ಸೋಮವಾರ, ನವೆಂಬರ್ 29, 2021
20 °C
ಸಾರ್ವಜನಿಕ ಸ್ಥಳಗಳಲ್ಲಿ ವಿಘ್ನೇಶ್ವರ ಪ್ರತಿಷ್ಠಾಪನೆಗೆ ನಿರ್ಬಂಧ: ಸಂಕಷ್ಟಕ್ಕೆ ಸಿಲುಕಿದ ಮೂರ್ತಿ ತಯಾರಕರು

ಗಣೇಶೋತ್ಸವದ ಮೇಲೆ ಕೊರೊನಾ ಕರಿನೆರಳು: ಸಂಕಷ್ಟಕ್ಕೆ ಸಿಲುಕಿದ ಮೂರ್ತಿ ತಯಾರಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕಳೆದ ವರ್ಷ ಗಣೇಶ ಹಬ್ಬದ ಮೇಲೆ ಕೊರೊನಾ ಕರಿನೆರಳು ಕವಿದಿತ್ತು. ಈ ಬಾರಿ ಕೂಡ ಗಣೇಶೋತ್ಸವ ಸಂಭ್ರಮಕ್ಕೆ ಕೊರೊನಾ ತಣ್ಣೀರು ಎರಚಿದೆ. ಮೂರ್ತಿ ತಯಾರಿಸುವ ಕಲಾವಿದರು, ಕಾರ್ಮಿಕರು ಮತ್ತು ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಸೆ.10ರಂದು ಗಣೇಶ ಚತುರ್ಥಿಯನ್ನು ಸರಳ ರೀತಿಯಲ್ಲಿ ದೇವಸ್ಥಾನದೊಳಗೆ ಮತ್ತು ಮನೆಗಳಲ್ಲಿ ಆಚರಿಸಬೇಕು. ಇದನ್ನು ಹೊರತುಪಡಿಸಿ, ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ, ಹೊರಾಂಗಣಗಳಲ್ಲಿ ಚಪ್ಪರ, ಪೆಂಡಾಲ್‌, ಶಾಮಿಯಾನ ವೇದಿಕೆಗಳನ್ನು ನಿರ್ಮಿಸಿ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಂತಿಲ್ಲ. ಗಣೇಶ ಮೂರ್ತಿಗಳ ಮೆರವಣಿಗೆಯನ್ನೂ ಮಾಡುವಂತಿಲ್ಲ ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಈ ಆದೇಶವು ಶ್ಯಾಮಿಯಾನ, ಹೂವಿನ ಅಲಂಕಾರ, ವಾದ್ಯ ವೃಂದ, ಜನಪದ ಕಲಾವಿದರು, ಸಂಗೀತ ಕಲಾವಿದರು ಸೇರಿದಂತೆ ಅನೇಕ ವರ್ಗದ ಕಾರ್ಮಿಕರು ಮತ್ತು ಕಲಾವಿದರಿಗೆ ಸಂಕಷ್ಟ ತಂದೊಡ್ಡಿದೆ. ಬಟ್ಟೆ, ಪಟಾಕಿ, ಲೈಟಿಂಗ್‌ ಮತ್ತು ಆಲಂಕಾರಿಕ ವಸ್ತುಗಳ ವ್ಯಾಪಾರಿಗಳು ಕೂಡ ನಷ್ಟ ಅನುಭವಿಸುವಂತಾಗಿದೆ. ವಿಘ್ನಗಳನ್ನು ನಿವಾರಿಸುವ ವಿಘ್ನೇಶ್ವರನ ಹಬ್ಬಕ್ಕೆ ಹತ್ತಾರು ವಿಘ್ನಗಳು ಎರಡು ವರ್ಷಗಳಿಂದ ಎದುರಾಗುತ್ತಿವೆ. 

ಲಕ್ಷಾಂತರ ರೂಪಾಯಿ ಬಂಡವಾಳ

ಬ್ಯಾಡಗಿ: ಕೊರೊನಾ ಸೋಂಕು ಕಡಿಮೆಯಾಗಿದೆ ಎನ್ನುವ ಉದ್ದೇಶದಿಂದ ಪ್ರಸಕ್ತ 200ಕ್ಕೂ ಹೆಚ್ಚು ಗಣೇಶ ಮೂರ್ತಿ ತಯಾರಿಸಿದ್ದೇನೆ. ಈ ಪೈಕಿ 20ಕ್ಕೂ ಹೆಚ್ಚು ದೊಡ್ಡ ಮೂರ್ತಿಗಳಿದ್ದು, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಲಾಗಿದೆ. ಆದರೆ, ಸರ್ಕಾರ ಪ್ರಸಕ್ತ ಸಾರ್ವಜನಿಕ ಗಣೇಶೋತ್ಸವಕ್ಕೆ ನಿಷೇಧ ಹೇರಿದೆ. ಇದರಿಂದ ನಮಗೆಲ್ಲ ಸಂಕಷ್ಟ ಎದುರಾಗಿದೆ ಮೂರ್ತಿ ತಯಾರಿಸುವ ಕಲಾವಿದ ಜಯಣ್ಣ ಬಣಗಾರ ಹಾಗೂ ಮಲ್ಲೇಶಪ್ಪ ದೇವರಗುಡ್ಡ ಆತಂಕ ವ್ಯಕ್ತಪಡಿಸಿದರು.

ಮೂರ್ತಿ ತಯಾರಕರ ಬದುಕು ಬೀದಿಗೆ

ರಾಣೆಬೆನ್ನೂರು: ಗಣೇಶ ಮೂರ್ತಿ ತಯಾರಿಕೆ ನಂಬಿಕೊಂಡು ವರ್ಷವಿಡೀ ಮನೆ ಮಂದಿಗೆಲ್ಲ ಕೈತುಂಬ ಕೆಲಸ ಸಿಗುತ್ತಿತ್ತು. ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪನೆ ನಿಷೇಧಿಸಿದ್ದರಿಂದ ದೊಡ್ಡ ದೊಡ್ಡ ಮೂರ್ತಿ ತಯಾರಿಸಿಲ್ಲ. ಚಿಕ್ಕ ಚಿಕ್ಕ ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ ಎನ್ನುತ್ತಾರೆ ಮಾರುತಿ ನಗರದ ಮೂರ್ತಿ ತಯಾರಕ ಬಸವಣ್ಣೆಪ್ಪ ವಿರುಪಾಕ್ಷಪ್ಪ ಅಟವಾಳಗಿ ಹಾಗೂ ಕುರುಬಗೇರಿಯ ಬಸವರಾಜ ಹೊಸಮಠ.

ಅವಕಾಶದ ನಿರೀಕ್ಷೆಯಲ್ಲಿ...

ಹಿರೇಕೆರೂರು: ಕೊನೆಯ ಕ್ಷಣದಲ್ಲಿ ಸರ್ಕಾರ ಅವಕಾಶ ನೀಡಬಹುದು ಎಂದು ಮೂರ್ತಿಕಾರರು, ವ್ಯಾಪಾರಿಗಳು ಇನ್ನೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸಾರ್ವಜನಿಕ ಗಣೇಶ ಮೂರ್ತಿ ತಯಾರಿಸಲು ಇಷ್ಟೊತ್ತಿಗೆ ಎಲ್ಲರೂ ಮುಂಗಡ ನೀಡುತ್ತಿದ್ದರು. ಈ ಬಾರಿ ಮುಂದೆ ಬರುತ್ತಿಲ್ಲ. ಕೊರೊನಾ ಪರಿಣಾಮ ಜೀವನ ನಡೆಸುವುದೇ ಕಷ್ಟಕರವಾಗಿದೆ. ಒಂದಿಷ್ಟು ಆಸರೆಯಾಗಬಹುದು ಎಂದುಕೊಂಡಿದ್ದ ಗಣೇಶನ ಮೂರ್ತಿ ತಯಾರಿಕೆಗೆ ಸರ್ಕಾರದ ಆದೇಶದಿಂದ ವಿಘ್ನ ಎದುರಾಗಿದೆ ಎಂದು ಪಟ್ಟಣದ ಮೂರ್ತಿಕಾರರಾದ ನಿಂಗಾಚಾರ್‌ ಮಾಯಾಚಾರಿ ಬೇಸರ ವ್ಯಕ್ತಪಡಿಸಿದರು.

ಸಾಲ ಮಾಡಿ ಮೂರ್ತಿ ತಯಾರಿಕೆ

ಶಿಗ್ಗಾವಿ: ಮೂರು ಸಾವಿರದಷ್ಟು ಗಣೇಶ ವಿಗ್ರಹಗಳನ್ನು ತಯಾರಿಸಲಾಗಿದೆ. ಅವುಗಳಿಗಾಗಿ ಸುಮಾರು 4ರಿಂದ 5 ಲಕ್ಷ ಸಾಲ ಮಾಡಿದ್ದೇನೆ. ಸಾಲ ಮಾಡಿ ಹಾಕಿದ ಬಂಡವಾಳವನ್ನು ಗಣೇಶ ವಿಗ್ರಹ ಮಾರಿದ ನಂತರ ತೀರಿಸುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಪ್ರತಿ ವರ್ಷ ಕನಿಷ್ಠ ನಾಲ್ಕು ಲಕ್ಷ ಲಾಭ ಪಡೆಯುತ್ತಿದ್ದೆ. ಆದರೆ ಈ ವರ್ಷ ಹಾಕಿದ ಬಂಡವಾಳವೂ ಬಾರದಂತಾಗಿದೆ ಎಂದು ಶಿಗ್ಗಾವಿ ಗಣೇಶ ವಿಗ್ರಹ ತಯಾರಿಕ ಬಸವರಾಜ ಕುಂಬಾರ ಅಳಲು ತೋಡಿಕೊಂಡರು.

ಎರಡು ವರ್ಷಗಳಿಂದ ಕೊರೊನಾ ಮಾರ್ಗಸೂಚಿ ಅನುಸರಿಸುವಂತೆ ಸರ್ಕಾರದ ಆದೇಶದಿಂದ ಆರ್ಥಿಕ ಮಟ್ಟ ಕುಗ್ಗಿ ಹೋಗಿದೆ. ಹೀಗಾದರೆ ಬದುಕು ಸಾಗಿಸುವುದು ಹೇಗೆ ಎಂಬುದು ತಿಳಿಯದಾಗಿದೆ ಎಂದು ಪೆಂಡಾಲ್ ಹಾಕುವ ಚನ್ನುಕುಮಾರ ದೇಸಾಯಿ ಆತಂಕ ವ್ಯಕ್ತಪಡಿಸಿದರು.

ವ್ಯಾಪಾರಸ್ಥರ ಬದುಕು ಅತಂತ್ರ

ರಟ್ಟೀಹಳ್ಳಿ: ಕೊರೊನಾದಿಂದಾಗಿ ಒಂದೆಡೆ ಸಾರ್ವಜನಿಕರು ಸಂಭ್ರಮಿಸುವಂತಿಲ್ಲ. ಇನ್ನೊಂದೆಡೆ ವ್ಯಾಪಾರಸ್ಥರ ಬದುಕು ಅತಂತ್ರವಾಗಿರುವುದಂತೂ ಸತ್ಯ. 

‘25 ವರ್ಷಗಳಿಂದ ಗಣೇಶಮೂರ್ತಿಯನ್ನು ಮಾಡುತ್ತೇನೆ. ಸಣ್ಣ ಗಣಪತಿ ಸುಮಾರು 150 ಹಾಗೂ 13 ದೊಡ್ಡ ಗಣಪತಿಗಳನ್ನು ಪ್ರತಿ ವರ್ಷ ಮಾಡುತ್ತೇನೆ. ಸಣ್ಣ ಗಣಪತಿಗೆ ₹400ರಿಂದ ₹500 ದರದಲ್ಲಿ ಮಾರಾಟ ಮಾಡಿದರೆ, ದೊಡ್ಡಗಣಪತಿಯನ್ನು ₹12 ಸಾವಿರದಿಂದ ₹15 ಸಾವಿರದವರೆಗೆ ಮಾರಾಟ ಮಾಡುತ್ತೇನೆ. ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ದೊಡ್ಡ ಗಣಪತಿಗೆ ಯಾವುದೇ ಬೇಡಿಕೆಗಳು ಬರುತ್ತಿಲ್ಲ ಎನ್ನುತ್ತಾರೆ ರಟ್ಟೀಹಳ್ಳಿ ಕೋಟೆಯ ಗಣಪತಿ ಮೂರ್ತಿ ತಯಾರಕ ನಾಗರಾಜ ಮಾಯಾಚಾರಿ.

ಮಣ್ಣಿನ ಬೆಲೆಯೂ ದುಬಾರಿ

ಹಾನಗಲ್: ಪಿಒಪಿ ಗಣೇಶ ಮೂರ್ತಿಗಳ ನಿಷೇಧದಿಂದ ತತ್ತರಿಸಿದ್ದ ವಹಿವಾಟು, ಈಗ ಎರಡು ವರ್ಷಗಳಿಂದ ಕೊರೊನಾ ಭೀತಿಗೆ ನಲುಗಿದೆ. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ತಡೆ ಬಿದ್ದ ಪರಿಣಾಮ ಮೂರ್ತಿ ತಯಾರಕರಿಗೆ ನಷ್ಟವಾಗುತ್ತಿದೆ.

ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಗೆ ಅಗತ್ಯದ ಮಣ್ಣು ಮೊದಲಿನಂತೆ ಈಗ ಸಿಗುತ್ತಿಲ್ಲ. ಪಿಒಪಿ ಮೂರ್ತಿಗಳ ನಿಷೇಧದ ಬಳಿಕ ಸಾಂಪ್ರದಾಯಿಕ ಮಣ್ಣಿನ ಗಣೇಶನಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಆದರೆ ಇದಕ್ಕೆ ಬೇಕಾದ ಮಣ್ಣಿನ ಬೆಲೆಯಲ್ಲೂ ಹೆಚ್ಚಳವಾಗಿದೆ.

‘ಕಳೆದ ವರ್ಷದ ಬೇಡಿಕೆಯನ್ನು ಗಮನಿಸಿ ಈ ಬಾರಿ ಪಟ್ಟಣದಲ್ಲಿನ ಗಣೇಶ ಮೂರ್ತಿ ತಯಾರಕರು ಮನೆಯಲ್ಲಿ ಪ್ರತಿಷ್ಠಾಪಿಸುವ ಸಣ್ಣ ಗಾತ್ರದ ಮೂರ್ತಿಗಳ ರಚನೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ’ ಎಂದು ಗಣೇಶ ಮೂರ್ತಿ ತಯಾರಕ ಪ್ರದೀಪಕುಮಾರ ಹೇಳಿದರು.

‘ಕಲೆಗೆ ಬೆಲೆ ನೀಡಲಿ’

ಸವಣೂರ: ಕೊರೊನಾ ನಿರ್ಬಂಧದ ಹಿನ್ನೆಲೆಯಲ್ಲಿ ಈ ಬಾರಿ ಶೇ 40ರಷ್ಟು ಗಣೇಶ ಮೂರ್ತಿಗಳನ್ನು ತಯಾರಿಸಿದ್ದೇವೆ. ನಿರೀಕ್ಷಿತ ಪ್ರಮಾಣದಲ್ಲಿ ಮೂರ್ತಿಗಳ ವ್ಯಾಪಾರವಾಗುತ್ತಿಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಸರ್ಕಾರ ಕಲಾವಿದರ ಕಲೆಗೆ ಬೆಲೆ ನೀಡಿ, ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು. ನಮ್ಮ ಜೀವನ ನಿರ್ವಹಣೆಗೆ ನೆರವಾಗಬೇಕು ಎಂದು ಸವಣೂರ ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ ಗಣೇಶ ವಿಗ್ರಹ ತಯಾರಕ ಪೂರ್ವಾಚಾರಿ ಬಡಿಗೇರ ಒತ್ತಾಯಿಸಿದ್ದಾರೆ.

* ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಪ್ರತಿ ಸಮಿತಿಗಳು ಕೊರೊನಾ ನಿಯಮ ಪಾಲಿಸಬೇಕು.

– ಮಂಜುನಾಥ ಮುನ್ನೋಳಿ, ಶಿಗ್ಗಾವಿ ತಹಶೀಲ್ದಾರ್

* ಕೋವಿಡ್ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಕಲಾವಿದರಿಗೆ ಸರ್ಕಾರ ಘೋಷಿಸಿದ ಸಹಾಯಧನ ಸಿಕ್ಕಿಲ್ಲ. ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ.

– ಬಸವರಾಜ ಕುಂಬಾರ, ಗಣೇಶ ಮೂರ್ತಿ ತಯಾರಕ, ಶಿಗ್ಗಾವಿ

* ಎರಡು ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಶುಭ ಸಮಾರಂಭ, ಗಣೇಶೋತ್ಸವ ನಡೆಯದಿರುವುದರಿಂದ ತೀವ್ರ ನಷ್ಟ ಅನುಭವಿಸುತ್ತಿದ್ದೇವೆ.

– ರವಿ, ಶ್ಯಾಮಿಯಾನ ವರ್ತಕ, ಬ್ಯಾಡಗಿ

* ಲಾಕ್‌ಡೌನ್‌ ಹಾನಿಯಿಂದ ವರ್ತಕರು ಇನ್ನೂ ಚೇತರಿಸಿಕೊಂಡಿಲ್ಲ. ಮಳಿಗೆ ಬಾಡಿಗೆ, ವಿದ್ಯುತ್‌ ಬಿಲ್‌, ಕಾರ್ಮಿಕರ ಪಗಾರ ಕೊಡುವುದು ಕಷ್ಟವಾಗಿದೆ.

– ಮೋಹನ ಬೆನ್ನೂರ, ಬಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ, ರಾಣೆಬೆನ್ನೂರು

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಮುಕ್ತೇಶ್ವರ ಕೂರಗುಂದಮಠ, ಪ್ರಮೀಳಾ ಹುನಗುಂದ, ಎಂ.ವಿ. ಗಾಡದ, ಕೆ.ಎಚ್‌. ನಾಯಕ, ಮಾರುತಿ ಪೇಟಕರ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು