ಮಂಗಳವಾರ, ಮಾರ್ಚ್ 2, 2021
23 °C
ಜಿಲ್ಲೆಯಲ್ಲಿ 2163 ಕಲಿಕಾ ಕೇಂದ್ರಗಳು: ಲಾಕ್‌ಡೌನ್‌ನಿಂದ ಸಾಕ್ಷರತಾ ಪರೀಕ್ಷೆ ಮುಂದೂಡಿಕೆ

ಹಾವೇರಿ: ಪರೀಕ್ಷೆಗೆ 21 ಸಾವಿರ ನವಸಾಕ್ಷರರು ಸಜ್ಜು

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯ 15ರಿಂದ 50 ವರ್ಷದೊಳಗಿನ 21,630 ಅನಕ್ಷರಸ್ಥ ಕಲಿಕಾರ್ಥಿಗಳು ಮೂಲ ಸಾಕ್ಷರತಾ ಪರೀಕ್ಷೆಗೆ ಸಜ್ಜಾಗಿದ್ದಾರೆ. 

ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಲೋಕ ಶಿಕ್ಷಣ ಸಮಿತಿ ಸಹಯೋಗದ ಕಲಿಕಾ ಕೇಂದ್ರಗಳಲ್ಲಿ ಕಲಿತ 5,429 ಪುರುಷರು ಮತ್ತು 16,201 ಮಹಿಳೆಯರು ನವ ಸಾಕ್ಷರತಾ ಪ್ರಮಾಣ ಪತ್ರ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಏಪ್ರಿಲ್‌ನಲ್ಲಿ ನಡೆಯಬೇಕಿದ್ದ ಮೂಲ ಸಾಕ್ಷರತಾ ಪರೀಕ್ಷೆಯನ್ನು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನಿರ್ದಿಷ್ಟಾವಧಿಗೆ ಮುಂದೂಡಿದೆ. 

2011ರ ಜನಗಣತಿ ಪ್ರಕಾರ, ಜಿಲ್ಲೆಯಲ್ಲಿ 1.12 ಲಕ್ಷ ಪುರುಷರು ಮತ್ತು 2.02 ಲಕ್ಷ ಮಹಿಳೆಯರು ಅನಕ್ಷರಸ್ಥರಾಗಿದ್ದಾರೆ. ಒಟ್ಟು 3.15 ಲಕ್ಷ ಅನಕ್ಷರಸ್ಥರು ಇದ್ದಾರೆ. ಪುರುಷರ ಸಾಕ್ಷರತಾ ಪ್ರಮಾಣ ಶೇ 84.22 ಮತ್ತು ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ 70.65 ಇದೆ.

ರಾಜ್ಯದ ಸಾಕ್ಷರತಾ ಪ್ರಮಾಣ ಶೇ 75.9, ದೇಶದ ಸಾಕ್ಷರತಾ ಪ್ರಮಾಣ ಶೇ 74.20. ವಿಶೇಷವೆಂದರೆ, ಹಾವೇರಿ ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ 77.60 ಇದೆ. ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಯೋಗದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು 1993ರಿಂದ ಆಯೋಜಿಸಲಾಗುತ್ತಿದೆ. 

ವೈವಿಧ್ಯಮಯ ಕಾರ್ಯಕ್ರಮ

ಸಂಪೂರ್ಣ ಸಾಕ್ಷರತಾ ಆಂದೋಲನ, ಸಾಕ್ಷರೋತ್ತರ ಕಾರ್ಯಕ್ರಮ, ಕನ್ನಡ ನಾಡು ಸಾಕ್ಷರ ನಾಡು, ಸಾಕ್ಷರ ಭಾರತ.. ಹೀಗೆ ಲೋಕ ಶಿಕ್ಷಣ ನಿರ್ದೇಶನಾಲಯದಿಂದ ಆಯೋಜಿಸಿರುವ ಹಲವಾರು ಕಾರ್ಯಕ್ರಮಗಳು ಅನಕ್ಷರಸ್ಥರಿಗೆ ಅಕ್ಷರ ಕಲಿಯಲು ವರದಾನವಾಗಿವೆ. 2021ರ ವೇಳೆಗೆ ರಾಜ್ಯದ ಸಾಕ್ಷರತಾ ಪ್ರಮಾಣವನ್ನು ಶೇ 90ಕ್ಕೆ ಹೆಚ್ಚಿಸಲು 2019–20ನೇ ಸಾಲಿನಲ್ಲಿ ರಾಜ್ಯ ಯೋಜನೆಯಡಿ ನಾಲ್ಕು ಸಾಕ್ಷರತಾ ಕಾರ್ಯಕ್ರಮಗಳನ್ನು, ಸಾಕ್ಷರತಾ ಪ್ರಮಾಣ ಕಡಿಮೆ ಇರುವ 20 ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. 

‘ಗ್ರಾಮೀಣ ಭಾಗದ ಅನಕ್ಷರಸ್ಥರು ವಿಶೇಷವಾಗಿ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಮತ್ತು ನಗರಗಳ ಕೊಳೆಗೇರಿಗಳ ಅನಕ್ಷರಸ್ಥರ ಕಲಿಕೆಗೆ ಆದ್ಯತೆ ನೀಡಲಾಗಿದೆ. ಕಲಿಕಾರ್ಥಿಗಳು ಮೂಲ ಸಾಕ್ಷರತೆ ಪಡೆಯಲು ‘ಬಾಳಿಗೆ ಬೆಳಕು’ ಪುಸ್ತಕ ರಚಿಸಲಾಗಿದೆ. ಅನಕ್ಷರಸ್ಥರಿಗೆ ಬೋಧಿಸಲು ಅನುಕೂಲವಾಗುವಂತೆ ಬೋಧಕರ ಕೈಪಿಡಿ ಸಿದ್ಧಪಡಿಸಲಾಗಿದೆ. ಓದು, ಬರಹ ಮತ್ತು ಲೆಕ್ಕಾಚಾರ ಕೌಶಲವನ್ನು ಪಡೆಯುವುದೇ ಸಾಕ್ಷರತೆಯಾಗಿದೆ’ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಸನಗೌಡ ಪಾಟೀಲ ತಿಳಿಸಿದರು. 

2160 ಬೋಧಕರು

‘ಅನಕ್ಷರಸ್ಥರಿಗೆ ಅಕ್ಷರಾಭ್ಯಾಸ ಮಾಡಿಲು ಜಿಲ್ಲೆಯಲ್ಲಿ 2160 ಬೋಧಕರನ್ನು ನೇಮಿಸಿ, 2163 ಕಲಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಅಕ್ಟೋಬರ್‌ನಿಂದ ಮಾರ್ಚ್‌ವರೆಗಿನ 6 ತಿಂಗಳ ಅವಧಿಯಲ್ಲಿ ನಿತ್ಯ 2 ಗಂಟೆಯಂತೆ ಒಟ್ಟು 300 ಗಂಟೆಗಳ ಅವಧಿಯನ್ನು ಬೋಧನೆಗೆ ಮೀಸಲಿಡಲಾಗಿತ್ತು’ ಎಂದು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕ ಚಂದ್ರಕಾಂತ ಕುಸನೂರು ತಿಳಿಸಿದರು.     

‘ಬೋಧಕರಿಗೆ ವಿಶೇಷ ತರಬೇತಿ ಮತ್ತು ಅನಕ್ಷರಸ್ಥರಿಗೆ ಉಚಿತ ಪಠ್ಯಪುಸ್ತಕ, ನೋಟ್‌ಬುಕ್‌ ಸೇರಿದಂತೆ ಕಲಿಕಾ ಸಾಮಗ್ರಿ ನೀಡಲಾಗಿತ್ತು. ಆಯಾ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಲಿಕಾ ಕೇಂದ್ರ ತೆರೆದು, ಅಕ್ಷರಾಭ್ಯಾಸ ಮಾಡಿಸಲಾಗಿದೆ. ವಯಸ್ಕರು ಭಾಷೆ ಬಲ್ಲವರಾದ ಕಾರಣ ವಾಕ್ಯದಿಂದ ಪದ, ಪದದಿಂದ ಅಕ್ಷರ ಈ ಪದ್ಧತಿಯಲ್ಲಿ (ಐಪಿಸಿಎಲ್‌) ಬೋಧಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು