ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಕೋವಿಡ್-19 ಸೋಂಕಿತ ಹಣ್ಣಿನ ವ್ಯಾಪಾರಿ ಗುಣಮುಖ

ಒಟ್ಟು ಮೂವರು ಆಸ್ಪತ್ರೆಯಿಂದ ಬಿಡುಗಡೆ: ಮೂವರಿಗೆ ಚಿಕಿತ್ಸೆ ಮುಂದುವರಿಕೆ
Last Updated 27 ಮೇ 2020, 13:53 IST
ಅಕ್ಷರ ಗಾತ್ರ

ಹಾವೇರಿ: ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಶಿಗ್ಗಾವಿ ತಾಲ್ಲೂಕು ಅಂದಲಗಿ ಗ್ರಾಮದ ಮಾವಿನ ಹಣ್ಣಿನ ವ್ಯಾಪಾರಿ ಗುಣಮುಖರಾಗಿ ಬುಧವಾರ ನಗರದ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.

ಜಿಲ್ಲೆಯಲ್ಲಿ ಈವರೆಗೆ ಆರು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ ಮೂರು ಜನರು ಗುಣಮುಖರಾಗಿದ್ದಾರೆ. ಬಾಕಿ ಮೂರು ಜನರಿಗೆ ಚಿಕಿತ್ಸೆ ಮುಂದುವರಿದಿದೆ. ಸವಣೂರು ಮೂಲದ ಇಬ್ಬರು ಸಹೋದರರು (ಪಿ–639 ಮತ್ತು ಪಿ–672) ಈಗಾಗಲೇ ಬಿಡುಗಡೆ ಹೊಂದಿ, ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.

ಬುಧವಾರ ಬಿಡುಗಡೆಯಾದ P-853 ವ್ಯಕ್ತಿಯು ಲಾರಿಯಲ್ಲಿ ಮಾವಿನಹಣ್ಣನ್ನು ತುಂಬಿಕೊಂಡು ಮುಂಬೈ ಮಾರುಕಟ್ಟೆಗೆ ಹೋಗಿ ಬಂದ ಪ್ರವಾಸದ ಹಿನ್ನೆಲೆ ಹೊಂದಿದ್ದು, ತಪಾಸಣೆ ಸಂದರ್ಭದಲ್ಲಿ ಮೇ 11ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. 14 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರ ಅಂತಿಮ ವರದಿ ನೆಗಟಿವ್ ಬಂದ ಹಿನ್ನೆಲೆಯಲ್ಲಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಸೋಂಕಿನಿಂದ ಗುಣಮುಖನಾದ ಇವರಿಗೆ ಆಸ್ಪತ್ರೆಯ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಗುಲಾಬಿ ಹೂ ನೀಡಿ ಚಪ್ಪಾಳೆ ಮೂಲಕ ಶುಭ ಹಾರೈಸಿ ಮನೆಗೆ ಬೀಳ್ಕೊಟ್ಟರು. ನಿಯಮದಂತೆ ಮುಂದಿನ 14 ದಿವಸ ಗೃಹ ಪ್ರತ್ಯೇಕತೆಯಲ್ಲಿ ನಿಗಾವಹಿಸಲು ಸ್ಥಳೀಯ ವೈದ್ಯಕೀಯ ಸಿಬ್ಬಂದಿ ಕ್ರಮವಹಿಸಲಿದ್ದಾರೆ.

ಕೋವಿಡ್ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ವಿಶ್ವನಾಥ ಸಾಲಿಮಠ ಅವರು ಮಾಧ್ಯಮದವರಿಗೆ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಆರು ಜನರ ಪೈಕಿ ಮೂವರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದು ಸಂತಸ ತಂದಿದೆ, ಶೀಘ್ರದಲ್ಲಿಯೇ ಇನ್ನುಳಿದ ಮೂರು ಜನ ಗುಣಮುಖರಾಗುವ ಲಕ್ಷಣಗಳಿವೆ. ಇತ್ತೀಚಿನ ಕೊರೊನಾ ಸೋಂಕಿತರಿಗೆ ರೋಗದ ಲಕ್ಷಣಗಳು ಕಾಣುತ್ತಿಲ್ಲ ಎಂದು ತಿಳಿಸಿದರು.

ಆರ್.ಎಂ.ಒ ಡಾ.ಸುರೇಶ ಪೂಜಾರ ಮಾತನಾಡಿ, ಕೊರೊನಾ ಸೋಂಕು ಹರಡದಂತೆ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು. ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವುದು ಎಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಪ್ರಭಾರ ಶೂಶ್ರುಷಾಧಿಕಾರಿ ರಾಜೇಶ್ವರಿ ಭಟ್, ಶುಶ್ರೂಷಕಿಯರು ಮತ್ತು ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT