ಹಾವೇರಿ ಜಿಲ್ಲೆಯಲ್ಲಿ ಮೊದಲ ಕೋವಿಡ್-19 ಪತ್ತೆ

ಹಾವೇರಿ: ‘ಹಸಿರು ವಲಯ’ ಹಾವೇರಿ ಜಿಲ್ಲೆಯಲ್ಲಿ ಮೊದಲ ಕೋವಿಡ್–19 ಪ್ರಕರಣ ಸವಣೂರಿನಲ್ಲಿ ಪತ್ತೆಯಾಗುವ ಮೂಲಕ ಜನರಿಗೆ ಆತಂಕ ಉಂಟು ಮಾಡಿದೆ.
ಮುಂಬೈನಿಂದ ಲಾರಿಯ ಮೂಲಕ ಸವಣೂರಿಗೆ ಬಂದಿದ್ದ ಮೂವರ ಪೈಕಿ ಒಬ್ಬನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಉಳಿದ ಇಬ್ಬರು ವ್ಯಕ್ತಿಗಳ ಲ್ಯಾಬ್ ಪರೀಕ್ಷೆಯ ವರದಿ ನಿರೀಕ್ಷೆಯಲ್ಲಿರುವುದಾಗಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೋಮವಾರ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಸವಣೂರ ಪಟ್ಟಣದ 32 ವರ್ಷದ ವ್ಯಕ್ತಿಗೆ (P-639) ಕೋವಿಡ್–19 ದೃಢಪಟ್ಟಿದೆ. ಈತನ ಅಣ್ಣ 40 ವರ್ಷದ ವ್ಯಕ್ತಿಯ ಮೊದಲ ಲ್ಯಾಬ್ ವರದಿ ಪಾಸಿಟಿವ್ ಬಂದಿದ್ದರೂ ನಿಯಮಾನುಸಾರ ಖಚಿತತೆಗಾಗಿ ಮತ್ತೊಮ್ಮೆ ಗಂಟಲು ದ್ರವವನ್ನು ಸಂಗ್ರಹಿಸಿ ಮರು ಪರೀಕ್ಷೆಗಾಗಿ ಲ್ಯಾಬ್‍ಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
P-639ರ ಸೋಂಕಿತ ವ್ಯಕ್ತಿ ಹಾಗೂ ಅವನ ಜೊತೆ ಅವರ ಅಣ್ಣ ಹಾಗೂ ಅಣ್ಣನ ಮಗ (19) ನವಿಮುಂಬೈ ಪ್ರದೇಶದಲ್ಲಿ ಗೌಂಡಿ ವೃತ್ತಿಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಮುಂಬೈನಿಂದ ಲಾರಿಯ ಮೂಲಕ ಪ್ರಯಾಣ ಬೆಳೆಸಿ ಏ.28ರ ರಾತ್ರಿ 11 ಗಂಟೆಗೆ ಸವಣೂರಿಗೆ ಬಂದು ನೇರವಾಗಿ ಮನೆಗೆ ತೆರಳಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಇವರನ್ನು ಆಸ್ಪತ್ರೆಗೆ ಕರೆತಂದು ಗಂಟಲು ದ್ರವವನ್ನು ಲ್ಯಾಬ್‌ಗೆ ಕಳುಹಿಸಲಾಗಿತ್ತು. ಮೇ 3ರಂದು ರಾತ್ರಿ ಒಬ್ಬ ವ್ಯಕ್ತಿಗೆ ಕೋವಿಡ್–19 ದೃಢಪಟ್ಟಿದೆ. ಇವರ ಸಂಪರ್ಕ ವಿವರ ಹಾಗೂ ಇವರನ್ನು ಕರೆತಂದ ಲಾರಿ ಚಾಲಕನ ಸಂಪರ್ಕ ವಿವರಗಳನ್ನು ಪತ್ತೆಹಚ್ಚುವ ಕಾರ್ಯ ಪೊಲೀಸ್ ಇಲಾಖೆ ಕೈಗೊಂಡಿದೆ ಎಂದು ತಿಳಿಸಿದರು.
35 ಮಂದಿಗೆ ಕ್ವಾರಂಟೈನ್
ಸೋಂಕಿತನ ಕುಟುಂಬ ಹಾಗೂ ಅವನ ಸ್ನೇಹಿತರು, ಅವನಿಗೆ ಚಿಕಿತ್ಸೆ ನೀಡಿದ ವೈದ್ಯರ ತಂಡ ಸೇರಿ 21 ಜನರನ್ನು ಪ್ರಾಥಮಿಕ ಸಂಪರ್ಕ ಹೊಂದಿದವರೆಂದು ಗುರುತಿಸಲಾಗಿದೆ. ಈ ಎಲ್ಲರನ್ನೂ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಇಡಲಾಗಿದೆ. ನಿತ್ಯ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಹಾಗೂ ಸೋಂಕಿತನ ಜೊತೆ ದ್ವಿತೀಯ ಹಂತದ ಸಂಪರ್ಕ ಹೊಂದಿದ 14 ಜನರನ್ನು ಪತ್ತೆ ಹಚ್ಚಲಾಗಿದೆ. ಇವರನ್ನು ಸಹ ಗೃಹ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.
ಸೀಲ್‌ಡೌನ್
ಸೋಂಕಿತನು ವಾಸಿಸುವ ಮನೆ ಸುತ್ತಲಿನ ಸವಣೂರಿನ ಎರಡು ಬಡಾವಣೆಗಳನ್ನು ‘ಕಂಟೈನ್‍ಮೆಂಟ್ ವಲಯ’ ಎಂದು ಘೋಷಿಸಿ ಸೀಲ್‍ಡೌಲ್ ಮಾಡಲಾಗಿದೆ. ಈ ಬಡಾವಣೆಯಲ್ಲಿ 394 ವಾಸದ ಮನೆಗಳಿದ್ದು 1789 ಜನಸಂಖ್ಯೆ ಹೊಂದಿದೆ. ಈ ಪ್ರದೇಶದಲ್ಲಿ ಒಳಬರುವ ಹಾಗೂ ಹೊರಹೋಗುವ ಒಂದು ಮಾರ್ಗವನ್ನು ತೆರೆಯಲಾಗಿದೆ. ಸೋಂಕಿತ ಪ್ರದೇಶದ ಐದು ಕಿ.ಮೀ. ವ್ಯಾಪ್ತಿಯನ್ನು ‘ಬಫರ್ ಜೋನ್’ ಎಂದು ಗುರುತಿಸಿ ಮಂತ್ರೋಡಿ, ಹುರುಳಿಕೊಪ್ಪಿ, ಚಿಲ್ಲೂರಬಡ್ನಿ, ತಗ್ಗೀಹಳ್ಳಿ ಆವರಣದಲ್ಲಿ ಬ್ಯಾರಿಕೇಡ್ ಹಾಕಿ ಜನರ ಓಡಾಟವನ್ನು ನಿರ್ಭಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಂಟೈನ್‍ಮೆಂಟ್ ಜೋನ್ ಇನ್ಸಡೆಂಟಲ್ ಕಮಾಂಡರ್ ಆಗಿ ಸವಣೂರ ತಹಶೀಲ್ದಾರ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಇವರ ಆದೇಶದ ಹೊರತು ಬೇರೆಯವರು ಈ ಪ್ರದೇಶಕ್ಕೆ ಪ್ರವೇಶಿಸುವಂತಿಲ್ಲ ಹಾಗೂ ಹೊರ ಹೋಗುವಂತಿಲ್ಲ. ಇಲ್ಲಿಯ ನಿವಾಸಿಗಳಿಗೆ ದಿನನಿತ್ಯದ ಎಲ್ಲ ವಸ್ತುಗಳನ್ನು ಹಾಗೂ ವೈದ್ಯಕೀಯ ಅವಶ್ಯಗಳನ್ನು ಪೂರೈಸಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದರು.
ಕೋವಿಡ್–19 ಆಸ್ಪತ್ರೆ
ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಒಂದೊಂದು ಫೀವರ್ ಕ್ಲಿನಿಕ್ ಸ್ಥಾಪಿಸಲಾಗಿದೆ. ಜಿಲ್ಲೆಯ ಏಳು ತಾಲ್ಲೂಕುಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಹಾವೇರಿ ಜಿಲ್ಲಾ ಆಸ್ಪತ್ರೆಯನ್ನು ‘ಕೋವಿಡ್-19 ಆಸ್ಪತ್ರೆ’ ಎಂದು ನಿಗದಿಪಡಿಸಲಾಗಿದೆ. ನಗರದ ಸಿಂದಗಿ ಶಾಂತವೀರೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜನ್ನು ಹೊರ ರೋಗಿಗಳ ಚಿಕಿತ್ಸೆಗೆ ನಿಗದಿಪಡಿಸಲಾಗಿದೆ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.