ಮಂಗಳವಾರ, ಡಿಸೆಂಬರ್ 1, 2020
17 °C
ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಳ್ಳಿ: ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ

ಹಾವೇರಿ: ಶ್ರವ್ಯ– ದೃಶ್ಯದಿಂದ ಕೋವಿಡ್‌ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಆಧುನಿಕ ತಂತ್ರಜ್ಞಾನದ ಬೃಹತ್ ಎಲ್.ಇ.ಡಿ. ಪರದೆ ಬಳಸಿ ವಾಹನಗಳ ಮೂಲಕ ಜಿಲ್ಲೆಯ ಆಯ್ದ 180 ಹಳ್ಳಿಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಕೋವಿಡ್-19 ವೈರಾಣು ತಡೆಗೆ ‘ಶ್ರವ್ಯ-ದೃಶ್ಯ’ದ ಮೂಲಕ ಜಾಗೃತಿ ಮುನ್ನೆಚ್ಚರಿಕೆ ಕಾರ್ಯಕ್ರಮದ ಎಲ್.ಇ.ಡಿ. ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಚಾಲನೆ ನೀಡಿದರು.

ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶನಿವಾರ ಎಲ್.ಇ.ಡಿ. ವಾಹನಕ್ಕೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಪಿ.ಎಸ್.ಹಾವನೂರ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಜಿಲ್ಲಾ ಆಸ್ಪತ್ರೆ ವಿವಿಧ ವೈದ್ಯರು, ಸಿಬ್ಬಂದಿ, ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂದೇಶ: ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಅವರು ಮಾತನಾಡಿ, ‘ಕೋವಿಡ್ ಕುರಿತಂತೆ ಸಾರ್ವಜನಿಕರು ಹೆಚ್ಚು ಜಾಗೃತಿ ವಹಿಸಬೇಕು. ಹಬ್ಬದ ಸರಣಿ ಹಾಗೂ ಚಳಿಗಾಲದ ಸಂದರ್ಭದಲ್ಲಿ ಕೋವಿಡ್ ವೈರಾಣು ಹೆಚ್ಚು ಅಪಾಯಕಾರಿಯಾಗಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು, ಕಾಲಕಾಲಕ್ಕೆ ಕೈ ತೊಳೆದುಕೊಳ್ಳಬೇಕು ಎಂದರು.

ಸ್ಯಾನಿಟೈಸರ್ ಬಳಸಬೇಕು. ಕೋವಿಡ್ ವೈರಾಣುವಿಗೆ ಲಸಿಕೆ ಬರುವವರೆಗೂ ಮುಂಜಾಗ್ರತಾ ಕ್ರಮಗಳೇ ಪರಿಹಾರವಾಗಿದ್ದು, ಗರಿಷ್ಠ ಎಚ್ಚರಿಕೆಯಿಂದ ಕೋವಿಡ್ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿಕೊಂಡರು.

180 ಗ್ರಾಮಗಳಲ್ಲಿ ಪ್ರಚಾರ: ನ.14ರಿಂದ ಜಿಲ್ಲೆಯ ಆಯ್ದ 180 ಗ್ರಾಮಗಳಲ್ಲಿ ಪ್ರತಿ ದಿನ 10 ಹಳ್ಳಿಗಳಂತೆ ಎರಡು ಬೃಹತ್ ಎಲ್.ಇ.ಡಿ. ವಾಹನಗಳು ಸಂಚರಿಸಿ ಅಂತರ, ಮಾಸ್ಕ್‌ ಜಾಗೃತಿ, ನಿಯಮಿತವಾಗಿ ಕೈತೊಳೆಯುವುದು, ಸ್ಯಾನಿಟೈಸರ್ ಬಳಕೆ ಸೇರಿದಂತೆ ಕೋವಿಡ್-19 ವೈರಾಣುವಿನಿಂದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಸಾರ ಮಾಡಲಿವೆ.

ಔಷಧ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಹಾವೇರಿ: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ ಉದ್ಯಾನದಲ್ಲಿ ಔಷಧೀಯ ಹಾಗೂ ಹೂವಿನ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ದಾಸವಾಳ ಸಸಿಯನ್ನು ನೆಡುವ ಮೂಲಕ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಚಾಲನೆ ನೀಡಿದರು.

ಶನಿವಾರ ಮುಂಜಾನೆ ಜಿಲ್ಲಾ ಆಸ್ಪತ್ರೆ ಮುಂಭಾಗದ ಉದ್ಯಾನದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ಅವರು ಸಸಿಗಳನ್ನು ನೆಟ್ಟು ನೀರುಣಿಸಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಎಸ್.ಹಾವನೂರ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಡಾ.ದಾಸರ, ವಿವಿಧ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು