೇ ಪಾಸ್‌ ನೀಡುವ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ನಾಗನೂರಿನ ರೈತರಾದ ಶಂಕರಗೌಡ ಕಟ್ಟೇಗೌಡ.

ದಿನಸಿ ಅಂಗಡಿಗಳಿಗೆ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಕಡೆಯಿಂದ ದಿನಸಿ ಸಾಮಗ್ರಿ ತರಿಸಲಾಗುತ್ತಿತ್ತು. ಆದರೆ, ಈಗ ಪೊಲೀಸರು ಎಲ್ಲ ಕಡೆ ಬ್ಯಾರಿಕೇಡ್‌ ಹಾಕಿ, ವಾಹನ ಸಾಗಣೆಗೆ ತಡೆ ಒಡ್ಡುತ್ತಿರುವುದರಿಂದ ದಿನಸಿ ಸಾಗಣೆ ದುಸ್ತರವಾಗಿದೆ. ಜಿಲ್ಲೆಯಿಂದ ಜಿಲ್ಲೆಗೆ ವಾಹನಗಳನ್ನು ಬಿಡುತ್ತಿಲ್ಲ. ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರು ದಿನಸಿ ವಸ್ತುಗಳ ಸಾಗಣೆಗೆ ಅವಕಾಶ ಕಲ್ಪಿಸಬೇಕು. ಕೂಡಲೇ ಪಾಸ್‌ಗಳನ್ನು ವಿತರಿಸಿ, ಜಿಲ್ಲೆಯಲ್ಲಿ ಕಿರಾಣಿ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಮತ್ತು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT